Asianet Suvarna News Asianet Suvarna News

BSNL: ಹಳ್ಳಿಗರಿಗೆ ವರವಾದ 4ಜಿ ಸ್ಯಾಚುರೇಶನ್‌ ಪ್ರಾಜೆಕ್ಟ್

ಬಿಎಸ್‌ಎನ್‌ಎಲ್‌ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೊಬೈಲ್‌ ಗೋಪುರಗಳಿಗೆ ಜಾಗ ನೀಡಲು ರಾಜ್ಯ ಕ್ಯಾಬಿನೆಟ್‌ ಹಸಿರು ನಿಶಾನೆ ಸೂಚಿಸಿದೆ. ಇದರಿಂದಾಗಿ ಜಿಲ್ಲೆಯ 196 ಮೊಬೈಲ್‌ ಸಂಪರ್ಕ ರಹಿತ ಕುಗ್ರಾಮಗಳು ಮತ್ತು ಸುತ್ತಮುತ್ತಲಿನ ಹಳ್ಳಿಗರ ಮುಖದಲ್ಲಿ ಮಂದಹಾಸ ಮೂಡಿದೆ.

BSNL 4G saturation boon for villagers at shirasi uttarakannada rav
Author
First Published Mar 18, 2023, 12:21 PM IST

ಮಂಜುನಾಥ ಸಾಯೀಮನೆ

ಶಿರಸಿ (ಮಾ.18) : ಬಿಎಸ್‌ಎನ್‌ಎಲ್‌ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೊಬೈಲ್‌ ಗೋಪುರಗಳಿಗೆ ಜಾಗ ನೀಡಲು ರಾಜ್ಯ ಕ್ಯಾಬಿನೆಟ್‌ ಹಸಿರು ನಿಶಾನೆ ಸೂಚಿಸಿದೆ. ಇದರಿಂದಾಗಿ ಜಿಲ್ಲೆಯ 196 ಮೊಬೈಲ್‌ ಸಂಪರ್ಕ ರಹಿತ ಕುಗ್ರಾಮಗಳು ಮತ್ತು ಸುತ್ತಮುತ್ತಲಿನ ಹಳ್ಳಿಗರ ಮುಖದಲ್ಲಿ ಮಂದಹಾಸ ಮೂಡಿದೆ.

ಹೌದು, ಉತ್ತರಕನ್ನಡ(Uttara kannada) ಜಿಲ್ಲೆಯ ಗ್ರಾಮೀಣ ಜನತೆಯ ಪಾಲಿಗೆ ಮೊಬೈಲ್‌ ಸಂಪರ್ಕ(Mobile connect) ಕೇವಲ ಕನಸಿನ ಮಾತಾಗಿತ್ತು. ಎತ್ತರದ ಗುಡ್ಡ ಬೆಟ್ಟಗಳಿಂದ ಆವೃತವಾದ ಹಳ್ಳಿಗಳಿಗೆ ಮೊಬೈಲ್‌ ತರಂಗಾಂತರಗಳು ತಲುಪುತ್ತಲೇ ಇರಲಿಲ್ಲ. ಇಲ್ಲಿಯ ಕಡಿಮೆ ಜನಸಂಖ್ಯೆಯ ಕಾರಣ ಆದಾಯದ ಕೊರತೆಯ ನೆಪವೊಡ್ಡಿ ಖಾಸಗಿಯವರೂ ಮುಖ ಮಾಡುತ್ತಿರಲಿಲ್ಲ.

ಏರ್ ಟೆಲ್, ಜಿಯೋಗೆ BSNL ಟಕ್ಕರ್; 150 ದಿನಗಳ ಪ್ಲ್ಯಾನ್ ಕೇವಲ 397ರೂ.ಗೆ!

ಇದೇ ಮೊದಲ ಬಾರಿ ಬಿಎಸ್‌ಎನ್‌ಎಲ್‌(BSNL) ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಿಗೂ ಮೊಬೈಲ್‌ ಸಂಪರ್ಕ ಕಲ್ಪಿಸುವ ನೀಲನಕ್ಷೆ ಸಿದ್ಧಪಡಿಸಿದೆ. ಗ್ರಾಮಗಳ ಎತ್ತರದ ಜಾಗ ಗುರುತಿಸಿ ಅಲ್ಲಿ ಮೊಬೈಲ್‌ ಗೋಪುರ(Mobile tower) ನಿರ್ಮಿಸಲು ಯೋಜನೆ ಹಾಕಿಕೊಂಡಿದೆ.

ಇದುವರೆಗೂ ಮೊಬೈಲ್‌ ಗೋಪುರ ಸ್ಥಾಪನೆಗೆ ಜಿಲ್ಲೆಯಲ್ಲಿ ಜಾಗದ ಕೊರತೆ ಕಾಡುತ್ತಿತ್ತು. ಮೊಬೈಲ್‌ ಗೋಪುರ ನಿರ್ಮಾಣಕ್ಕೆ ಮಾಲ್ಕಿ ಜಾಗವೇ ಅಗತ್ಯವಾಗಿತ್ತು. ಶೇ.80ರಷ್ಟುಅರಣ್ಯ ಭೂಮಿಯೇ ಆವೃತವಾಗಿರುವ ಜಿಲ್ಲೆಯಲ್ಲಿ ಮಾಲ್ಕಿ ಜಾಗ ಎಂದರೆ ಕೃಷಿ ಭೂಮಿ ಮಾತ್ರವಾಗಿತ್ತು. ಈ ಭೂಮಿ ತಗ್ಗಿನ ಪ್ರದೇಶದಲ್ಲಿರುವ ಕಾರಣ ಮೊಬೈಲ್‌ ಗೋಪುರ ಸ್ಥಾಪಿಸಿದರೂ ಜಾಸ್ತಿ ವ್ಯಾಪ್ತಿ ಪ್ರದೇಶ ಹೊಂದದೇ ಸಮಸ್ಯೆ ಉಂಟಾಗುತ್ತಿತ್ತು.

ವರವಾಯ್ತು 4ಜಿ ಸ್ಯಾಚುರೇಶನ್‌:

ದೇಶದ ಮೂಲೆ ಮೂಲೆಯಲ್ಲೂ ಸಂಪರ್ಕ ಮತ್ತು ಇಂಟರ್ನೆಟ್‌(Internat) ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 4ಜಿ ಸ್ಯಾಚುರೇಶನ್‌ ಯೋಜನೆ(4G Saturation Plan) ಹಮ್ಮಿಕೊಂಡಿದೆ. ದೂರ ಸಂಪರ್ಕದ ಮೂಲಭೂತ ಸೌಲಭ್ಯ ಕಲ್ಪಿಸಲು ಕೇಂದ್ರ ನೀಡುವ ಯುನಿವರ್ಸಲ್‌ ಸರ್ವಿಸ್‌ ಒಬ್ಲಿಗೇಶನ್‌ ಫಂಡ(Universal Service Obligation Fund)ನ್ನು ಈ ಬಾರಿ 4ಜಿ ಸೇವೆ ವಿಸ್ತರಣೆಗೆ ಮೀಸಲಿಟ್ಟಿದೆ.

ಪ್ರತಿ ಜಿಲ್ಲೆಯಲ್ಲೂ ಇದುವರೆಗೂ ಯಾವುದೇ ಮೊಬೈಲ್‌ ಸಂಪರ್ಕ ಇರದ ಹಳ್ಳಿಗಳನ್ನು ಗುರುತಿಸಿ ಅಲ್ಲಿ ಮೊಬೈಲ್‌ ಗೋಪುರ ಸ್ಥಾಪಿಸಲು ನಿರ್ಧರಿಸಿದೆ. ಗೋಪುರ ಸ್ಥಾಪನೆಗೆ ಮಾಲ್ಕಿ ಜಾಗವೇ ಆಗಬೇಕು ಎಂಬ ನಿಯಮ ಸಡಿಲಿಸಿ ಸರ್ಕಾರಿ ಅಥವಾ ಅರಣ್ಯ ಪ್ರದೇಶದಲ್ಲಾದರೂ ಅನುಮತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಇದರ ಅನ್ವಯ ಬಿಎಸ್‌ಎನ್‌ಎಲ್‌ ಜಾಸ್ತಿ ಕವರೇಜ್‌ ಆಗಬಹುದಾದ ಸ್ಥಳಗಳನ್ನು ಗುರುತಿಸಿ ಮಂಜೂರಿಗಾಗಿ ಕಂದಾಯ ಇಲಾಖೆಯನ್ನು ಕೇಳಿತ್ತು. ಜಾಗದ ಜಿಪಿಎಸ್‌ ಮಾಡಿದ ಕಂದಾಯ ಇಲಾಖೆ ಮಂಜೂರಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿಕೊಟ್ಟಿತ್ತು. ಕಳೆದ ವಾರ ರಾಜ್ಯ ಸರ್ಕಾರ ಗುರುತಿಸಲಾದ ಜಾಗದಲ್ಲಿ 1500ರಿಂದ 2 ಸಾವಿರ ಅಡಿ ಭೂಮಿಯನ್ನು ಬಿಎಸ್‌ಎನ್‌ಎಲ್‌ಗೆ ಉಚಿತವಾಗಿ ನೀಡಲು ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಜಟಿಲವಾಗಿದ್ದ ಉತ್ತರ ಕನ್ನಡದ 196 ಮೊಬೈಲ್‌ ಗೊಪುರಗಳ ನಿರ್ಮಾಣ ಸುಲಭವಾದಂತಾಗಿದೆ.

500 ದಿನಗಳ ಗಡುವು:

ಮೊಬೈಲ್‌ ಗೋಪುರಗಳನ್ನು ನಿರ್ಮಿಸಿ ಸೇವೆಗೆ ಚಾಲನೆ ನೀಡಲು ಹಣ ನೀಡುವ ಯುನಿವರ್ಸಲ್‌ ಸರ್ವಿಸ್‌ ಒಬ್ಲಿಗೇಶನ್‌ ಫಂಡ್‌ (ಯುಎಸ್‌ಒಎಫ್‌) ಸದನದಲ್ಲಿ ಅನುಮೋದನೆಗೊಂಡ ದಿನಾಂಕದಿಂದ 500 ದಿನಗಳ ಗಡುವು ನೀಡಿದೆ. ಕಳೆದ ಜುಲೈ 27 ರಂದೇ ಸದನದಲ್ಲಿ 4ಜಿ ಸ್ಯಾಚುರೇಶನ್‌ಗೆ ಅನುಮೋದನೆ ಸಿಕ್ಕಿದ್ದು, ಈಗಾಗಲೇ 7 ತಿಂಗಳುಗಳು ಕಳೆದುಹೋಗಿವೆ.

ಇನ್ನು ಮುಂದೆ ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ ಅಂತ್ಯದ ಒಳಗೆ ಜಿಲ್ಲೆಯ 196 ಹೊಸ ಮೊಬೈಲ್‌ ಗೋಪುರಗಳು ಕುಗ್ರಾಮಗಳಿಗೂ ಸಂಪರ್ಕ ಕಲ್ಪಿಸಲಿವೆ. ಜಿಲ್ಲೆಯ ಮೊಬೈಲ್‌ಗಳಿಗೆ ಇದುವರೆಗೂ ಶಾಪವಾಗಿದ್ದ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಸಾಲುಗಳಿಗೆ ಮುಕ್ತಿ ಸಿಗಲಿದೆ.

 

ಬಿಎಸ್‌ಎನ್ಎಲ್‌ಗೆ ಗುಡ್ ಬೈ ಹೇಳಿದ ರಾಜ್ಯ ಪೊಲೀಸ್ ಇಲಾಖೆ: ಜಿಯೋಗೆ ಫೋರ್ಟ್ ಆಗಲು ಸರ್ಕಾರದ ಆದೇಶ

4ಜಿ ಸ್ಯಾಚುರೇಶನ್‌ ಅಡಿಯಲ್ಲಿ ಹೊಸ ಮೊಬೈಲ್‌ ಗೋಪುರ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿ ಕೇಂದ್ರ ಕಚೇರಿಗೆ ಸಲ್ಲಿಸಿದ್ದೇವೆ. ಡಿಸೆಂಬರ್‌ ಅಂತ್ಯದವರೆಗೆ ಸಮಯ ಇರುವುದರಿಂದ ಅಷ್ಟರೊಳಗೆ ನಿರ್ಮಾಣ ಪೂರ್ಣಗೊಳ್ಳಬಹುದು.

-ಎಂ.ಎಸ್‌. ಹಿರೇಮಠ, ಎಜಿಎಂ, ಬಿಎಸ್‌ಎನ್‌ಎಲ…, ಕಾರವಾರ

Follow Us:
Download App:
  • android
  • ios