ನವದೆಹಲಿ(ಅ.15): ಭಾರತದಲ್ಲಿ ಆಹಾರ ಪೂರೈಕೆ ಆ್ಯಪ್‌ ಬಿಡುಗಡೆ ಮಾಡಲು ಅಮೆಜಾನ್ ಸಿದ್ಧತೆ ನಡೆಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಸ್ವಿಗ್ಗಿ, ಜೊಮ್ಯಾಟೋ ಹಾಗೂ ಇತರ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಕಂಪನಿಗಳಲ್ಲಿ ಆತಂಕ ಮನೆ ಮಾಡಿದೆ.

ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್'ಗಳೊಂದಿಗೆ ಅಮೆಜಾನ್ ಈ ದೀಪಾವಳಿಯಲ್ಲಿ ಆಹಾರ ಪೂರೈಕೆ ಆ್ಯಪ್‌ನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಸುದ್ದಿ ಸದ್ಯ ಅಸ್ತಿತ್ವದಲ್ಲಿರುವ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಗಳಿಗೆ ನಡುಕ ಹುಟ್ಟಿಸಿದೆ.

ಅಮೆಜಾನ್ ತನ್ನ ವಿಸ್ತಾರವಾದ ಚಿಲ್ಲರೆ ಆಹಾರ ಪೂರೈಕೆ ಸಂಪರ್ಕ ಜಾಲವನ್ನು ಪ್ರಾಯೋಗಿಕ ಮಾದರಿಯಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹೊಟೇಲ್ ಮಾಲಿಕರೊಂದಿಗೆ ಅಮೆಜಾನ್ ಮಾತುಕತೆ ಆರಂಭಿಸಿದ್ದು, ಅಮೆಜಾನ್ ಮೂಲಕ ರೆಸ್ಟೋರೆಂಟ್ ಮಾಲಿಕರು ಶೇ.6ರಿಂದ ಶೇ.10ರಷ್ಟು ಕಮಿಷನ್ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೊ ಮತ್ತು ಉಬರ್ ಈಟ್ಸ್ ಶೇ.20ರಿಂದ ಶೇ.30ರಷ್ಟು ಕಮಿಷನ್ ಹೇರುತ್ತಿವೆ.