ಭಾರತದ ಅತಿದೊಡ್ಡ ಇ-ವಾಣಿಜ್ಯ ಮಳಿಗೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ದಸರಾ ಪ್ರಯುಕ್ತ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಮತ್ತು ‘ಬಿಗ್‌ ಬಿಲಿಯನ್‌ ಡೇ’ ಹೆಸರಿನಲ್ಲಿ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 4ರ ವರೆಗೆ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಿದ್ದವು.

ದೇಶದಲ್ಲಿ ಸದ್ಯ ಆರ್ಥಿಕ ಹಿಂಜರಿತ ಇದ್ದರೂ ಈ ಬಿಗ್‌ ಬಿಲಿಯನ್‌ ಡೇನಲ್ಲಿ ದಾಖಲೆ ಮಟ್ಟದಲ್ಲಿ ಸರಕುಗಳು ಖರೀದಿಯಾಗಿವೆ. ಈ ಹಿನ್ನೆಲೆಯಲ್ಲಿ ಇ-ಕಾಮರ್ಸ್‌ ಮಳಿಗೆಗಳಲ್ಲಿ ವ್ಯಾಪಾರವಾದ ವಸ್ತುಗಳ ಒಟ್ಟು ಮೌಲ್ಯ ಎಷ್ಟು, ಯಾವ ವಸ್ತುಗಳು ಹೆಚ್ಚು ಖರೀದಿಯಾಗಿವೆ, ಈ ಆಫರ್‌ನಿಂದ ಜನರಿಗೆಷ್ಟುಉಳಿತಾಯವಾಗಿದೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.

9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ: ನಿಮ್ಮ ಜೇಬು ಉಳಿತಾಯಕ್ಕೆ ಆರ್ ಬಿಐ ಆಧಾರ!

ಅಂದಾಜು 24,000 ಕೋಟಿ ಮೌಲ್ಯದ ವಸ್ತುಗಳ ಖರೀದಿ!

ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 4 ರ ವರೆಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎಲ್ಲಾ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದ್ದವು. ಆರ್ಥಿಕ ಹಿಂಜರಿತದಿಂದಾಗಿ ಬೇಡಿಕೆ ಕಡಿಮೆಯಾದ ಕಾರಣ ಎಲ್ಲಾ ಕಂಪನಿಗಳು ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದವು. 6 ದಿನಗಳ ಬಿಗ್‌ ಬಿಲಿಯನ್‌ ಡೇ ಆಫರ್‌ನಲ್ಲಿ ಒಟ್ಟು 24000 ಕೋಟಿ ರು. (3.7 ಬಿಲಿಯನ್‌ ಡಾಲರ್‌) ಮೌಲ್ಯದ ವಸ್ತುಗಳು ಖರೀದಿಯಾಗಿವೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಇ-ಶಾಪಿಂಗ್‌ ವೆಬ್‌ಸೈಟುಗಳು ಏರ್ಪಡಿಸಿದ್ದ ಬಿಗ್‌ ಬಿಲಿಯನ್‌ ಡೇಗೆ ಹೋಲಿಸಿದರೆ 30% ಹೆಚ್ಚು ಖರೀದಿಯಾಗಿದೆ. 3.2 ಕೋಟಿ ಆನ್‌ಲೈನ್‌ ಗ್ರಾಹಕರು ಈ ಬಿಗ್‌ ಬಿಲಿಯನ್‌ ಡೇ ಆಫರ್‌ನ ಪ್ರಯೋಜನ ಪಡೆದಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

1500 ಕೋಟಿ ರು. ಬಾಚಿತೇ ಒನ್‌ಪ್ಲಸ್‌?

ಗ್ರೇಟ್‌ ಇಂಡಿಯನ್‌ ಫೆಸ್ಟಿವಲ…ನಲ್ಲಿ ಚೀನಾ ಮೂಲದ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಹಾಗೂ ಒನ್‌ಪ್ಲಸ್‌ ಟೀವಿಗಳು ಭರ್ಜರಿ ಮಾರಾಟವಾಗಿವೆ. ಫೆಸ್ಟಿವಲ… ವಿಶೇಷ ಆಫರ್‌ ಆರಂಭವಾದ ಕೇವಲ ಎರಡೇ ದಿನಗಳಲ್ಲಿ ಅಮೆಜಾನ್‌ 500 ಕೋಟಿ ರು. ಮೌಲ್ಯದ ಒನ್‌ಪ್ಲಸ್‌ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಟ್ಟ37,999 ರು. ಬೆಲೆಯ ಒನ್‌ಪ್ಲಸ್‌ 7ಟಿ ಮೊಬೈಲ್‌ ಹಾಗೂ 69,900 ರು. ಮೌಲ್ಯದ ಒನ್‌ಪ್ಲಸ್‌ ಟೀವಿ 55 ಕ್ಯೂ1, ಪ್ರೀಮಿಯಂ ಸ್ಮಾರ್ಟ್‌ ಫೋನ್‌ ಮತ್ತು ಟೀವಿ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿವೆ.

ಹಲವು ಸೌಲಭ್ಯಗಳೊಂದಿಗೆ ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಯಾ’ ಹೊಸಹೆಜ್ಜೆ

ಇದು ಕೇವಲ ಎರಡು ದಿನದಲ್ಲಿ ಮಾರಾಟವಾದ ಒನ್‌ಪ್ಲಸ್‌ ಮೊಬೈಲ್‌ ಹಾಗೂ ಟೀವಿಗಳ ಮೌಲ್ಯ. ಆರು ದಿನಗಳಲ್ಲಿ ಒಂದೂವರೆ ಸಾವಿರ ಕೋಟಿ ರು. ಮೌಲ್ಯದ ಒನ್‌ಪ್ಲಸ್‌ ಉತ್ಪನ್ನಗಳು ಮಾರಾಟವಾಗಿರುವ ಸಾಧ್ಯತೆಯಿದೆ. ಹಾಗೆಯೇ ಅಮೆಜಾನ್‌ನಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳು, ಫ್ಲಿಪ್‌ಕಾರ್ಟ್‌ನಲ್ಲಿ ಫ್ಯಾಷನ್‌ಗೆ ಸಂಬಂಧಿಸಿದ ವಸ್ತುಗಳು ಹೆಚ್ಚು ಖರೀದಿಯಾಗಿವೆ ಎಂದು ಅಂದಾಜಿಸಲಾಗಿದೆ. ಕಡಿಮೆ ಬೆಲೆ ಮತ್ತು ವೇಗದ ಡೆಲಿವರಿಯನ್ನು ಪರಿಗಣಿಸಿ ಗ್ರಾಹಕರು ತಮಗೆ ಇಷ್ಟವಾದ ಇ-ಮಳಿಗೆ ಮೂಲಕ ಖರೀದಿ ಮಾಡಿದ್ದಾರೆ.

ಜನರು ಅತಿಹೆಚ್ಚು ಖರೀದಿಸಿದ್ದು ಏನನ್ನು?

ಒಟ್ಟು ಉತ್ಪನ್ನಗಳಲ್ಲಿ 55% ಮೊಬೈಲ್‌ ಕ್ಷೇತ್ರದ ಮೇಲೆಯೇ ಗ್ರಾಹಕರು ಹೆಚ್ಚು ಖರ್ಚು ಮಾಡಿದ್ದಾರೆ. ಕಳೆದ ವರ್ಷವೂ ಮೊಬೈಲ್‌ಗಳೇ ಹೆಚ್ಚು ಮಾರಾಟವಾಗಿದ್ದವು. ಬಿಗ್‌ ಬಿಲಿಯನ್‌ ಡೇ ಆಫರ್‌ ಆರಂಭಗೊಂಡ 36 ಗಂಟೆಗಳಲ್ಲಿ 750 ಕೋಟಿ ರು. ಮೌಲ್ಯದ ಸ್ಮಾರ್ಟ್‌ ಫೋನ್‌ಗಳನ್ನು ಅಮೆಜಾನ್‌ ಮಾರಾಟ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ ಖರೀದಿ 15 ಪಟ್ಟು ಹೆಚ್ಚಾಗಿದೆ. ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಆ್ಯಪಲ್‌, ಕ್ಸಿಯಾಮಿ, ವೀವೋ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಖರೀದಿಯಾಗಿವೆಯಂತೆ.

ಒನ್‌ಪ್ಲಸ್‌, ಸ್ಯಾಮ್‌ಸಂಗ್‌ ಫೋನ್‌ಗಳು ಕಳೆದ ವರ್ಷದ ಫೆಸ್ಟಿವಲ್‌ ಸೀಸನ್‌ಗಿಂತ 5 ಪಟ್ಟು ಹೆಚ್ಚು ಖರೀದಿಯಾಗಿವೆ. ಹಾಗೆಯೇ ಸ್ಯಾಮ್‌ಸಂಗ್‌ ಎ-ಸಿರೀಸ್‌ ಮತ್ತು ಸ್ಯಾಮ್‌ಸಂಗ್‌ ನೋಟ್‌-9ಗೆ ಹೆಚ್ಚು ಬೇಡಿಕೆ ಇದ್ದಿದ್ದು ಕಂಡುಬಂದಿದೆ. ಹಾಗೆಯೇ ಸಾಕಷ್ಟುಆ್ಯಪಲ್‌ ಐಫೋನ್‌ಗಳೂ ಖರೀದಿಯಾಗಿವೆ. ಲಾಜ್‌ರ್‍ ಅಪ್ಲೆಯನ್ಸ್‌ ಖರೀದಿ 8 ಪಟ್ಟು ಹೆಚ್ಚಾಗಿದೆ.

ಗೋದ್ರೇಜ್‌, ಎಲ್‌ಜಿ, ಸ್ಯಾಮ್‌ಸಂಗ್‌ ಬ್ರಾಂಡ್‌ಗಳು ಹೆಚ್ಚು ಬೇಡಿಕೆಯಲ್ಲಿದ್ದವು. ನೂತನ ಗ್ರಾಹಕರು ಫ್ಯಾಷನ್‌ ವಸ್ತುಗಳನ್ನೇ ಹೆಚ್ಚು ಖರೀದಿ ಮಾಡಿದ್ದಾರೆ. ಅದರಲ್ಲೂ ಶೂಗಳು ಹೆಚ್ಚು ಖರೀದಿಯಾಗಿವೆ. ಆಫರ್‌ ನೀಡಿದ ಒಂದೇ ದಿನದಲ್ಲಿ 10 ಲಕ್ಷ ಜೊತೆ ಶೂ ಖರೀದಿಯಾಗಿದ್ದವು.

50% ಹೊಸ ಗ್ರಾಹಕರು

ಆಯ್ಕೆ ಅನುಕೂಲತೆ ಮತ್ತು ಲಭ್ಯತೆಯಾಧಾರದಲ್ಲಿ ವಿವಿಧ ಇ-ವಾಣಿಜ್ಯತಾಣಗಳ ಮೂಲಕ ಜನರು ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 50% ನೂತನ ಗ್ರಾಹಕರು ಖರೀದಿಸಿದ್ದಾರಂತೆ. ಹಾಗೆಯೇ ಕಳೆದ ವರ್ಷಕ್ಕಿಂತ 50% ಹೆಚ್ಚು ಮಾರಾಟಗಾರರೂ ಫ್ಲಿಪ್‌ಕಾರ್ಟ್‌ನೊಂದಿಗೆ ಈ ಬಾರಿ ಕೈಜೋಡಿಸಿದ್ದರು ಎಂದು ಫ್ಲಿಪ್‌ ಕಾರ್ಟ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿಕೊಂಡಿದ್ದಾರೆ.

ವಹಿವಾಟು ಈ ಪರಿ ಹೆಚ್ಚಲು ಏನು ಕಾರಣ?

ಅಮೆಜಾನ್‌ನಲ್ಲಿ 99.4% ಪಿನ್‌ಕೋಡ್‌ ಬಳಸಿ ಆರ್ಡರ್‌ ಮಾಡಲಾಗಿತ್ತು ಎಂದು ಹೇಳಲಾಗಿದೆ. 15,000 ಪಿನ್‌ ಕೋಡ್‌ಗಳಿಂದ ಆರ್ಡರ್‌ ಮಾಡಿರುವ ಗ್ರಾಹಕರು ನಾನ್‌ ಮೆಟ್ರೋ ಸಿಟಿ ನಿವಾಸಿಗಳಾಗಿದ್ದಾರೆ. ಹಾಗೆಯೇ ಸಣ್ಣ ನಗರಗಳಿಂದ ಅಮೆಜಾನ್‌ಗೆ ಸೈನ್‌ ಅಪ್‌ ಆಗುವ ಜನರ ಸಂಖ್ಯೆ 69% ಹೆಚ್ಚಾಗಿದೆ. ನೂತನ ಗ್ರಾಹಕರಲ್ಲಿ 88% ಜನರು ಸಣ್ಣ ನಗರಗಳಲ್ಲಿ ವಾಸಿಸುತ್ತಿರುವವರು. ಅಂದರೆ ಈ ಬಾರಿ ಶಾಪಿಂಗ್‌ ಮಾಡುವ ಯುವಕರ ಸಂಖ್ಯೆ ಜಾಸ್ತಿಯಾಗಿರುವುದು ಹಾಗೂ ಸಣ್ಣ ನಗರಗಳಿಂದ ಹೆಚ್ಚೆಚ್ಚು ಜನರು ಇ-ಶಾಪಿಂಗ್‌ನತ್ತ ಒಲವು ತೋರಿರುವುದು ವಹಿವಾಟು ಹೆಚ್ಚಳವಾಗಲು ಕಾರಣ.

ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ 15 ಪಟ್ಟು ಹೆಚ್ಚಳ

50%- ಫ್ಲಿಪ್‌ಕಾರ್ಟ್‌ನ ಒಟ್ಟು ಗ್ರಾಹಕರಲ್ಲಿ 50% ಗ್ರಾಹಕರು ಹೊಸಬರು

ಪ್ರತಿ ನಿಮಿಷಕ್ಕೆ ಒಂದು ಟೀವಿ ಮಾರಾಟ

ಪ್ರತಿ ನಿಮಿಷಕ್ಕೆ 500 ಸೌಂದರ್ಯವರ್ಧಕಗಳು ಮಾರಾಟ

ಪ್ರತಿ ಒಂದು ಗಂಟೆಗೆ 1.2 ಲಕ್ಷ ಫ್ಯಾಷನ್‌ ಉತ್ಪನ್ನಗಳ ಖರೀದಿ

ಪ್ರತಿ ದಿನ 2.4 ಲಕ್ಷ ಹೆಡ್‌ಫೋನ್‌ಗಳ ಮಾರಾಟ

80,000 ಕೋಟಿ

ಗ್ರಾಹಕರಿಗೆ ಬಿಗ್‌ ಬಿಲಿಯನ್‌ ಡೇ ಆಫರ್‌ನಿಂದ ಇಷ್ಟುಹಣ ಉಳಿತಾಯವಾಗಿದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿಕೊಂಡಿದೆ. 

-