ನವದೆಹಲಿ[ಜು.09]: Zomato ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿರುವ ಟ್ವೀಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಈ ಟ್ವೀಟ್ ಓದಿದವರೆಲ್ಲರೂ ನಗು ತಡೆಯಲಾರದೆ, ಕಮೆಂಟ್‌ಗಳ ಹೊಳೆಯನ್ನೇ ಹರಿಸಿದ್ದಾರೆ. ಅಷ್ಟಕ್ಕೂ Zomato ಮಾಡಿದ ಟ್ವೀಟ್ ಏನು? ಇಲ್ಲಿದೆ ವಿವರ

ಬುಧವಾರದಂದು ಫುಡ್ ಡೆಲಿವರಿ ಆ್ಯಪ್ Zomato ಮಜಾದಾಯಕ ಟ್ವೀಟ್ ಒಂದನ್ನು ಮಾಡುತ್ತಾ ತನ್ನ ಗ್ರಾಹಕರ ಬಳಿ 'ಗೆಳೆಯರೇ, ಕೆಲವೊಮ್ಮೆ ಮನೆ ಊಟವನ್ನೂ ಮಾಡಬೇಕು' ಎಂದಿತ್ತು. ಫುಡ್ ಡೆಲಿವರಿ ಸಂಸ್ಥೆಯೊಂದು ಇಂತಹ ಟ್ವೀಟ್ ಮಾಡಿರುವುದನ್ನು ಗಮನಿಸಿದ ಗ್ರಾಹಕರಿಗೆ ನಗು ತಡೆಯಲಾಗಲಿಲ್ಲ. ಇಷ್ಟೇ ಅಲ್ಲದೇ ಇತರ ಬ್ರ್ಯಾಂಡ್ ಗಳು ಕೂಡಾ ಟ್ವೀಟ್ ಕಾಪಿ ಮಾಡಿಕೊಂಡಿವೆ.

Zomato ಮಾಡಿದ ಈ ಟ್ವೀಟ್ ನ್ನು ಈವರೆಗೂ 19 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಇದರ ಬೆನ್ನಲ್ಲೇ YouTube India ಟ್ವೀಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮೆ ರಾತ್ರಿ ಮೂರು ಗಂಟೆಗೆ ಫೋನ್ ಬದಿಗಿಟ್ಟು ರಾತ್ರಿ 3 ಗಂಟೆಗೆ ಮಲಗಿಕೊಳ್ಳಬೇಕು' ಎಂದು ಟ್ವೀಟ್ ಮಾಡಿದೆ.

ಅತ್ತ Amazon Prime ಕೂಡಾ ಇಂತಹುದೇ ಟ್ವೀಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮೆ ಕೇಬಲ್ ಟಿವಿ ಆನ್ ಮಾಡಿ ಸಿನಿಮಾ ನೋಡಬೇಕು' ಎಂದಿದೆ.

ಇವೆಲ್ಲದ ನಡುವೆ ಹೋಟೆಲ್ ಹಾಗೂ ಟ್ರಾವೆಲ್ ಬುಕ್ಕಿಂಗ್ ವೆಬ್ ಸೈಟ್ Ixigo ಕೂಡಾ ಟ್ವೀಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮ ಮನೆಯಲ್ಲೂ ಉಳಿದುಕೊಳ್ಳಬೇಕು' ಎಂದಿದೆ.

MobiKwik ಕೂಡಾ ಇಂತಹುದೇ ಟ್ವೀಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮೆ ಸರತಿ ಸಾಲಿನಲ್ಲಿ ನಿಂತು ವಿದ್ಯುತ್ ಬಿಲ್ ಪಾವತಿಸಬೇಕು' ಎಂದಿದೆ.

ಮತ್ತೊಂದು ಫುಡ್ ಡೆಲಿವರಿ ಸಂಸ್ಥೆ Faasos ಕೂಡಾ ಟ್ವೀಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮೆ ನೀವೇ ತಿಂಡಿ ತಯಾರಿಸಬೇಕು' ಎಂದಿದೆ.

ಆದರೆ ತಾನು ಮಾಡಿದ ಟ್ವಿಟ್ ನಂತೆ ಹಲವು ಕಂಪೆನಿಗಳು ಟ್ವೀಟ್ ಮಾಡಿರುವುದನ್ನು ಗಮನಿಸಿದ Zomato ಸಂಸ್ಥೆ ಅಂತಿಮವಾಗಿ ಈ ಎಲ್ಲಾ ಟ್ವೀಟ್ ಗಳ ಸ್ಕ್ರೀನ್ ಶಾಟ್ ಪೋಸ್ಟ್ ಮಾಡುತ್ತಾ 'ಗೆಳೆಯರೇ, ಕೆಲವೊಮ್ಮೆ ನಿಮ್ಮದೇ ಆದ ಟ್ವೀಟ್ ಗಳನ್ನು ಮಾಡಬೇಕು' ಎಂದು ಎಪಿಕ್ ಟ್ವೀಟ್ ಮಾಡಿದೆ.