ನ್ಯೂಯಾರ್ಕ್[ಮೇ.30]: ವಿಶ್ವದ ಅತಿ ಶ್ರೀಮಂತ ಉದ್ಯಮಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರಿಂದ ಇತ್ತೀಚೆಗಷ್ಟೇ ವಿಚ್ಛೇದನ ಪಡೆದ ಮೆಕೆನ್ಜಿ ಬೆಜೋಸ್‌ ತಮ್ಮ ಒಟ್ಟು ಆಸ್ತಿಯ ಅರ್ಧದಷ್ಟು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಅಮೆಜಾನ್‌ನಲ್ಲಿ ಮೆಕೆನ್ಜಿ ಶೇ.4ರಷ್ಟುಷೇರು ಹೊಂದಿದ್ದು, ಇವುಗಳ ಮೌಲ್ಯ ಸುಮಾರು 2.51 ಲಕ್ಷ ಕೋಟಿ ರು. ಈ ಪೈಕಿ ಸುಮಾರು 1.20 ಲಕ್ಷ ಕೋಟಿ ರು.ಗಳನ್ನು ಬಿಲ್‌ಗೇಟ್ಸ್‌ ಸೇರಿದಂತೆ ಶ್ರೀಮಂತ ಉದ್ಯಮಿಗಳು ಸ್ಥಾಪಿಸಿರುವ ಗೀವಿಂಗ್‌ ಪ್ಲೆಡ್ಜ್‌ ಆಂದೋಲನಕ್ಕೆ ನೀಡುವುದಾಗಿ ಮೆಕೆನ್ಜಿ ಘೋಷಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮೆಕೆನ್ಜಿ ‘ನನ್ನ ಜೀವನ ನನಗೆ ಗಳಿಸಿಕೊಟ್ಟಿರುವ ಅಳತೆ ಮೀರಿದ ಹಣವನ್ನು ಹಂಚಿಕೆ ಮಾಡಬೇಕು ಎಂದುಕೊಂಡಿದ್ದೇನೆ. ಈ ದೊಡ್ಡ ಜವಾಬ್ದಾರಿ ನಿರ್ವಹಣೆಗಾಗಿ ಶ್ರಮ ಮತ್ತು ಸಮಯದ ಅಗತ್ಯವಿದೆ. ಆದರೆ, ಆ ಸಮಯಕ್ಕಾಗಿ ಕಾಯಲು ನಾನು ಸಿದ್ಧಳಿಲ್ಲ. ನಾನು ದಾನ-ಧರ್ಮದ ಕೆಲಸವು ಹೀಗೆಯೇ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ. ಈ ನಡುವೆ ಪತ್ನಿಯ ಈ ಕೆಲಸಕ್ಕೆ ಪ್ರತಿಕ್ರಿಯಿಸಿರುವ ಜೆಫ್‌ ಬೆಜೋಸ್‌ ‘ಅದ್ಭುತವಾದ ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರೀತಿಯ ಉತ್ತಮ ಕಾರ್ಯ. ಈ ಕಾರ್ಯಕ್ಕಾಗಿ ಆಕೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.