ಮುಂಬೈ(ಸೆ.20): ಆರ್ಥಿಕತೆಯ ಪುನಶ್ಚೇತನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಕಾರ್ಪೊರೇಟ್ ಟ್ಯಾಕ್ಸ್ ಪ್ರಮಾಣದಲ್ಲಿ ಗಣನೀಯ ಕಡಿತ ಮಾಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತೆರಿಗೆ ಕಡಿತದ ಘೋಷಣೆ ಮಾಡಿದ್ದಾರೆ.

ಈ ಮಧ್ಯೆ ಅತ್ತ ತೆರಿಗೆ ಕಡಿತದ ಘೋಷಣೆಯಾಗುತ್ತಿದ್ದಂತೇ, ಮುಂಬೈ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 1300 ಅಂಕಗಳಷ್ಟು ಏರಿಕೆಯಾಗಿದ್ದು, 38,100. 62 ಕ್ಕೆ ತಲುಪಿದೆ.

ಅದರಂತೆ ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 362.95 ಪಾಯಿಂಟ್‌ಗಳು ಅಥವಾ ಶೇ.3.39ರಷ್ಟು ಏರಿಕೆಯಾಗಿ 11,067.75 ರಲ್ಲಿ ವಹಿವಾಟು ನಡೆಸಿದೆ.

ಕೇಂದ್ರ ಸರ್ಕಾರದ ತೆರಿಗೆ ಕಡಿತದ ನಿರ್ಧಾರದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಲಾಭವಾಗಲಿದ್ದು, ಅದರಂತೆ ಷೇರು ಮಾರುಕಟ್ಟೆಯಲ್ಲೂ ಆಟೋಮೊಬೈಲ್ ಕ್ಷೇತ್ರದ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ.

ಮಾರುತಿ, ಎಂ ಅಂಡ್ ಎಂ, ಹೆಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಐಸಿಐಸಿಐ, ಬಜಾಜ್ ಅಟೋ ಕಂಪನಿಗಳ ಷೇರು ಬೆಲೆ ಶೇಕಡಾ 9ಕ್ಕೆ ಹೆಚ್ಚಿಗೆಯಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ 66 ಪೈಸೆ ಏರಿಕೆಯಾಗಿ ಪ್ರತಿ ಡಾಲರ್ ಎದುರು ರೂಪಾಯಿ ಬೆಲೆ 70 ರೂಪಾಯಿ 68 ಪೈಸೆ ನಿಗದಿಯಾಗಿದೆ.