Athvik ZOZO Connect: ಸಾಧನೆಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾನೆ 11 ವರ್ಷದ ಬಾಲಕ ಅಥ್ವಿಕ್. ಹೆಚ್ಚಿನ ಮಕ್ಕಳು ಓದು, ಆಟಗಳಲ್ಲಿ ಬ್ಯುಸಿಯಾಗಿರುವ ವಯಸ್ಸಿನಲ್ಲಿ, ಈತ ನಾವು ದಿನನಿತ್ಯ ಬಳಸುವ ವಿಸಿಟಿಂಗ್ ಕಾರ್ಡ್‌ಗಳಲ್ಲಿದ್ದ ಒಂದು ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಡಿಜಿಟಲ್ ರೂಪ ನೀಡಿದ್ದಾನೆ.
11 ವರ್ಷ ವಯಸ್ಸಿನಲ್ಲಿ ಹೆಚ್ಚಿನ ಮಕ್ಕಳು ಓದು, ಹೋಮ್‌ವರ್ಕ್ ಅಥವಾ ವಿಡಿಯೋ ಗೇಮ್ಸ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಅಥ್ವಿಕ್ ಕಥೆಯೇ ಬೇರೆ. 11ನೇ ವಯಸ್ಸಿನಲ್ಲೇ ಅಥ್ವಿಕ್ ಕಂಪನಿಯೊಂದನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರು ಇದನ್ನು ಯಾರದ್ದೋ ಒತ್ತಾಯಕ್ಕಾಗಲಿ ಅಥವಾ ಶಾಲೆಯ ಪ್ರಾಜೆಕ್ಟ್‌ಗಾಗಲಿ ಮಾಡಿದ್ದಲ್ಲ. ಬದಲಿಗೆ, ಹೆಚ್ಚಿನ ಜನರು ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸಿದ್ದ ಸಮಸ್ಯೆಯೊಂದನ್ನು ಅವರು ಗುರುತಿಸಿದರು. ಅವರ ಒಂದು ಐಡಿಯಾ ಕೇವಲ ಅವರ ಹಣೆಬರಹವನ್ನಷ್ಟೇ ಬದಲಾಯಿಸಲಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ಸೃಷ್ಟಿಸಿತು. ಅವರ ಕಥೆ ಕೇವಲ ಸಣ್ಣ ವಯಸ್ಸಿನ ಕಾರಣಕ್ಕಾಗಿ ಅಷ್ಟೇ ಚರ್ಚೆಯಲ್ಲಿಲ್ಲ, ಬದಲಿಗೆ ಯಶಸ್ವಿ ಉದ್ಯಮಿಯಾಗಲು ಎಂಜಿನಿಯರಿಂಗ್, ಎಂಬಿಎ ಅಥವಾ ವರ್ಷಗಟ್ಟಲೆಯ ಕಾರ್ಪೊರೇಟ್ ಅನುಭವದ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿರುವುದಕ್ಕಾಗಿ ಸುದ್ದಿಯಲ್ಲಿದೆ.
ಯಾವ ಕಂಪನಿಯ ಸಂಸ್ಥಾಪಕ ಇವರು?
ಇಂದು ಅಥ್ವಿಕ್ ZOZO Connect ಹೆಸರಿನ ಸ್ಟಾರ್ಟ್‌ಅಪ್‌ನ ಸಂಸ್ಥಾಪಕರಾಗಿದ್ದಾರೆ. ಇದರ ಮೌಲ್ಯ (Valuation) ಸುಮಾರು 25 ಕೋಟಿ ರೂಪಾಯಿ. ಈ ಸ್ಟಾರ್ಟ್‌ಅಪ್ ಸಾಂಪ್ರದಾಯಿಕ ಬಿಸಿನೆಸ್ ಕಾರ್ಡ್‌ಗಳನ್ನು (ವಿಸಿಟಿಂಗ್ ಕಾರ್ಡ್) ಹೊಸ ಮತ್ತು ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸುತ್ತಿದೆ. ಬನ್ನಿ, ಇವರ ಬಗ್ಗೆ ಮತ್ತಷ್ಟು ತಿಳಿಯೋಣ.
ಏನಿದು ಐಡಿಯಾ?
ಹೆಚ್ಚಿನ ಜನರು ಕಾಗದದ ವಿಸಿಟಿಂಗ್ ಕಾರ್ಡ್‌ಗಳನ್ನು ಸಾಮಾನ್ಯ ಎಂದು ಭಾವಿಸಿದರೆ, ಅಥ್ವಿಕ್ ಇದರ ಬಗ್ಗೆ ಪ್ರಶ್ನೆ ಮಾಡಿದರು. ಯಾರಾದರೂ ನಿಮಗೆ ವಿಸಿಟಿಂಗ್ ಕಾರ್ಡ್ ನೀಡಿದಾಗ, ಅದು ಯಾವಾಗಲೂ ನಿಮ್ಮ ಬಳಿಯೇ ಇರುತ್ತದೆಯೇ? ಎಂದು ಯೋಚಿಸಿದರು. ಹಲವು ಬಾರಿ ಅದು ಕಳೆದುಹೋಗುತ್ತದೆ, ಯಾವುದೋ ಡ್ರಾಯರ್‌ನಲ್ಲಿ ಬಿದ್ದಿರುತ್ತದೆ ಅಥವಾ ಬೇಡವೆಂದು ಕಸಕ್ಕೆ ಎಸೆಯಲಾಗುತ್ತದೆ. ಇದೇ ಪ್ರಶ್ನೆ ಅವರಿಗೆ ಒಂದು ಹೊಸ ಐಡಿಯಾ ನೀಡಿತು.
ಸಾಮಾನ್ಯವಾಗಿ ಸಾಂಪ್ರದಾಯಿಕ ಬಿಸಿನೆಸ್ ಕಾರ್ಡ್‌ಗಳನ್ನು ದೊಡ್ಡ ಮಟ್ಟದಲ್ಲಿ ಮುದ್ರಿಸಲಾಗುತ್ತದೆ. ಫೋನ್ ನಂಬರ್ ಅಥವಾ ಹುದ್ದೆ ಬದಲಾದ ತಕ್ಷಣ ಅವುಗಳನ್ನು ಮತ್ತೆ ಮುದ್ರಿಸಬೇಕಾಗುತ್ತದೆ. ಇದರಿಂದ ವೆಚ್ಚವೂ ಹೆಚ್ಚಾಗುತ್ತದೆ ಮತ್ತು ಕಾಗದದ ಬಳಕೆಯಿಂದ ಪರಿಸರದ ಮೇಲೂ ಪರಿಣಾಮ ಬೀರುತ್ತದೆ.
25 ಕೋಟಿ ರೂಪಾಯಿ ಮೌಲ್ಯ
ಹೀಗೆ ಒಂದು ಸಣ್ಣ ಐಡಿಯಾದಿಂದ ಆರಂಭವಾದ ಈ ಪ್ರಯಾಣ ಇಂದು 25 ಕೋಟಿ ರೂಪಾಯಿ ಮೌಲ್ಯದ ಸ್ಟಾರ್ಟ್‌ಅಪ್ ಹಂತಕ್ಕೆ ಬಂದು ತಲುಪಿದೆ.
ಕಂಪನಿ ಏನು ಮಾಡುತ್ತದೆ?
ZOZO Connect ಈಗ ಕೇವಲ ಸಂಪರ್ಕ ಮಾಹಿತಿ (Contact Details) ಹಂಚಿಕೊಳ್ಳುವ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ತಮ್ಮ ಡಿಜಿಟಲ್ ಪ್ರೊಫೈಲ್ ರಚಿಸಬಹುದು, ಮಾಹಿತಿಯನ್ನು ಯಾವಾಗ ಬೇಕಾದರೂ ಅಪ್‌ಡೇಟ್ ಮಾಡಬಹುದು ಮತ್ತು ಸಿಆರ್‌ಎಂ (CRM) ಪ್ಲಾಟ್‌ಫಾರ್ಮ್ ಹಾಗೂ ಇತರೆ ಬಿಸಿನೆಸ್ ಟೂಲ್‌ಗಳೊಂದಿಗೆ ಲಿಂಕ್ ಮಾಡಬಹುದು. ಇದಕ್ಕಾಗಿ ಒಂದು ಪರ್ಸನಲೈಸ್ಡ್ ಡ್ಯಾಶ್‌ಬೋರ್ಡ್ ಕೂಡ ಸಿಗುತ್ತದೆ.
ಈ ಪ್ಲಾಟ್‌ಫಾರ್ಮ್ NFC ತಂತ್ರಜ್ಞಾನ, QR ಕೋಡ್ ಮತ್ತು ಡೈರೆಕ್ಟ್ ಲಿಂಕ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವ ಸೌಲಭ್ಯವನ್ನು ನೀಡುತ್ತದೆ. ಇದರಿಂದ ಉದ್ಯಮಿಗಳು, ವಿದ್ಯಾರ್ಥಿಗಳು, ಫ್ರೀಲಾನ್ಸರ್‌ಗಳು ಮತ್ತು ಕಾರ್ಪೊರೇಟ್ ವೃತ್ತಿಪರರ ನೆಟ್‌ವರ್ಕಿಂಗ್ ಪ್ರಕ್ರಿಯೆ ಮೊದಲಿಗಿಂತಲೂ ಅತ್ಯಂತ ಸುಲಭ ಮತ್ತು ವೇಗವಾಗಿದೆ.
ಯಶಸ್ಸಿನ ಮಂತ್ರ
ಅಥ್ವಿಕ್ ಅವರ ಕಥೆ ಕೇವಲ ಒಂದು ಸ್ಟಾರ್ಟ್‌ಅಪ್‌ಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಇದು ಇಂದಿನ ಯುವಕರಿಗೆ ದೊಡ್ಡ ಪಾಠವನ್ನು ಕಲಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಓದುತ್ತಾರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ ಅಥವಾ ವಿದೇಶದಲ್ಲಿ ಓದಲು 25 ರಿಂದ 40 ಲಕ್ಷ ರೂಪಾಯಿಗಳವರೆಗೆ ಎಜುಕೇಶನ್ ಲೋನ್ ಪಡೆಯುತ್ತಾರೆ. ಆದರೆ, 11 ವರ್ಷದ ಅಥ್ವಿಕ್ ಮಾತ್ರ ಬೇರೆ ಹಾದಿ ಆಯ್ದುಕೊಂಡರು. ತಮ್ಮ ಓದು ಮುಗಿಯುವವರೆಗೆ ಕಾಯಲಿಲ್ಲ, ಬದಲಿಗೆ ತಮ್ಮ ಸುತ್ತಮುತ್ತಲಿದ್ದ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಂಡರು.
ಅವರ ಕಥೆಯು ವಯಸ್ಸು ಅಥವಾ ಡಿಗ್ರಿಯನ್ನು ಹೋಲಿಕೆ ಮಾಡುವುದರ ಬಗ್ಗೆ ಅಲ್ಲ. ಇಂದಿನ ದಿನಗಳಲ್ಲಿ ಉತ್ತಮ ಆಲೋಚನೆ ಮತ್ತು ಹೊಸ ಐಡಿಯಾ ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಯಶಸ್ಸು ಪಡೆಯಬಹುದು ಎಂಬುದನ್ನು ಇದು ತೋರಿಸುತ್ತದೆ. ತಂತ್ರಜ್ಞಾನ, ಆನ್‌ಲೈನ್ ಲರ್ನಿಂಗ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಇನ್ನೋವೇಶನ್ (ಆವಿಷ್ಕಾರ) ಕೇವಲ ಡಿಗ್ರಿ ಅಥವಾ ಸುದೀರ್ಘ ಅನುಭವದ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿವೆ.
ವಿದ್ಯಾರ್ಥಿಗಳಿಗೆ ಸಂದೇಶ
ವಿದ್ಯಾರ್ಥಿಗಳಿಗೆ ಅಥ್ವಿಕ್ ಅವರ ಯಶಸ್ಸು ನೀಡುವ ಸಂದೇಶವೇನೆಂದರೆ—ಕುತೂಹಲ ಮತ್ತು ಹೊಸದನ್ನು ಮಾಡುವ ಆಲೋಚನೆ ಹಲವು ಬಾರಿ ಡಿಗ್ರಿಗಿಂತಲೂ ಮುಖ್ಯವಾಗುತ್ತದೆ.
ವೃತ್ತಿಪರರಿಗೆ ಸಂದೇಶ
ವೃತ್ತಿಪರರಿಗೆ ಅವರ ಕಥೆಯು, ದಿನನಿತ್ಯದ ಸಣ್ಣ ಸಮಸ್ಯೆಯೂ ಸಹ ಒಂದು ದೊಡ್ಡ ಮತ್ತು ಯಶಸ್ವಿ ಬಿಸಿನೆಸ್‌ನ ಆರಂಭಕ್ಕೆ ನಾಂದಿ ಹಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.
ಕೇವಲ 11 ವರ್ಷದ ವಯಸ್ಸಿನಲ್ಲಿ ಅಥ್ವಿಕ್ ಇಂತಹದೊಂದು ಸ್ಟಾರ್ಟ್‌ಅಪ್ ಕಟ್ಟಿ ನಿಲ್ಲಿಸಿದ್ದಾರೆ, ಇದು ಡಿಜಿಟಲ್ ಯುಗದಲ್ಲಿ ನೆಟ್‌ವರ್ಕಿಂಗ್ ಮತ್ತು ಬಿಸಿನೆಸ್ ಕಾರ್ಡ್‌ಗಳ ಬಳಕೆಯ ಬಗ್ಗೆ ಜನರು ಹೊಸದಾಗಿ ಯೋಚಿಸುವಂತೆ ಮಾಡಿದೆ.
