ಜನನಿಬಿಡ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಸುಲಭವಾಗಿ ಗಸ್ತು ತಿರುಗಲು ಶಕೀಲ್ ಅಖ್ತರ್ ಎಂಬ ವಿದ್ಯಾರ್ಥಿ 'Trike 2 pi' ಎಂಬ ಮೂರು ಚಕ್ರಗಳ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸಿದ್ದಾರೆ. ಈ ವಾಹನವು ಜೇಮ್ಸ್ ಡೈಸನ್ ಪ್ರಶಸ್ತಿಯಲ್ಲಿ ರಾಷ್ಟ್ರೀಯ ರನ್ನರ್‌ಅಪ್ ಆಗಿದೆ. ಪೊಲೀಸರ ಗಸ್ತಿಗೂ ಬಳಕೆಯಾಗಲಿದೆ.

ಮೆಟ್ರೋ, ಬಸ್‌ ನಿಲ್ದಾಣದಂತಹ ಜನನಿಬಿಡ ಸ್ಥಳಗಳಲ್ಲಿ ದಿನವಿಡೀ ಅತ್ತಿಂದಿತ್ತ ಓಡಾಡುವ ಭದ್ರತಾ ಸಿಬ್ಬಂದಿ ಓಡಾಡುತ್ತ ಸಾರ್ವಜನಿಕರಿಗೆ ಭದ್ರತೆ ನೀಡುತ್ತಾರೆ. ಆದರೆ ದೊಡ್ಡದಾದ ವಿಶಾಲವಾದ ಸ್ಥಳದಲ್ಲಿ ಸಿಬ್ಬಂದಿ ಎಲ್ಲಡೆ ಓಡಾಡುವುದು ಕಷ್ಟ. ಈ ಸಮಸ್ಯೆ ಅರಿತು ಭಾರತೀಯ ವಿದ್ಯಾರ್ಥಿಯೊಬ್ಬ ಭದ್ರತಾ ಸಿಬ್ಬಂದಿಗಾಗಿಯೇ ವಿಶೇಷವಾದಂತಹ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿದ್ದಾರೆ.

ದೊಡ್ಡ ಪ್ರಮಾಣದ ಜನಸಂದಣಿ ಇರುವ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಸುಲಭವಾಗಿ ಗಸ್ತು ತಿರುಗಲು ಸಹಾಯ ಮಾಡುವ ಸಣ್ಣ ಗಾತ್ರದ ಎಲೆಕ್ಟ್ರಿಕ್ ಗಸ್ತು ವಾಹನಕ್ಕೆ Trike 2 pi ಹೆಸರಿಟ್ಟಿದ್ದು. ಇದನ್ನು ಅಭಿವೃದ್ಧಿಪಡಿಸಿರುವ ಶಕೀಲ್ ಅಖ್ತರ್ ಎಸ್. ಅವರು James Dyson Award 2026 – India ಸ್ಪರ್ಧೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ರನ್ನರ್‌ಅಪ್ ಆಗಿ ಆಯ್ಕೆಯಾಗಿದ್ದಾರೆ.

ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆ ಬಗ್ಗೆ ಅಖ್ತರ್‌ಗೆ ಅತೀವ ಆಸಕ್ತಿ

ಸದ್ಯ ಅವರು ಕೊಯಮತ್ತೂರಿನ ಕುಮಾರಗುರು ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ (KCT) ಇಂಡಸ್ಟ್ರಿಯಲ್ ಆಟೋಮೇಷನ್ ಮತ್ತು ರೋಬೋಟಿಕ್ಸ್‌ನಲ್ಲಿ ME ವ್ಯಾಸಂಗ ಮಾಡುತ್ತಿದ್ದಾರೆ. KCT, ಅಣ್ಣಾ ವಿಶ್ವವಿದ್ಯಾಲಯದ ಅಧೀನದಲ್ಲಿದೆ. ಪರಿಣಾಮಕಾರಿ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಗಳನ್ನು ಸುಧಾರಿಸುವ, ಅಭಿವೃದ್ಧಿಪಡಿಸುವಲ್ಲಿ ಅತೀವ ಆಸಕ್ತಿ ಹೊಂದಿರುವುದಾಗಿ ಅಖ್ತರ್ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ತಿಳಿಸಿದ್ದಾರೆ.

ಅಖ್ತರ್ ಅವರು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಈ ಯೋಜನೆ ಆರಂಭವಾಗಿತ್ತು. ಆಗ ಅವರು 150 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಆಗಾಗ್ಗೆ ಸಂಚರಿಸುತ್ತಿದ್ದ ಸಂಶೋಧನಾ ತಂಡದ ಭಾಗವಾಗಿದ್ದರು. ಆ ವೇಳೆ ದೂರದವರೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ, ರೈಲು ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಗಳು ಮತ್ತು ವಿಶ್ವವಿದ್ಯಾಲಯಗಳಂತಹ ಇನ್ನೂ ದೊಡ್ಡ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ದೀರ್ಘಕಾಲ ಗಸ್ತು ತಿರುಗುವಾಗ ಎದುರಿಸುವ ಸಮಸ್ಯೆಗಳ ಬಗ್ಗೆ ಅವರಿಗೆ ಯೋಚನೆ ಬಂತು. ಅಷ್ಟು ದೊಡ್ಡ ಆವರಣದಲ್ಲಿ ಅದ್ಹೇಗೆ ದಿನವಿಡಿ ಕಾಲ್ನಡಿಗೆಯಲ್ಲಿ ಸುತ್ತುತ್ತಾರೆ? ಅವರಿಗಾಗಿ ಒಂದು ವಾಹನ ಏಕೆ ತಯಾರಿಸಬಾರದು ಎಂಬ ಯೋಚನೆಯೇ ಇಂದು trike 2 pi ಅಭಿವೃದ್ಧಿಪಡಿಸಿರುವುದಕ್ಕೆ ಕಾರಣ. ಈ ಸಮಸ್ಯೆಗೆ ಈಗಾಗಲೇ ಇರುವ ವಾಹನವನ್ನು ಬದಲಾಯಿಸುವ ಬದಲು, ತಂಡವು ಭದ್ರತಾ ಗಸ್ತಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ವಾಹನವನ್ನು ಅಭಿವೃದ್ಧಿಪಡಿಸಿತು.

Trike 2 pi ಹೇಗೆ ಕೆಲಸ ಮಾಡುತ್ತೆ?

Trike 2 pi ವಾಹನಕ್ಕೆ ಮೂರು ಚಕ್ರಗಳಿವೆ. ಮುಂಭಾಗದ ಚಕ್ರಗಳಿಂದ ಓಡುವ ಸಣ್ಣ ಗಾತ್ರದ ಎಲೆಕ್ಟ್ರಿಕ್ ಗಸ್ತು ವಾಹನವಾಗಿದೆ. ನಾಲ್ಕು ಚಕ್ರಗಳ ವಾಹನ, ಎರಡು ಚಕ್ರಗಳ ಬೈಕ್‌, ಸ್ಕೂಟರ್‌ಗಳಿರುವಷ್ಟೇ ಸಾಮರ್ಥ್ಯ ಹೊಂದಿದೆ. ಮುಂಭಾಗದ ಹಬ್ ಚಾಲಿತ ಚಕ್ರವು ಹೆಚ್ಚಿನ ಸ್ಟೀರಿಂಗ್ ಕೋನದಲ್ಲಿ ತಿರುಗಲು ಸಾಧ್ಯವಾಗುತ್ತದೆ. ಹಿಂಭಾಗದ ಎರಡು ಚಕ್ರಗಳು ಡೆಡ್ ಆಕ್ಸಲ್‌ನಲ್ಲಿ ಸ್ವತಂತ್ರವಾಗಿ ತಿರುಗುತ್ತವೆ. ಇದರಿಂದ ವಾಹನವು ಕೇವಲ ಐದು ಅಡಿ ವ್ಯಾಪ್ತಿಯಲ್ಲಿ ತಿರುಗಲು ಸಾಧ್ಯವಾಗುತ್ತದೆ. ಹೀಗಾಗಿ ಈ ಗಸ್ತು ವಾಹನ ಜನಸಂದಣಿ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲೂ ಸುಲಭವಾಗಿ ಬಳಸಬಹುದು.

ವಾಹನದಲ್ಲಿ ಕುಳಿತುಕೊಳ್ಳವ ಅವಕಾಶ ಇಲ್ಲ. ಭದ್ರತಾ ಸಿಬ್ಬಂದಿ ನಿಲ್ಲುವ ರೀತಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಇದರಿಂದ ಭದ್ರತಾ ಸಿಬ್ಬಂದಿಗೆ ಎಲ್ಲ ಕಡೆ ನೋಡಲು ಸಾಧ್ಯವಾಗುತ್ತೆ. ಅಲ್ಲದೆ ಈ ಗಸ್ತು ವಾಹನವನ್ನು ಬೇಗ ಹತ್ತಲು ಇಳಿಯಲು, ಗಸ್ತಿನ ವೇಳೆ ಜನರೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಇದರ ಇನ್ನೊಂದು ವಿಶೇಷವೆಂದರೆ ಪ್ರತಿಯೊಂದು ಚಕ್ರಕ್ಕೂ ಸ್ವತಂತ್ರ ಕಾಯಿಲ್ ಸಸ್ಪೆನ್ಷನ್ ನೀಡಲಾಗಿದೆ. ಇದರಿಂದ ಸಮತಟ್ಟಲ್ಲದ ರಸ್ತೆಗಳಲ್ಲೂ ಆರಾಮದಾಯಕವಾಗಿ ಚಲಿಸಬಹುದು. 250W ಮೋಟಾರ್ ಅಗತ್ಯವಿರುವ ಟಾರ್ಕ್ ಇದರಲ್ಲಿದೆ. ಇದು ಭಾರತದ ಕಡಿಮೆ ವೇಗದ ವಾಹನಗಳ ನಿಯಮಗಳಿಗೆ ಅನುಸಾರ ವಿನ್ಯಾಸಗೊಳಿಸಲಾಗಿದೆ.

ನಾಲ್ಕು ಹಂತಗಳ ದಾಟಿ ಈಗಿನ ಹೊಸ ರೂಪ

Trike 2 pi ಅಭಿವೃದ್ಧಿ ನಾಲ್ಕು ಹಂತಗಳಲ್ಲಿ ನಡೆದಿದೆ. ಭದ್ರತಾ ಸಿಬ್ಬಂದಿಯಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ವಾಹನದ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಮಾದರಿಯಲ್ಲಿ ನಿಂತುಕೊಂಡು ಗಸ್ತು ತಿರುಗುವ ಪರಿಕಲ್ಪನೆ ಮತ್ತು ಸಣ್ಣ ಗಾತ್ರದ ಮೂರು ಚಕ್ರಗಳ ವಿನ್ಯಾಸವನ್ನು ಪರೀಕ್ಷಿಸಲು ಬಳಸಲಾಯಿತು. ಕ್ಯಾಂಪಸ್‌ನ ಭದ್ರತಾ ಸಿಬ್ಬಂದಿಯೊಂದಿಗೆ ನಡೆಸಿದ ಆರಂಭಿಕ ಪರೀಕ್ಷೆಯಲ್ಲಿ ಸಸ್ಪೆನ್ಷನ್ ಇಲ್ಲದ ಕಾರಣ ವಾಹನದಲ್ಲಿ ಪ್ರಯಾಣಿಸುವಾಗ ಕಂಫರ್ಟ್ ಇಲ್ಲದಿರುವುದು ಕಂಡುಬಂತು.

ಬಳಿಕ ಎರಡನೇ ಮಾದರಿಯಲ್ಲಿ ಸ್ವತಂತ್ರ ಕಾಯಿಲ್ ಸಸ್ಪೆನ್ಷನ್ ಅಳವಡಿಸಲಾಯಿತು. ಜೊತೆಗೆ ವಾಹನದ ವಿನ್ಯಾಸವನ್ನು ಸುಧಾರಿಸಿ, ಗುರುತ್ವ ಕೇಂದ್ರವನ್ನು ಇನ್ನಷ್ಟು ಕೆಳಮಟ್ಟಕ್ಕೆ ತರಲಾಯಿತು. ಇದರಿಂದ ಸಮತಟ್ಟಲ್ಲದ ಪ್ರದೇಶಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮುಂಭಾಗದ ಚಕ್ರಕ್ಕೆ ಮಾತ್ರ ಬ್ರೇಕ್ ನೀಡಿರುವುದು ಸಮಸ್ಯೆಯಾಗಬಹುದು ಎಂಬುದು ಗೊತ್ತಾಯಿತು. ಬಳಿಕ ತಂಡವು ಯಾಂತ್ರಿಕ ಬ್ರೇಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಒಂದೇ ಬ್ರೇಕ್ ಲಿವರ್ ಮೂಲಕ ಹಿಂಭಾಗದ ಎರಡೂ ಚಕ್ರಗಳಿಗೆ ಸಮಾನವಾಗಿ ಬ್ರೇಕಿಂಗ್ ಶಕ್ತಿ ತಲುಪುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಯಿತು.

ಅಂತಿಮ ಹಂತ:

ಅಂತಿಮ ಹಂತದಲ್ಲಿ ವಾಹನದ ಉತ್ಪಾದನೆಗೆ ಹೆಚ್ಚಿನ ಗಮನ ನೀಡಲಾಯಿತು. ಇದರೊಂದಿಗೆ ಸೈರನ್, ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ, ಬೀಕನ್ ಲೈಟ್‌ಗಳು, GPS, ಲೈಟಿಂಗ್ ಮತ್ತು ಬಾಡಿ ಪ್ಯಾನೆಲ್‌ಗಳಂತಹ ಹಲವು ಫಿಚರ್ಸ್ ಸೇರಿಸಲಾಯಿತು. ವಿವಿಧ ವಯಸ್ಸಿನ ಮತ್ತು ವೃತ್ತಿಯ 50ಕ್ಕೂ ಹೆಚ್ಚು ಮಂದಿ ಬಳಕೆದಾರರು ವಾಹನದ ವಿವಿಧ ಮಾದರಿಗಳನ್ನು ಪರೀಕ್ಷಿಸಿದ್ದಾರೆ ಎಂದು James Dyson Award ಯೋಜನೆಯ ಪುಟದಲ್ಲಿ ತಿಳಿಸಲಾಗಿದೆ.

Trike 2 pi ಪೊಲೀಸರಿಂದಲೂ ಬಳಕೆ

Trike 2 pi ಇದೀಗ ಕೇವಲ ಮಾದರಿ ವಾಹನವಾಗಿರದೆ, ಸಾರ್ವಜನಿಕ ಬಳಕೆಯಲ್ಲೂ ಕಾಣಿಸಿಕೊಳ್ಳುತ್ತಿದೆ. ಕುಮಾರಗುರು ಕಾಲೇಜ್ ಆಫ್ ಟೆಕ್ನಾಲಜಿಯ ಇತ್ತೀಚಿನ ಮಾಹಿತಿಯ ಪ್ರಕಾರ ಕೊಯಮತ್ತೂರು ನಗರ ಪೊಲೀಸರು ಗಸ್ತು ಕಾರ್ಯಕ್ಕಾಗಿ Trike 2 pi ವಾಹನಗಳನ್ನು ಬಳಸುತ್ತಿದ್ದಾರೆ. ಅಲ್ಲದೆ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಸಿಬ್ಬಂದಿ ನಿಗಾವಹಿಸಲು 10 ವಾಹನಗಳನ್ನು ನಿಯೋಜಿಸಲಾಗಿದೆ.

ಈ ಯೋಜನೆಯಿಂದ ಅಖ್ತರ್ ಅವರಿಗೆ ಉದ್ಯಮ ಆರಂಭಿಸುವ ಅವಕಾಶವೂ ದೊರೆತಿದೆ. IPTIF ಬೆಂಬಲಿತ ಸ್ಟಾರ್ಟ್‌ಅಪ್ ಆಗಿರುವ Elaicle Innovations Private Limited ಮೂಲಕ ಅವರು ಈ ಯೋಜನೆಯನ್ನು ಉದ್ಯಮದ ರೂಪಕ್ಕೆ ಕೊಂಡೊಯ್ಯುತ್ತಿದ್ದಾರೆ. ತಮ್ಮ ವೃತ್ತಿಪರ ಅನುಭವದಲ್ಲಿ Elaicle Innovations ಹೆಸರನ್ನೂ ಅಖ್ತರ್ ಉಲ್ಲೇಖಿಸಿದ್ದಾರೆ.

ಪ್ರಶಸ್ತಿ ಮತ್ತು ಆರ್ಥಿಕ ನೆರವು

ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಈ ಯೋಜನೆಗೆ ಹಲವು ಪ್ರಶಸ್ತಿಗಳು ಮತ್ತು ಅನುದಾನಗಳು ದೊರೆತಿವೆ. ಇವುಗಳಲ್ಲಿ ಮುಖ್ಯವಾಗಿ IEI Research Excellence Award, ಪರಿಕಲ್ಪನೆಯ ಕಾರ್ಯಸಾಧ್ಯತೆಯನ್ನು (Proof of Concept) ಅಭಿವೃದ್ಧಿಪಡಿಸಲು AICTE-MIC YUKTI Innovation Challengeನಿಂದ ₹5 ಲಕ್ಷ ಅನುದಾನ, ಉತ್ಪನ್ನ ಅಭಿವೃದ್ಧಿಗಾಗಿ NewGen IEDCನಿಂದ ₹2 ಲಕ್ಷ ಅನುದಾನ ಹಾಗೂ IPTIF IMPACT 3.0 ಅಡಿಯಲ್ಲಿ ಉತ್ಪನ್ನ ಅಭಿವೃದ್ಧಿಗೆ ₹10 ಲಕ್ಷ ನೆರವು ಸೇರಿವೆ.

ಅಖ್ತರ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ 2024ರಲ್ಲಿ ಕುಮಾರಗುರು ಕಾಲೇಜ್ ಆಫ್ ಟೆಕ್ನಾಲಜಿಯಿಂದ Technical Star – Research ಪ್ರಶಸ್ತಿ, IEI Research Excellence ಗೌರವ, KCTಯಿಂದ Visvesvaraya Award ಹಾಗೂ International Centre for Entrepreneurship and Technologyಯಿಂದ ಫೈನಲಿಸ್ಟ್ ಗೌರವವೂ ದೊರೆತಿದೆ.

ಮುಂದಿನ ಯೋಜನೆ ಏನು?

James Dyson Award ಯೋಜನೆಯ ಪುಟದ ಪ್ರಕಾರ Trike 2 piಯ ಮೊದಲ ಉತ್ಪಾದನಾ ಬ್ಯಾಚ್ ಪೂರ್ಣಗೊಳಿಸುವುದು ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿಯೊಂದಿಗೆ ಅದರ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದು ಮುಂದಿನ ಪ್ರಮುಖ ಹಂತವಾಗಿದೆ. ವಾಹನವನ್ನು ಬಳಕೆಗೆ ನಿಯೋಜಿಸಿದ ಬಳಿಕ ದೊರೆಯುವ ಪ್ರತಿಕ್ರಿಯೆಗಳನ್ನು ಆಧರಿಸಿ ಇನ್ನಷ್ಟು ತಾಂತ್ರಿಕ ಸುಧಾರಣೆ, ಪರೀಕ್ಷೆ, ಪ್ರಮಾಣೀಕರಣ ಮತ್ತು ನಿಯಮಾನುಸರಣೆ ಕಾರ್ಯಗಳನ್ನು ಕೈಗೊಳ್ಳಲು ತಂಡ ಯೋಜಿಸಿದೆ. ಬಳಿಕ ಉತ್ಪಾದನೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದೆ.

ವಿಶ್ವವಿದ್ಯಾಲಯಗಳು, ಕೈಗಾರಿಕಾ ಪ್ರದೇಶಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಮತ್ತು ಹೆಚ್ಚಿನ ಪ್ರಮಾಣದ ಜನರು ಸಂಚರಿಸುವ ಇತರ ಸ್ಥಳಗಳಲ್ಲಿ ಈ ವಾಹನವನ್ನು ನಿಯೋಜಿಸುವುದು ತಂಡದ ಮುಂದಿನ ಯೋಜನೆಯಾಗಿದೆ. ಇದರ ಜೊತೆಗೆ, ಆಫ್‌ರೋಡ್ ಬಳಕೆಗಾಗಿ ಹಿಂಬದಿ ಚಕ್ರ ಚಾಲಿತ Gen-2 ಮಾದರಿ ಹಾಗೂ ನಿರಂತರ ಗಸ್ತು ಕಾರ್ಯಕ್ಕೆ ಅನುಕೂಲವಾಗುವಂತೆ ಬ್ಯಾಟರಿ ಬದಲಾಯಿಸಬಹುದಾದ Gen-3 ಮಾದರಿ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ. ಇದೀಗ Trike 2 pi, James Dyson Awardನ ಜಾಗತಿಕ Top 20 shortlistಗೆ ಆಯ್ಕೆಯಾಗುವ ಸಾಧ್ಯತೆಯಿದೆ.