ತೈವಾನ್‌ನ 10 ವರ್ಷದ ಬಾಲಕ ತಯಾರಿಸಿದ 'AI ಎಲೆಕ್ಟ್ರಾನಿಕ್ ಮೂಗು' ಸಿಲಿಕಾನ್ ವ್ಯಾಲಿಯಲ್ಲಿ ಚಿನ್ನದ ಪದಕ ಮತ್ತು ಅತ್ಯುತ್ತಮ ಆವಿಷ್ಕಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ತಂತ್ರಜ್ಞಾನವು ವಿಮಾನ ನಿಲ್ದಾಣಗಳಲ್ಲಿ ಡ್ರಗ್ಸ್ ಮತ್ತು ಅಪಾಯಕಾರಿ ವಸ್ತುಗಳನ್ನು ವಾಸನೆಯ ಮೂಲಕ ಪತ್ತೆಹಚ್ಚಲು ಸಹಕಾರಿಯಾಗಿದೆ.

ಇಂದಿನ ಕಾಲದ ಮಕ್ಕಳು ಗೇಮ್ಸ್ ಆಡುವುದರಲ್ಲಿ ಬ್ಯುಸಿಯಾಗಿದ್ದರೆ.. ತೈವಾನ್‌ನ 10 ವರ್ಷದ ಬಾಲಕನೊಬ್ಬ ಜಗತ್ತೇ ಮೆಚ್ಚುವಂತಹ ಆವಿಷ್ಕಾರ ಮಾಡಿದ್ದಾನೆ. ಸಿಲಿಕಾನ್ ವ್ಯಾಲಿ ಅಂತಾರಾಷ್ಟ್ರೀಯ ಉತ್ಸವದಲ್ಲಿ ಈ ಬಾಲಕ ತಯಾರಿಸಿದ 'AI ಎಲೆಕ್ಟ್ರಾನಿಕ್ ಮೂಗು' ಎಲ್ಲರ ಗಮನ ಸೆಳೆದಿದೆ.

ಯಾರು ಈ ಬಾಲಕ?

ತೈವಾನ್ ಮೂಲದ 10 ವರ್ಷದ ಹ್ಸು ಟಿಂಗ್-ವೇ (Hsu Ting-wei) ಎಂಬ ಬಾಲಕನೇ ಈ ಸಾಧಕ. ಕ್ಯಾಲಿಫೋರ್ನಿಯಾದಲ್ಲಿ ನಡೆದ 'ಸಿಲಿಕಾನ್ ವ್ಯಾಲಿ ಇಂಟರ್ನ್ಯಾಷನಲ್ ಫೆಸ್ಟಿವಲ್'ನಲ್ಲಿ (SVIIF) ಈತ ತನ್ನ 'ನೋವೆಲ್ ಆರ್ಟಿಫಿಶಿಯಲ್ ಎಲೆಕ್ಟ್ರಾನಿಕ್ ನೋಸ್' (Novel Artificial Electronic Nose) ಪ್ರದರ್ಶಿಸಿ ಬೆಸ್ಟ್ ಇನ್ವೆನ್ಷನ್ ಅವಾರ್ಡ್ ಮತ್ತು ಗೋಲ್ಡ್ ಮೆಡಲ್ ಗೆದ್ದಿದ್ದಾನೆ.

ಏನಿದು AI ಎಲೆಕ್ಟ್ರಾನಿಕ್ ಮೂಗು?

ಇದು ಗಾಳಿಯಲ್ಲಿರುವ ವಾಸನೆ ಮತ್ತು ರಾಸಾಯನಿಕ ಸಂಕೇತಗಳನ್ನು ಸ್ಪರ್ಶಿಸದೆಯೇ ಗುರುತಿಸುವ ತಂತ್ರಜ್ಞಾನ. ಏರ್‌ಪೋರ್ಟ್‌ನಂತಹ ಕಡೆಗಳಲ್ಲಿ ಎಕ್ಸ್ರೇ ಸ್ಕ್ಯಾನಿಂಗ್ ಯಂತ್ರಗಳ ಜೊತೆ ಇದನ್ನು ಅಳವಡಿಸಬಹುದು. ಇದು ಬ್ಯಾಗ್‌ಗಳ ಒಳಗೆ ಇರುವ ಸ್ಫೋಟಕಗಳು, ಡ್ರಗ್ಸ್ ಅಥವಾ ಸಾಂಕ್ರಾಮಿಕ ರೋಗ ಹರಡುವ ಮಾಂಸದ ಉತ್ಪನ್ನಗಳನ್ನು ವಾಸನೆಯ ಮೂಲಕವೇ ಪತ್ತೆ ಹಚ್ಚುತ್ತದೆ.

ಬಾಲಕನ ಉದ್ದೇಶ

ತನ್ನ ಈ ಆವಿಷ್ಕಾರದಿಂದ ಗಡಿಭಾಗಗಳಲ್ಲಿ 'ಫೆಂಟಾನಿಲ್'ನಂತಹ ಅಪಾಯಕಾರಿ ಡ್ರಗ್ಸ್ ಸಾಗಾಟ ತಡೆಯಲು ಮತ್ತು ಆಫ್ರಿಕನ್ ಸ್ವೈನ್ ಫಿವರ್ ಹರಡುವುದನ್ನು ತಡೆಯಲು ಸಹಾಯವಾಗಲಿ ಎಂಬುದು ಹ್ಸು ಟಿಂಗ್-ವೇ ಆಶಯವಾಗಿದೆ. ಜ್ಯೂರಿ ಸದಸ್ಯರು ಬಾಲಕನ ವಯಸ್ಸನ್ನು ನೋಡಿ ಪ್ರಶಸ್ತಿ ನೀಡಿಲ್ಲ, ಬದಲಾಗಿ ಈ ತಂತ್ರಜ್ಞಾನದ ಭವಿಷ್ಯದ ಬಳಕೆಯನ್ನು ನೋಡಿ ಗೌರವಿಸಿದ್ದಾರೆ. ಈ ಸ್ಪರ್ಧೆಯಲ್ಲಿ ತೈವಾನ್‌ನ ಒಟ್ಟು 35 ಆವಿಷ್ಕಾರಗಳು ಭಾಗವಹಿಸಿದ್ದು, ದಾಖಲೆಯ 24 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತೈವಾನ್ ಯುವ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದಾರೆ.