ಕೆ.ಆರ್.ಪುರಂ ಹೋಬಳಿಯ ಪಟ್ಟಂದೂರು ಅಗ್ರಹಾರದ ವಿವಾದಿತ ಜಾಗದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 'ನಮ್ಮ ವೈಟ್‌ಫೀಲ್ಡ್ ಆರ್‌ಡಬ್ಲ್ಯುಎ ಫೆಡರೇಷನ್ ಟ್ರಸ್ಟ್' ಸಲ್ಲಿಸಿದ್ದ ಅರ್ಜಿ ಆಧರಿಸಿ, ಜಿಬಿಎ ಮುಖ್ಯ ಆಯುಕ್ತರಿಗೆ ಯಾವುದೇ ನಿರ್ಮಾಣ ನಡೆಯದಂತೆ ನೋಡಿಕೊಳ್ಳಲು ನ್ಯಾಯಪೀಠ ನಿರ್ದೇಶಿಸಿದೆ.
ಬೆಂಗಳೂರು: ಕೆ.ಆರ್.ಪುರಂ ಹೋಬಳಿಯ ಪಟ್ಟಂದೂರು ಅಗ್ರಹಾರದ ಸರ್ವೇ ನಂಬರ್ 142ರಲ್ಲಿ ಮುಂದಿನ ವಿಚಾರಣೆವರೆಗೆ ಯಾವುದೇ ನಿರ್ಮಾಣ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಮಧ್ಯಂತರ ತಡೆ ಆದೇಶ
ವಿವಾದಿತ ಜಾಗದಲ್ಲಿ ನಿರ್ಮಾಣ ಚಟುವಟಿಕೆ ನಡೆಸಲು ಮೆರ್ಸಸ್ ಸ್ಕೈಲೈನ್ ಡೆವೆಲಪರ್ಸ್‌ಗೆ ಅನುಮತಿ ನೀಡಲಾಗಿದೆ ಎಂದು ಆಕ್ಷೇಪಿಸಿ ‘ನಮ್ಮ ವೈಟ್‌ಫೀಲ್ಡ್ ಆರ್‌ಡಬ್ಲ್ಯುಎ ಫೆಡರೇಷನ್ ಟ್ರಸ್ಟ್’ ಪ್ರತಿನಿಧಿ ಸಂದೀಪ್ ಅನಿರುದ್ಧನ್ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರ ನ್ಯಾಯಪೀಠ ಈ ಕುರಿತಂತೆ ಮಧ್ಯಂತರ ತಡೆ ಆದೇಶ ನೀಡಿದೆ.
ಅಗ್ರಹಾರದ ಸರ್ವೇ ನಂ 139 ಮತ್ತು 142
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಟ್ಟಂದೂರು ಅಗ್ರಹಾರದ ಸರ್ವೇ ನಂ 139 ಮತ್ತು 142ರಲ್ಲಿನ ತಲೆ ಎತ್ತಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಡಿಎ ಆದೇಶ ಮಾಡಿದ ಹೊರತಾಗಿಯೂ ನಿರ್ಮಾಣ ಕಾಮಗಾರಿ ನಡೆಸಲು ಮೆರ್ಸಸ್ ಸ್ಕೈಲೈನ್ ಡೆವೆಲಪರ್ಸ್‌ಗೆ ಅನುಮತಿ ನೀಡಲಾಗಿದೆ ಎಂದು ಆಕ್ಷೇಪಿಸಿದರು.
ಇಡೀ ಜಾಗವು ಜಿಬಿಎಗೆ ಹಸ್ತಾಂತರವಾಗಿರುವ ವಿಚಾರವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಪಟ್ಟಂದೂರು ಅಗ್ರಹಾರದ ಸರ್ವೇ ನಂಬರ್ 142ರಲ್ಲಿನ ಜಾಗದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಯದಂತೆ ಜಿಬಿಎ ಮುಖ್ಯ ಆಯುಕ್ತರು ನೋಡಿಕೊಳ್ಳಬೇಕು. ಹಾಗೆಯೇ, ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿ ಜಿಬಿಎ ಮುಖ್ಯ ಆಯುಕ್ತರ ಕಚೇರಿಯ ಸಂಬಂಧಪಟ್ಟ ಅಧಿಕಾರಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದೆ.
ಅರ್ಜಿದಾರರ ಆಕ್ಷೇಪವೇನು?
ಮೆರ್ಸಸ್ ಸ್ಕೈಲೈನ್ ಡೆವೆಲಪರ್ಸ್ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.142/1ಬಿರಲ್ಲಿನ 2 ಎಕರೆ 7 ಗುಂಟೆ ಜಾಗವನ್ನು ಪರಿವರ್ತನೆ ಮಾಡಿ ಅನಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ನಕ್ಷೆ ಮಂಜೂರಾತಿ ಪಡೆಯದೇ ಹಲವು ನಿವೇಶನಗಳನ್ನು ರಚನೆ ಮಾಡಿ, ಹಲವರಿಗೆ ಮಾರಾಟ ಮಾಡಿದೆ. ನಿವೇಶನ ಖರೀದಿದಾರರು ಅನಧಿಕೃತವಾಗಿ ಖಾತೆ ಹಾಗೂ ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಚಟುವಟಿಕೆ ನಡೆಸಿದ್ದಾರೆ. ಈ ಅಕ್ರಮ ಬಡಾವಣೆ ವಿರುದ್ಧ ಕ್ರಮ ಜರುಗಿಸಲು ಸರ್ಕಾರ, ಜಿಬಿಎ (ಹಿಂದಿನ ಬಿಬಿಎಂಪಿ) ಮತ್ತು ಬಿಡಿಎಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೆ, ನಮ್ಮ ಮನವಿ ಆಧರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿಲ್ಲ. ಇದು ಪಟ್ಟಂದೂರು ಗ್ರಾಮದ ಪ್ರತಿಯೊಬ್ಬರ ನಿವಾಸಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಜೊತೆಗೆ, ಪಟ್ಟಂದೂರು ಅಗ್ರಹಾರದ ಸರ್ವೇ 142ರಲ್ಲಿನ ಜಾಗದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ರಾಜ್ಯ ಸರ್ಕಾರ, ಬಿಡಿಎ ಮತ್ತು ಜಿಬಿಎ ಸೇರಿದಂತೆ ಸಂಬಂಧಪಟ್ಟ ಇನ್ನಿತರ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


