Asianet Suvarna News Asianet Suvarna News

ಕೋವಿಡ್‌ ಯೋಧರ ಗುರುತಿಸುವ ಸಮಯ: 12ನೇ ಆವೃತ್ತಿಯ ನಮ್ಮ ಬೆಂಗಳೂರು ಪ್ರಶಸ್ತಿಗೆ ಚಾಲನೆ!

* 12ನೇ ಆವೃತ್ತಿಯ ನಮ್ಮ ಬೆಂಗಳೂರು ಪ್ರಶಸ್ತಿಗೆ ಚಾಲನೆ

* ಕೋವಿಡ್‌ ಯೋಧರ ಗುರುತಿಸುವ ಸಮಯ

* ಕೊರೋನಾ ಸಮಯದಲ್ಲಿ ತೆರೆಮರೆಯಲ್ಲಿದ್ದು ಸೇವೆ ಸಲ್ಲಿಸಿದವರಿಗೆ ಗೌರವ

Namma Bengaluru Awards is back with its 12th Edition Time to support COVID Heroes pod
Author
Bangalore, First Published Oct 9, 2021, 1:50 PM IST
  • Facebook
  • Twitter
  • Whatsapp

ಬೆಂಗಳೂರು(ಅ. 09): ನಮ್ಮ ಬೆಂಗಳೂರು ಅವಾರ್ಡ್ಸ್‌(Namma Bengaluru Awards) ಟ್ರಸ್ಟ್‌ 12ನೇ ಆವೃತ್ತಿಯ ನಮ್ಮ ಬೆಂಗಳೂರು 2021 ಪ್ರಶಸ್ತಿಗೆ (NBA-2021) ಚಾಲನೆ ನೀಡಿದೆ.

ಬೆಂಗಳೂರಿನ ಜನಸಂಖ್ಯೆ 1.2 ಕೋಟಿಗೂ ಮಿಗಿಲು. ಇದು ಇನ್ನೂ ಹೆಚ್ಚುತ್ತಲೇ ಇದೆ. ಈ ಜನಸ್ತೋಮದಲ್ಲಿ ಬೆಳಕಿಗೆ ಬಾರದೇ, ಯಾವುದೇ ಖ್ಯಾತಿಯ ಹಿಂದೆ ಬೀಳದೇ ತೆರೆಮರೆಯಲ್ಲಿಯೇ ಉಳಿದು ನಮ್ಮ ಬೆಂಗಳೂರನ್ನು(Bengaluru) ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ. ಇಂಥವರನ್ನು, ಅವರ ಕೆಲಸಗಳನ್ನು ಗುರುತಿಸಿ, ಗೌರವಿಸುವ ಮೂಲಕ ಸಂಭ್ರಮ ಪಡುವುದು ನಮ್ಮ ಬೆಂಗಳೂರು ಪ್ರಶಸ್ತಿಯ ಮುಖ್ಯ ಉದ್ದೇಶ. ಬೆಂಗಳೂರಿನ ನಿಜವಾದ ಹೀರೋಗಳಿಗೆ ಈ ಪ್ರಶಸ್ತಿಯ ಮೂಲಕ ದೊಡ್ಡದೊಂದು ‘ಧನ್ಯವಾದʼ ಹೇಳಲು ಬಯಸುತ್ತೇವೆ.

6300 ಮರ ಕಡಿತಕ್ಕೆ ‘ನಮ್ಮ ಬೆಂಗಳೂರು’ ವಿರೋಧ

2009ರಲ್ಲಿ ಆರಂಭವಾದ ನಮ್ಮ ಬೆಂಗಳೂರು ಪ್ರಶಸ್ತಿ ಈಗ 12ನೇ ಆವೃತ್ತಿಗೆ ಕಾಲಿಟ್ಟಿದೆ. ಪ್ರಸ್ತುತ ಕೋವಿಡ್‌ ಸಾಂಕ್ರಾಮಿಕ(Covid 19) ನಮ್ಮ ನಡುವೆ ಇರುವ ಅನೇಕ ಧೈರ್ಯಶಾಲಿ ಮತ್ತು ಕರುಣಾಮಯಿ ಜನರನ್ನು ಬೆಳಕಿಗೆ ತಂದಿದೆ. ಮಾನವೀಯತೆಯನ್ನು ಎತ್ತಿ ಹಿಡಿಯುವ ಈ ಸೈನಿಕರು, ಕಷ್ಟದ ಸಮಯದಲ್ಲಿಯೂ ನಾವಿದ್ಧೇವೆ ಎಂದು ಧೈರ್ಯ ತುಂಬುತ್ತಿದ್ದಾರೆ. ಅವರೇ ಆರೋಗ್ಯ ಕಾರ್ಯಕರ್ತರು. ಹಾಗಾಗಿ ಈ ವರ್ಷದ ನಮ್ಮ ಬೆಂಗಳೂರು ಪ್ರಶಸ್ತಿ, ಆರೋಗ್ಯ ಕಾರ್ಯಕರ್ತರಿಗೇ ನೀಡುವ ವಿಶೇಷ ಆವೃತ್ತಿಯಾಗಿದೆ. ವೈಯಕ್ತಿಕವಾಗಿ ಆರೋಗ್ಯ ಕಾರ್ಯಕರ್ತರು ಮಾತ್ರವಲ್ಲದೇ, ವಿವಿಧ ವಿಭಾಗಗಳಡಿ ಇರುವ ಸಂಘ ಸಂಸ್ಥೆಗಳೂ ಕರ್ತವ್ಯದ ಕರೆ ಬಂದಾಗ ಎಲ್ಲವನ್ನೂ ಬದಿಗೊತ್ತಿ ಅದಕ್ಕೆ ಓಗೊಟ್ಟಿದ್ದಾರೆ.

ಆರೋಗ್ಯ ಯೋಧರು ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಮುಕ್ತವಾಗಿದ್ದು, ಬೆಳಕಿಗೆ ಬಾರದ ಕೋವಿಡ್‌ ಹೀರೋಗಳನ್ನು ನಗರದ ನಾಗರೀಕರೇ ಗುರುತಿಸಿ ನಾಮನಿರ್ದೇಶನ ಮಾಡಬಹುದು. ನಮ್ಮ ನಡುವೆಯೇ ಸಾಮಾನ್ಯರಂತಿದ್ದು, ಅಸಾಮಾನ್ಯ ಕೆಲಸ ಮಾಡಿದವರನ್ನು ಗುರುತಿಸಿ ನಮ್ಮ ಕೃತಜ್ಞತೆ ಹೇಳಬಹುದು. ಕೆಳಕಂಡ ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗುತ್ತದೆ;

#ಬೆಂಗಳೂರುಫೈಟ್ಸ್‌ಕೊರೋನಾ ಅಭಿಯಾನಕ್ಕೆ ಚಾಲನೆ

1. ವರ್ಷದ ಆರೋಗ್ಯ ವೃತ್ತಿಪರರು (ಉದಾಹರಣೆಗೆ: ವೈದ್ಯರು, ನರ್ಸ್‌, ಪ್ಯಾರಾಮೆಡಿಕಲ್‌ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸ್ವಾಬ್‌ ಸಂಗ್ರಾಹಕರು, ಲ್ಯಾಬ್‌ ಟೆಕ್ನೀಷಿಯನ್‌, ಲಸಿಕೆ ಹಾಕುವವರು, ಅಂಗನವಾಡಿ ಕಾರ್ಯಕರ್ತರು), ಇತ್ಯಾದಿ)

2. ವರ್ಷದ ಮುಂಚೂಣಿಯ ಕಾರ್ಯಕರ್ತರು (ಉದಾಹರಣೆಗೆ: ಆಡಳಿತ ಸಿಬ್ಬಂದಿ, ಪೊಲೀಸ್‌, ಬಿಬಿಎಂಪಿ ಅಧಿಕಾರಿಗಳು, ಬೆಸ್ಕಾಂ/ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು, ಸ್ಮಶಾನ ಸಿಬ್ಬಂದಿ, ಆಂಬುಲೆನ್ಸ್‌ ಸಿಬ್ಬಂದಿ, ಮಾರ್ಷಲ್‌ಗಳು, ಸೆಕ್ಯೂರಿಟಿ ಸಿಬ್ಬಂದಿ, ಕ್ಯಾಂಟೀನ್‌ ಸಿಬ್ಬಂದಿ)

3. ವರ್ಷದ ಸಾಮಾಜಿಕ ಸಂಸ್ಥೆ/ ವ್ಯಕ್ತಿ (ಉದಾಹರಣೆಗೆ: ಆಹಾರ, ಮಾಸ್ಕ್‌ ಮತ್ತು ದಿನಸಿ ವಿತರಣೆ, ಆಕ್ಸಿಜನ್‌ ಕಾನ್ಸಟ್ರೇಟರ್‌ಗಳು, ಕೋವಿಡ್‌ ಆರೈಕೆ ಕೇಂದ್ರಗಳು, ಸಮುದಾಯದಲ್ಲಿ ಅರಿವು ಮೂಡಿಸುತ್ತಿರುವವರು, ಅರಿವು ಮತ್ತು ಔಟ್‌ರೀಚ್‌ ಕಾರ್ಯಕ್ರಮಗಳು ಹಾಗೂ ಸ್ವಯಂಸೇವಕರು)

4. ವರ್ಷದ ಮಾಧ್ಯಮ ಚಾಂಪಿಯನ್ (ಉದಾಹರಣೆಗೆ: ಪತ್ರಕರ್ತರು, ವರದಿಗಾರರು, ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಆನ್‌ಲೈನ್‌ ಮೀಡಿಯಾ)

ವರ್ಷದ ನಮ್ಮ ಬೆಂಗಳೂರಿನವರು- ಫ್ಲಾಗ್‌ಶಿಪ್ ಪ್ರಶಸ್ತಿಯನ್ನು ಮೊದಲೆರಡು ವಿಭಾಗಗಳಿಂದ ಜ್ಯೂರಿ ಸದಸ್ಯರು ಆಯ್ಕೆ ಮಾಡುತ್ತಾರೆ.

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!

ನಮ್ಮ ಬೆಂಗಳೂರು ಪ್ರಶಸ್ತಿಯ ವೆಬ್‌ಸೈಟ್‌ ಸಂದರ್ಶಿಸಿ, ಅಕ್ಟೋಬರ್‌ 24, 2021ರೊಳಗೆ ತಪ್ಪದೇ ನೀವು ಗುರುತಿಸಿದ ಹೀರೋವನ್ನು ನಾಮನಿರ್ದೇಶನ ಮಾಡಿ. ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿರುವ ತಜ್ಞರನ್ನೊಳಗೊಂಡ ತೀರ್ಪುಗಾರರ ಸಮಿತಿ ಇಂದಿನಿಂದಲೇ ಪ್ರಶಸ್ತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದೆ. ನಾಮನಿರ್ದೇಶನಗಳನ್ನು 2021ರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ವಿಸ್ತೃತವಾಗಿ ಪರಿಶೀಲಿಸಲಾಗುತ್ತದೆ. ನಿರ್ದಿಷ್ಟಪಡಿಸಿದ ಮಾನದಂಡಗಳಡಿ ತೀರ್ಪುಗಾರರ ಸಮಿತಿ ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕಷವಾಗಿ ಗಮನಿಸಿ ಪ್ರತಿ ವಿಭಾಗದಲ್ಲಿಯೂ 5- 6 ಮಂದಿಯನ್ನು ಅಂತಿಮಗೊಳಿಸಲಿದೆ. ಅಂತಿಮ ಸುತ್ತು ತಲುಪಿದ ಇವರನ್ನು ತೀರ್ಪುಗಾರರ ಸಮಿತಿಯ ಸದಸ್ಯರು ಸಂದರ್ಶಿಸಲಿದ್ದಾರೆ. ವಿಜಯಿಗಳನ್ನು ಈ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಂತಿಮ ವಿಜೇತರನ್ನು 2021ರ ಡಿಸೆಂಬರ್‌ 10ರಂದು ಘೋಷಿಸಲಾಗುತ್ತದೆ.

ಕಳೆದ ಹನ್ನೊಂದು ವರ್ಷಗಳಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿಗೆ 2,80,000 ನಾಮನಿರ್ದೇಶನಗಳು ಬಂದಿದ್ದು, 99 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ಸ್ಮರಣಿಕೆಯ ಜೊತೆಗೆ ತಮ್ಮ ಕನಸಿಗೆ ನೀರೆರೆಯಲು ನಗದು ಬಹುಮಾನವನ್ನೂ ನೀಡಲಾಗಿದೆ.

ನಮ್ಮ ಬೆಂಗಳೂರು ಪ್ರಶಸ್ತಿಯ ಬ್ರಾಂಡ್‌ ರಾಯಭಾರಿಯಾಗಿರುವ ಶ್ರೀ ರಮೇಶ್‌ ಅರವಿಂದ್‌(Ramesh Aravind) ಮಾತನಾಡಿ “ಹಿಂದಿನಿಂದಲೂ ಗೋಡೆಗಳನ್ನು ಶುಷ್ಕ ಶಿಲೆಗಳಿಂದಲೇ ನಿರ್ಮಿಸಲಾಗುತ್ತಿದೆ. ತನ್ನ ವಿಶಿಷ್ಟ ಇಂಟರ್‌ಲಾಕಿಂಗ್‌ ಮತ್ತು ಲೋಡ್‌ ಬೇರಿಂಗ್‌ ವಿಧಾನದಿಂದಾಗಿ ಸಣ್ಣ ಮತ್ತು ದೊಡ್ಡ ಶಿಲೆಗಳು ಜೊತೆಗೂಡಿ ದೊಡ್ಡ ಗೋಡೆ ನಿರ್ಮಾಣವಾಗುತ್ತದೆ. ವಾಸ್ತವವಾಗಿ ದೊಡ್ಡ ಶಿಲೆಗಳನ್ನು ಹಿಡಿದಿಟ್ಟುಕೊಂಡು ಗೋಡೆ ಸದೃಢವಾಗಿರುವಂತೆ ಮಾಡುವುದೇ ಸಣ್ಣ ಕಲ್ಲುಗಳು. ಅಂತೆಯೇ ಸಮುದಾಯಕ್ಕಾಗಿ ಕೊಡುಗೆ ನೀಡುತ್ತಿರುವ ಅನೇಕ ಜನಸಾಮಾನ್ಯರು ಬೆಳಕಿಗೆ ಬಾರದೇ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ” ಎಂದರು.

ಈ ವರ್ಷದ ನಮ್ಮ ಬೆಂಗಳೂರು ಪ್ರಶಸ್ತಿ ಅಸಾಮಾನ್ಯ ಕೆಲಸ ಮಾಡಿದ ಕೋವಿಡ್‌ ಯೋಧರನ್ನು ಗೌರವಿಸಲಿದೆ. ಅಂಥವರನ್ನು ಹುಡುಕಿ, ಗೌರವಿಸಿ ಅವರನ್ನು ಯಶಸ್ಸನ್ನು ಸಂಭ್ರಮಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಹಾಗಾಗಿ ಬನ್ನಿ, ಅವರನ್ನು ನಾಮನಿರ್ದೇಶನ ಮಾಡಿ ಎಂದು ಅವರು ಕರೆ ನೀಡಿದರು.

ನಮ್ಮ ಬೆಂಗಳೂರು ಅವಾರ್ಡ್ಸ್‌ನ ಟ್ರಸ್ಟಿಗಳಲ್ಲಿ ಒಬ್ಬರಾದ, ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರದೀಪ್‌ ಕರ್‌ ಅವರು ಮಾತನಾಡಿ “ಕೋವಿಡ್‌ ಸಾಂಕ್ರಾಮಿಕ ಇಡೀ ಜಗತ್ತನ್ನೇ ಕಾಡಿ, ಅಸಂಖ್ಯಾತ ಜನರ ಮೇಲೆ ದುಷ್ಪರಿಣಾಮ ಬೀರಿದ್ದು ನಮಗೆಲ್ಲರಿಗೂ ಗೊತ್ತು. ಇಂಥ ಕಠಿಣ ಸಮಯದಲ್ಲಿಯೂ ಬೆಂಗಳೂರಿನ ಅನೇಕ ಮಂದಿ ಹೊರಬಂದು ನಿಸ್ವಾರ್ಥ ಸೇವೆ ಮಾಡಿ ಮಾನವೀಯತೆಯ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ಹಾಗಾಗಿ ಬೆಂಗಳೂರಿನ ಜನರು ಮುಂದೆ ಬಂದು ಕೋವಿಡ್‌ ಸಮಯದಲ್ಲಿ ದುಡಿದ, ಸಮುದಾಯಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಬೇಕು” ಎಂದು ಕೋರಿದರು.

ನಮ್ಮ ಹೃದಯದಲ್ಲಿ ಬರುವ ಸಕಾರಾತ್ಮಕ ಬದಲಾವಣೆ ಮತ್ತು ಬೆಂಗಳೂರಿನ ಭವ್ಯ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು 2021ರ ನಮ್ಮ ಬೆಂಗಳೂರು ಪ್ರಶಸ್ತಿಗಳು ಅನೇಕ ಹೀರೋಗಳಿಗೆ ಹುಟ್ಟು ನೀಡಬಹುದು. ಹಾಗಾಗಿ ಪ್ರತಿಯೊಬ್ಬ ಬೆಂಗಳೂರಿಗರೂ ತಮ್ಮ ಹೀರೋವನ್ನು ನಾಮನಿರ್ದೇಶನ ಮಾಡಬೇಕು ಎಂದು ಅವರು ಹೇಳಿದರು.
12ನೇ ಆವೃತ್ತಿಯ ಪ್ರಶಸ್ತಿಯನ್ನು ನಿರ್ಧರಿಸುವ ತೀರ್ಪುಗಾರರ ಸಮಿತಿ ಹೀಗಿದೆ:

•    ಶ್ರೀ ರಮೇಶ್‌ ಅರವಿಂದ್‌, ದಕ್ಷಿಣ ಭಾರತ ಸಿನಿ ಸ್ಟಾರ್, ನಮ್ಮ ಬೆಂಗಳೂರು ಪ್ರಶಸ್ತಿ ಬ್ರಾಂಡ್‌ ರಾಯಭಾರಿ
•    ಶ್ರೀ ಪ್ರದೀಪ್‌ ಕರ್‌, ಅಧ್ಯಕ್ಷರು ಮತ್ತು ಎಂಡಿ, ಮೈಕ್ರೋಲ್ಯಾಂಡ್‌
•    ಡಾ. ವಿಶಾಲ್‌ ರಾವ್‌, ಆಂಕಾಲಜಿ ಸರ್ಜನ್‌, ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌
•    ಡಾ. ವಿವೇಕ್‌ ಪಡೆಗಲ್, ನಿರ್ದೇಶಕರು, ಪಲ್ಮನರಿ ಕಾಯಿಲೆಗಳು, ಫೋರ್ಟಿಸ್‌
•    ಡಾ. ಸುದರ್ಶನ ಬಲ್ಲಾಳ್‌, ಮೆಡಿಕಲ್‌ ಡೈರೆಕ್ಟರ್‌ ಮತ್ತು ಅಧ್ಯಕ್ಷರು, ಮಣಿಪಾಲ್‌ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌
•    ಮೇಜರ್‌ ಮಣಿವಣ್ಣನ್‌, ಐಎಎಸ್‌, ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
•    ಶ್ರೀ ಸಜನ್ ಪೂವಯ್ಯ, ಹಿರಿಯ ವಕೀಲರು ಸರ್ವೋಚ್ಚ ನ್ಯಾಯಾಲಯ
•    ಶ್ರೀಮತಿ ಅನಿತಾ ರೆಡ್ಡಿ, ಫೌಂಡರ್‌ ಟ್ರಸ್ಟಿ, ಆವಾಸ್‌
•    ಶ್ರೀ ಸಂಜಯ ಪ್ರಭು, ನಿರ್ದೇಶಕರು, ಏಶಿಯಾನೆಟ್ ನ್ಯೂಸ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ 

ನಮ್ಮ ಬೆಂಗಳೂರು ಅವಾರ್ಡ್ಸ್‌ ಟ್ರಸ್ಟ್‌ ಕುರಿತು

ನಮ್ಮ ಬೆಂಗಳೂರು ಪ್ರಶಸ್ತಿಗಳು ಬೆಂಗಳೂರನ್ನು ಉತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ತೆರೆಯ ಮರೆಯಲ್ಲಿಯೇ ನಿಸ್ವಾರ್ಥವಾಗಿ ದುಡಿಯುತ್ತಿರುವವರನ್ನು  ಗುರುತಿಸುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಬೆಂಗಳೂರಿನ ಜನರೇ ನಗರಕ್ಕೆ ಸರಿಸಾಟಿಯಲ್ಲದ ಕೊಡುಗೆ ನೀಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿಯ ಮೂಲಕ ಗೌರವಿಸಲು ಟ್ರಸ್ಟ್‌ ಅವಕಾಶ ನೀಡುತ್ತಿದೆ.
 

Follow Us:
Download App:
  • android
  • ios