Asianet Suvarna News Asianet Suvarna News

6300 ಮರ ಕಡಿತಕ್ಕೆ ‘ನಮ್ಮ ಬೆಂಗಳೂರು’ ವಿರೋಧ

* ಸಿಂಗನಾಯಕನಹಳ್ಳಿ ಕೆರೆಯಲ್ಲಿ ಬೆಳೆದಿರುವ ಮರಗಳು
* ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆಗೆ ಮರ ಕಡಿತ ಪ್ರಸ್ತಾಪ
* ಮರ ಕಡಿತದಿಂದ ಜೀವ ಸಂಕುಲಕ್ಕೆ ಹಾನಿ
 

Namma Bengaluru Foundation Opposition to 6300 Tree Cutting grg
Author
Bengaluru, First Published Jul 14, 2021, 11:25 AM IST

ಬೆಂಗಳೂರು(ಜು.14): ಯಲಹಂಕ ವಿಧಾನಸಭಾ ಕ್ಷೇತ್ರದ ಸಿಂಗನಾಯಕನ ಹಳ್ಳಿ ಕೆರೆಯಲ್ಲಿ ಬೆಳೆದಿರುವ 6,316 ಮರಗಳನ್ನು ತೆರವುಗೊಳಿಸುವ ಮುನ್ನ ಸಾರ್ವಜನಿಕರು ತಮ್ಮ ಅಭಿಪ್ರಾಯ ಮಂಡಿಸಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದೆ.

ಈ ಸಂಬಂಧ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದು, ಹೆಬ್ಬಾಳ- ನಾಗವಾರ ವ್ಯಾಲಿ ಯೋಜನೆ ಜಾರಿಗೆ ಆತುರದ ನಿರ್ಧಾರ ಬೇಡ. ಪರಿಸರ ವಿಜ್ಞಾನಿಗಳು, ನಗರ ತಜ್ಞರು ಮತ್ತು ಮರ ತಜ್ಞರಿಂದ ಸಿಂಗನಾಯಕನ ಹಳ್ಳಿ ಕೆರೆ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು. ಅವರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆ ಜಾರಿಗೆ ಸಿಂಗನಾಯಕನ ಹಳ್ಳಿ ಕೆರೆಗೆ ನೀರು ತುಂಬಿಸಿ ಅಲ್ಲಿಂದ ಇತರೆ ಕೆರೆಗಳಿಗೆ ಹರಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರಿಂದ ಕೆರೆಯಲ್ಲಿರುವ ಮರಗಳನ್ನು ತೆರವಿಗೆ ಮುಂದಾಗಿದ್ದು, ಅಲ್ಲಿಯ ಜೀವ ಸಂಕುಲಕ್ಕೆ ಹಾನಿಯಾಗಲಿದೆ. ಹೀಗಾಗಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸೋಂಕಿತರ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್; ಬೆಂಗಳೂರು ಪ್ರತಿಷ್ಠಾನದಿಂದ ಆಕ್ಸಿಜನ್ ಪೂರೈಕೆ!

ಮರಗಳನ್ನು ಕಡಿಯದಂತೆ ಪ್ರತಿಷ್ಠಾನದ ನೇತೃತ್ವದಲ್ಲಿ ಹಲವು ತಜ್ಞರು ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌, ಬೆಂಗಳೂರು ನಗರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ವೆಂಕಟೇಶ್‌, ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್‌, ಅವರಿಗೆ ಮನವಿ ಸಲ್ಲಿಸಿದ್ದು, ಕಾಲಾವಕಾಶ ನೀಡುವಂತೆ ಕೋರಲಾಗಿದೆ.

ಜೊತೆಗೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್‌ ಹೆಗಡೆ ಆಶಿಸರ ಅವರನ್ನು ಭೇಟಿ ಮಾಡಿ, ಮರಗಳನ್ನು ಕಡಿಯುವ ಸಂಬಂಧ ಮಧ್ಯಪ್ರವೇಶಿಸಬೇಕು. ಎಚ್‌-ಎನ್‌ ವ್ಯಾಲಿ ಯೋಜನೆ ಪ್ರಾರಂಭಕ್ಕೂ ಮುನ್ನ ಅರಣ್ಯ ಇಲಾಖೆ- ಸಣ್ಣ ನಿರಾವರಿ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕು. ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಆಗಬಹುದಾದ ಹಾನಿ ತಪ್ಪಿಸಿ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.

ಅಷ್ಟೇ ಅಲ್ಲದೆ, ಪರಿಸರ ವಿಜ್ಞಾನಿ ಮತ್ತು ಐಐಎಸ್‌ಸಿ ನಿವೃತ್ತ ಪ್ರೊ.ಡಾ.ಟಿ.ವಿ.ರಾಮಚಂದ್ರ ಮತ್ತು ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗದ ಪ್ರೊ.ಡಾ.ನಂದಿನಿ ಅವರೊಂದಿಗೆ ವೆಬಿನಾರ್‌ ಆಯೋಜನೆ ಮಾಡಿ, ಮರ ಕಡಿತದಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಚರ್ಚೆ ಮಾಡಲಾಗಿದೆ.

‘ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಆಗಬಹುದಾದ ಹಾನಿ ತಪ್ಪಿಸಿ ಪರ್ಯಾಯ ಕ್ರಮ ಕೈಗೊಳ್ಳಬೇಕು. ಕೆರೆ ಪುನಶ್ಚೇತನಕ್ಕೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ, ಮರಗಳ ನಾಶ ಮತ್ತು ಹಸಿರು ನಾಶಕ್ಕೆ ಕಾರಣವಾಗಬಾರದು. ನಗರದಲ್ಲಿನ ಜಲಮೂಲಗಳನ್ನು ರಕ್ಷಣೆ ಮಾಡಲು ನಗರದ ಅಕ್ಕ ಪಕ್ಕದಲ್ಲಿರುವ ಕೆರೆ ಮತ್ತು ಕಾಡುಗಳು ಮಖ್ಯ ವಾಗಿದ್ದು, ಅವುಗಳ ರಕ್ಷಣೆ ಆಗಬೇಕು. ಆದರೆ, ಪರಿಸರ ವಿಕೋಪಗಳಿಗೆ ಕಾರಣವಾಗುವುದಕ್ಕೆ ಅವಕಾಶ ನೀಡಬಾರದು. ಹೀಗಾಗಿ ಬಿಬಿಎಂಪಿ ಅರಣ್ಯ ಇಲಾಖೆ ಕೆರೆಯಲ್ಲಿನ ಮರಗಳ ರಕ್ಷಣೆ ಮಾಡಿ ನೈಸರ್ಗಿಕ ಕಾಡನ್ನು ಸಂರಕ್ಷಿಸಲು ಮುಂದಾಗಬೇಕು’ ಎಂದು ಕೋರಿದ್ದಾರೆ.

ಈಗಾಗಲೇ ಪ್ರತಿಷ್ಠಾನದ ನೇತೃತ್ವದಲ್ಲಿ ಬಿಬಿಎಂಪಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ವಿಜಯ್‌ ನಿಶಾಂತ್‌, ನಗರಾಭಿವೃದ್ಧಿ ತಜ್ಞರು, ವಿಜ್ಞಾನಿಗಳು, ಕಲಾವಿದರು, ವನ್ಯಜೀವಿ ತಜ್ಞರು, ವನ್ಯಜೀವಿ ಛಾಯಾಗ್ರಾಹಕರ ತಂಡ ಸಿಂಗನಾಯಕನಹಳ್ಳಿ ಕರೆ ಭೇಟಿ ನೀಡಿ ಸುತ್ತಮುತ್ತಲ ಪ್ರದೇಶವನ್ನು ಅಧ್ಯಯನ ನಡೆಸಲಾಗಿದೆ. ಕೆರೆಯಲ್ಲಿ ನೈಸರ್ಗಿಕವಾಗಿ ಪರಿಸರ ವೈವಿಧ್ಯಮಯ ಪ್ರದೇಶವಾಗಿ ಬೆಳೆದಿದೆ. ಸುಮಾರು 25-30 ವರ್ಷಗಳಷ್ಟುಹಳೆಯ ಮರಗಳು, ಅವುಗಳ ನಡುವೆ ನವಿಲುಗಳ ಆವಾಸ ಸ್ಥಾನವನ್ನಾಗಿಸಿಕೊಂಡಿದೆ. ಹಲವು ಜಾತಿಯ ಅಳಿವಿನಂಚಿನ ಪಕ್ಷಿಗಳು ಗೂಡುಗಳನ್ನು ಕಟ್ಟಿವೆ. ಇಡೀ ಕೆರೆ ಹುಲ್ಲುಗಾವಲಾಗಿದ್ದು, ಸುತ್ತಮುತ್ತಲ ಹಳ್ಳಿಗಳ ಜಾನುವಾರುಗಳಿಗೆ ಮೇವು ಒದಗಿಸುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
 

Follow Us:
Download App:
  • android
  • ios