ಕರ್ನಾಟಕದಲ್ಲಿ ನಕಲಿ ಮತ್ತು ಕಳಪೆ ಔಷಧ ಮಾರಾಟ ಜಾಲದ ವಿರುದ್ಧ ಎಫ್‌ಡಿಎ ಕಠಿಣ ಕ್ರಮ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ 24 ಪ್ರಮುಖ ಔಷಧ ವಿತರಣಾ ಸಂಸ್ಥೆಗಳ ಪರವಾನಗಿಯನ್ನು ರದ್ದು ಅಥವಾ ಅಮಾನತು ಮಾಡಲಾಗಿದೆ. ಈ ಬೃಹತ್ ಜಾಲದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ಬೆಂಗಳೂರು (ಸೆ.21): ರಾಜ್ಯದಲ್ಲಿ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿದ್ದ ನಕಲಿ ಹಾಗೂ ಕಳಪೆ ಔಷಧ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ 'ಕರ್ನಾಟಕ ಆಹಾರ ಭದ್ರತೆ ಮತ್ತು ಔಷಧ ಆಡಳಿತ ಇಲಾಖೆ' (FDA), ಒಟ್ಟು 24 ಪ್ರಮುಖ ಹೋಲ್‌ಸೇಲ್‌ ಮತ್ತು ರಿಟೇಲ್‌ ಔಷಧ ವಿತರಣಾ ಸಂಸ್ಥೆಗಳ ವಿರುದ್ಧ ಭಾರಿ ಕ್ರಮ ಜರುಗಿಸಿದೆ. ಬೆಂಗಳೂರಿನಲ್ಲಿ ಅತ್ಯಂತ ಪ್ರಖ್ಯಾತವಾಗಿರುವ ವಿಜಯನಗರದ ರಾಮ್ಯೋ ಲೇಔಟ್‌ನಲ್ಲಿ ಮೋತಿ ಬಿಲ್ಡಿಂಗ್‌ನಲ್ಲಿರುವ ಮಾರುತಿ ಮೆಡಿಕಲ್ಸ್‌ನ ಲೈಸೆನ್ಸ್‌ಅನ್ನು ಸರ್ಕಾರ ಅಮಾನತು ಮಾಡಿದೆ. ನಕಲಿ ಔಷಧಗಳನ್ನು ಸರಬರಾಜು ಮಾಡಿದ ಹಾಗೂ ಮಾರಾಟ ಮಾಡಿದ ಗಂಭೀರ ಆರೋಪದಡಿ 16 ಸಂಸ್ಥೆಗಳ ಪರವಾನಗಿಯನ್ನು (Licence) ಸಂಪೂರ್ಣವಾಗಿ ರದ್ದುಗೊಳಿಸಿದ್ದರೆ, ಮತ್ತೂ 8 ಸಂಸ್ಥೆಗಳ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಭಾನುವಾರ ಆದೇಶ ಹೊರಡಿಸಿದೆ.

ಅಮಾನತುಗೊಂಡ ಸಂಸ್ಥೆಗಳ ಪಟ್ಟಿಯಲ್ಲಿ ಜಾಗತಿಕ ಮಟ್ಟದ ಖ್ಯಾತ ಬಹುರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆ 'ಫೈಜರ್ ಲಿಮಿಟೆಡ್' (Pfizer Ltd) ಕಂಪನಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಪನಲಿಂಗನಹಳ್ಳಿಯಲ್ಲಿರುವ 'ಸಿ&ಎಫ್ ಡೀಪೋ' (C&F Depot) ಕೂಡ ಸೇರಿದೆ. ಕಾರ್ಯಾಚರಣೆಗೆ ಒಳಗಾದ ಒಟ್ಟು 24 ಸಂಸ್ಥೆಗಳ ಪೈಕಿ 22 ಸಂಸ್ಥೆಗಳು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿದ್ದರೆ, ಉಳಿದೆರಡು ಸಂಸ್ಥೆಗಳು ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿವೆ.

ಪರವಾನಗಿ (Licence) ಸಂಪೂರ್ಣವಾಗಿ ರದ್ದಾದ ಸಂಸ್ಥೆಗಳು:

ನಕಲಿ ಔಷಧ ಪ್ರಕರಣದಲ್ಲಿ ಶಾಮೀಲಾದ ಹಿನ್ನೆಲೆಯಲ್ಲಿ ಎಫ್‌ಡಿಎ ಅಧಿಕಾರಿಗಳು ಈ ಕೆಳಗಿನ 16 ಪ್ರಮುಖ ಸಂಸ್ಥೆಗಳ ಲೈಸೆನ್ಸ್ ರದ್ದುಗೊಳಿಸಿದ್ದಾರೆ:

  • ಅವೆಸ್ಕೊ ಹೆಲ್ತ್‌ಕೇರ್ (ಪ್ರಭಾಕರ್ ರೆಡ್ಡಿ ಲೇಔಟ್)
  • ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (ಇಬ್ರಾಹಿಂ ಸಾಹೇಬ್ ಸ್ಟ್ರೀಟ್)
  • ಪಟೇಲ್ ಮೆಡಿ ಟ್ರೇಡ್ (ಗುಬ್ಬಲಾಳ)
  • ರಾಜರಾಜೇಶ್ವರಿ ಫಾರ್ಮಾ (ಆರ್.ಆರ್.ನಗರ)
  • ಸೂರ್ಯ ಸ್ಪೆಷಾಲಿಟಿ ಫಾರ್ಮಾ (ಕುಮಾರಸ್ವಾಮಿ ಲೇಔಟ್)
  • ಎಸ್.ಡಬ್ಲ್ಯೂ.ಎಸ್ ಫಾರ್ಮಾ (ಕೆ.ಜಿ.ಹಳ್ಳಿ)
  • ಕೃಪಾ ಹೆಲ್ತ್‌ಕೇರ್ (ಮಾವಳ್ಳಿ, ಲಾಲ್‌ಬಾಗ್‌)
  • ಸೇಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್ (ವಿನಾಯಕ ನಗರ)
  • ಸಾಗರ್ ಫಾರ್ಮಾ - ಸಾಗರ್ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ ಸರ್ವಿಸಸ್ ಲಿಮಿಟೆಡ್ ವಿಭಾಗ (ಕುಮಾರಸ್ವಾಮಿ ಲೇಔಟ್)
  • ಝೈಮಸ್ ಫಾರ್ಮಾ (ರಘುವನಹಳ್ಳಿ)
  • ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್ (ಬನಶಂಕರಿ 3ನೇ ಹಂತ)
  • ಎಕ್ಸೆಲ್ ಕೇರ್ ಫಾರ್ಮಾ (ಬನಶಂಕರಿ 2ನೇ ಹಂತ)
  • ಪಟೇಲ್ ಮೆಡಿಕಲ್ಸ್ (ಪದ್ಮನಾಭನಗರ) ಮತ್ತು ಇತರ ಸಂಸ್ಥೆಗಳು.

ಪರವಾನಗಿ ಅಮಾನತುಗೊಂಡ (Suspended) ಸಂಸ್ಥೆಗಳು

  • ಫೈಜರ್ ಲಿಮಿಟೆಡ್ - ಸಿ&ಎಫ್ ಡೀಪೋ (ಕೆಂಪನಲಿಂಗನಹಳ್ಳಿ, ನೆಲಮಂಗಲ)
  • ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (ಚಾಮರಾಜಪೇಟೆ)
  • ಮೆಡ್ ಫಾರ್ಮಾ (ದೊಡ್ಡಕಮ್ಮನಹಳ್ಳಿ)
  • ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್ (ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ)
  • ಸಾಗರ್ ಫಾರ್ಮಾ (ತಿಲಕ್‌ನಗರ)
  • ವಿವಂತ ಫಾರ್ಮಾಸ್ಯುಟಿಕಲ್ಸ್ (ಜಯನಗರ 9ನೇ ಬ್ಲಾಕ್)
  • ಮಾರುತಿ ಮೆಡಿಕಲ್ಸ್ (ವಿಜಯನಗರ)
  • ಹೈ-5 ಫಾರ್ಮಾ (ಕೆ.ಜಿ. ಹಳ್ಳಿ)

ಬಿಡದಿ ಫಾರ್ಮ್‌ಹೌಸ್ ದಾಳಿ: ಎಫ್‌ಡಿಎ ಸೃಷ್ಟಿಸಿದ ಹೆಜ್ಜೆಗುರುತು!

ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಫಾರ್ಮ್‌ಹೌಸ್‌ ಒಂದರ ಮೇಲೆ ಒಂದು ತಿಂಗಳ ಹಿಂದೆ ಎಫ್‌ಡಿಎ ಸೂಪರ್‌ಫಾಸ್ಟ್ ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ನಕಲಿ ಔಷಧ ಜಾಲವನ್ನು ಜಾಲಾಡಿತ್ತು. ಅಲ್ಲಿಂದ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಮಾತ್ರೆಗಳು, ಇಂಜೆಕ್ಷನ್‌ಗಳು ಹಾಗೂ ಕೈಗಾರಿಕಾ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿತ್ತು. ಈ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಕಟ್ಟುನಿಟ್ಟಿನ ತನಿಖೆ ನಡೆಸಿ ಸಂಸ್ಥೆಗಳ ವಿರುದ್ಧ ಪ್ರಸ್ತುತ ಈ ದೊಡ್ಡ ಕ್ರಮ ಕೈಗೊಳ್ಳಲಾಗಿದೆ.

ತನಿಖೆಯ ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕುರುಬರಕೇರನಹಳ್ಳಿಯಲ್ಲಿ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ರಿ-ಪ್ಯಾಕಿಂಗ್ (Repacking) ಮತ್ತು ನಕಲಿ ಲೇಬಲಿಂಗ್ (Relabelling) ಘಟಕವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು. ನೆರೆರಾಜ್ಯಗಳಿಂದ ಅಗ್ಗದ ದರದ ಮಾತ್ರೆ ಹಾಗೂ ಇಂಜೆಕ್ಷನ್‌ಗಳನ್ನು ತಂದು, ಅವುಗಳನ್ನು ಹೊಸ ಸೀಸೆಗೆ (Vials) ತುಂಬಿ, ಫೈಜರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಜೀವ ರಕ್ಷಕ ಔಷಧಗಳ ಹೊಸ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು.

ಖೋಟಾ ಕ್ಯೂಆರ್ ಕೋಡ್ ಮತ್ತು ಅವಧಿ ಮುಗಿದ ಔಷಧಗಳು ಜಪ್ತಿ

ದಾಳಿಯ ವೇಳೆ ಸಿಕ್ಕಿಬಿದ್ದ ನಕಲಿ ಔಷಧಗಳ ಮೇಲಿದ್ದ 'ಕ್ಯೂಆರ್ ಕೋಡ್'ಗಳನ್ನು (QR Code) ಸ್ಕ್ಯಾನ್ ಮಾಡಿ ಪರಿಶೀಲಿಸಿದಾಗ ಅವುಗಳು ಸಂಪೂರ್ಣ ನಕಲಿ ಎಂಬುದು ಸಾಬೀತಾಗಿದೆ. ಕಾರ್ಯಾಚರಣೆಯಲ್ಲಿ 5,640 'ಸೆಫಿಯಾವಿಜೆಂಟ್ 2.5' ಇಂಜೆಕ್ಷನ್ ಸೀಸೆಗಳು, 1,531 'ಹಿಜ್ಲಾಮ್' ಇಂಜೆಕ್ಷನ್‌ಗಳು ಹಾಗೂ 30 ಬಾಕ್ಸ್ ಅವಧಿ ಮುಗಿದ (Expired Drugs) ಜೀವ ರಕ್ಷಕ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಅಪರಾಧಕ್ಕೆ ಸಂಬಂಧಿಸಿದಂತೆ 'ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940'ರ (Drugs and Cosmetics Act, 1940) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ನಕಲಿ ಔಷಧ ಉತ್ಪಾದನೆ ಮತ್ತು ವಿತರಣೆಯು ಜೈಲುವಾಸ ಹಾಗೂ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧವಾಗಿದೆ. ಜಪ್ತಿ ಮಾಡಲಾದ ಸಂಪೂರ್ಣ ಮಾಲುಗಳನ್ನು ಬೆಂಗಳೂರು ದಕ್ಷಿಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲು ದಾಖಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ಹಿಂದಿರುವ ಬೃಹತ್ ಜಾಲ ಹಾಗೂ ಸಪ್ಲೈ ಚೈನ್ ಅನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ಸಿ. ವಂಶಿ ಕೃಷ್ಣ (IPS C Vamsi Krishna) ಅವರ ನೇತೃತ್ವದಲ್ಲಿ 'ವಿಶೇಷ ತನಿಖಾ ತಂಡ' (SIT) ರಚಿಸಿ ತನಿಖೆಗೆ ಆದೇಶಿಸಿದೆ.