ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರ ಏರಿಕೆಯಾಗಿದ್ದು, ಗೃಹ ಬಳಕೆದಾರರ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಬೆಂಗಳೂರು (ಮಾ.4): ರಾಜ್ಯದಲ್ಲಿ ಬೇಸಿಗೆಯ ಬಿಸಿ ಏರುತ್ತಿರುವ ಬೆನ್ನಲ್ಲೇ ಕೈಗಾರಿಕೆ ಮತ್ತು ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ದರವನ್ನು ಪರಿಷ್ಕರಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಹೊರೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಸ್ಕಾಂಗಳ ಒತ್ತಡಕ್ಕೆ ಮಣಿಯಿತಾ ಕೆಇಆರ್‌ಸಿ?

ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಎದುರಿಸುತ್ತಿರುವ ಆರ್ಥಿಕ ನಷ್ಟದ ನೆಪವೊಡ್ಡಿ ದರ ಏರಿಕೆ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದೆ. ಎಸ್ಕಾಂಗಳ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ.

ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುತ್ ದರದಲ್ಲಿ ಭಾರಿ ಏರಿಕೆ

ವಾಣಿಜ್ಯ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 7 ರೂ.ನಿಂದ 7.10 ರೂ.ಗೆ ಹೆಚ್ಚಿಸಲಾಗಿದೆ. ಕೈಗಾರಿಕಾ ವಲಯದಲ್ಲೂ ಗಣನೀಯ ಏರಿಕೆಯಾಗಿದ್ದು, ಎಲ್.ಟಿ. 5 ಕೈಗಾರಿಕೆ ದರ 4.5 ರೂ.ನಿಂದ 5.20 ರೂ.ಗೆ ಹಾಗೂ ಹೆಚ್.ಟಿ.2ಬಿ ಕೈಗಾರಿಕೆ ದರವನ್ನು 5.95 ರೂ.ನಿಂದ 6.90 ರೂ.ಗೆ (ಅಂದರೆ ಯೂನಿಟ್‌ಗೆ 95 ಪೈಸೆ) ಹೆಚ್ಚಳ ಮಾಡಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?

ಒಂದೆಡೆ ಕೈಗಾರಿಕೆಗಳಿಗೆ ದರ ಏರಿಸಿದ್ದರೆ, ಮತ್ತೊಂದೆಡೆ ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುವ ವಿದ್ಯುತ್ ದರದಲ್ಲಿ ಯೂನಿಟ್‌ಗೆ 95 ಪೈಸೆ ಕಡಿತ ಮಾಡಲಾಗಿದೆ. ಅಲ್ಲದೆ, ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಂದೇ ರೀತಿ ಇದ್ದ ದರವನ್ನು ಈಗ ಆಯಾ ಎಸ್ಕಾಂಗಳಿಗೆ ತಕ್ಕಂತೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

ಗೃಹ ಬಳಕೆಯ ಗ್ರಾಹಕರಿಗೆ ಸಮಾಧಾನಕರ ಸುದ್ದಿ

ಸಾಮಾನ್ಯ ಜನರಿಗೆ ಸಮಾಧಾನ ತರುವ ವಿಷಯವೆಂದರೆ, ಗೃಹ ಬಳಕೆಯ ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮನೆಗಳಲ್ಲಿ ಬಳಸುವ ವಿದ್ಯುತ್ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು, ಕೇವಲ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳಿಗೆ ಮಾತ್ರ ಈ ದರ ಏರಿಕೆ ಅನ್ವಯವಾಗಲಿದೆ.

ದರ ಏರಿಕೆ: ಉದ್ಯಮಿಗಳ ಕೆಂಗಣ್ಣಿಗೆ ಗುರಿ

ಬೇಸಿಗೆಯ ಆರಂಭದಲ್ಲೇ ಮಾಡಲಾಗಿರುವ ಈ ದರ ಏರಿಕೆ ಕೈಗಾರಿಕೋದ್ಯಮಿಗಳ ಮತ್ತು ವಾಣಿಜ್ಯೋದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಈ 'ಹೈಕ್' ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.