ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ, ಆದರೆ ಕಾನೂನಾತ್ಮಕ ತೊಡಕುಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ, ಬಿಜೆಪಿ ವಿರುದ್ಧದ ಆರೋಪ, ದಲಿತ ನಾಯಕರ ಸರಣಿ ಸಭೆ ಕುರಿತು ಅವರು ಮಾಹಿತಿ, ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು (ಮಾ.4): ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಮೊದಲಿನಿಂದಲೂ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಚಿತ್ರದುರ್ಗ ಸಮಾವೇಶದಲ್ಲಿ ಘೋಷಣೆ ಮಾಡಿದ್ದಷ್ಟೇ ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ ಮತ್ತು ಸುಪ್ರೀಂಕೋರ್ಟ್ ಆದೇಶದಂತೆ ಎಂಪರಿಕಲ್ ಡೇಟಾವನ್ನು ಸಮೀಕ್ಷೆಯ ಮೂಲಕ ಸಂಗ್ರಹಿಸಿದ್ದೇವೆ ಎಂದು ಅವರು ತಿಳಿಸಿದರು.

Add Asianetnews Kannada as a Preferred SourcegooglePreferred

ಒಳ ಮೀಸಲಾತಿ ಜಾರಿ, ಕಾನೂನಾತ್ಮಕ ತೊಡಕುಗಳೇನು?

ಒಳ ಮೀಸಲಾತಿ ಜಾರಿಯ ಹಾದಿಯಲ್ಲಿ ಕಾನೂನು ಸಂಘರ್ಷಗಳು ಎದುರಾಗಿವೆ. ಪ್ರಸ್ತುತ 6:6:5 ಮೀಸಲಾತಿ ಹಂಚಿಕೆಯ ಹಂತದಲ್ಲಿದ್ದು, ಮೀಸಲಾತಿ ಪ್ರಮಾಣವನ್ನು 50% ರಿಂದ 56% ಕ್ಕೆ ಹೆಚ್ಚಿಸುವ ವಿಚಾರದಲ್ಲಿ ವಿರೋಧ ವ್ಯಕ್ತವಾಗಿದೆ. ಒಟ್ಟು ಆರು ಪ್ರಕರಣಗಳು ನ್ಯಾಯಾಲಯದಲ್ಲಿವೆ. 'ಯಾರಾದರೂ ಕೋರ್ಟಿಗೆ ಹೋದರೆ ಅದನ್ನು ತಡೆಯುವ ಶಕ್ತಿ ಸರ್ಕಾರಕ್ಕೆ ಇದೆಯೇ? ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕಾಗುತ್ತದೆ' ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ನೇಮಕಾತಿ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಹಿತರಕ್ಷಣೆ

ಒಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳ ಒತ್ತಾಯದ ಮೇರೆಗೆ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಸುಮಾರು 56,000 ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅಳವಡಿಸಲು ಸರ್ಕಾರ ಸಿದ್ಧವಿದೆ, ಆದರೆ ಅದಕ್ಕೆ ಸರಿಯಾದ ವಿಧಾನ ಮತ್ತು ಕಾನೂನು ರಕ್ಷಣೆ ಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಮತ್ತು ಕ್ಯಾಬಿನೆಟ್‌ನಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಪಪ್ರಚಾರ ನಿಲ್ಲಿಸಿ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಿದ್ದರು ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು. 'ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ತಂದಿದ್ದಾರಾ? ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದ್ದಾರಾ?' ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಮೀಸಲಾತಿ ವಿರೋಧಿ ಎಂಬ ಅಪಪ್ರಚಾರವನ್ನು ಅಲ್ಲಗಳೆದರು.

ದಲಿತ ನಾಯಕರ ಸರಣಿ ಭೇಟಿ, ಚರ್ಚೆ ನಡೆದಿದ್ದೇನು?

ರಾಜ್ಯದಲ್ಲಿ ಒಳ ಮೀಸಲಾತಿ ಜಟಾಪಟಿ ಜೋರಾಗಿರುವ ಬೆನ್ನಲ್ಲೇ, ದಲಿತ ಸಮುದಾಯದ ವಿವಿಧ ಪಂಗಡಗಳ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುತ್ತಿದ್ದಾರೆ. ಮೊದಲು ದಲಿತ ಬಲಗೈ ಸಮುದಾಯದ ನಾಯಕರು ಭೇಟಿಯಾದ ಬೆನ್ನಲ್ಲೇ, ಈಗ ದಲಿತ ಎಡಗೈ ಸಮುದಾಯದ ಪ್ರಮುಖ ನಾಯಕರು ಸದಾಶಿವನಗರದ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರನ್ನ ಭೇಟಿಯಾದವರು ಯಾರು?

ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಮಾಜಿ ಸಚಿವ ಎಚ್. ಆಂಜನೇಯ, ಮತ್ತು ಶಾಸಕ ನೆಲಮಂಗಲ ಶ್ರೀನಿವಾಸ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ತಮ್ಮ ಸಮುದಾಯದ ನಿಲುವನ್ನು ವಿವರಿಸಿದ್ದಾರೆ. ಇದಕ್ಕೂ ಮುನ್ನ ಸಚಿವರಾದ ಪರಮೇಶ್ವರ್ ಮತ್ತು ಮಹದೇವಪ್ಪ ಕೂಡ ಚರ್ಚೆ ನಡೆಸಿದ್ದರು.

ಫೋನ್ ಟ್ಯಾಪಿಂಗ್ ಆರೋಪಕ್ಕೆ ಖರ್ಗೆ ತಿರುಗೇಟು

ವಿರೋಧ ಪಕ್ಷಗಳ ಫೋನ್ ಟ್ಯಾಪಿಂಗ್ ಆರೋಪವನ್ನು ಸಚಿವರು ತಳ್ಳಿಹಾಕಿದರು. 'ಬಿಜೆಪಿ ಸರ್ಕಾರ ತನ್ನದೇ ರೈಲ್ವೆ ಮಂತ್ರಿಯ ಫೋನ್ ಟ್ಯಾಪ್ ಮಾಡಿತ್ತು. ಸಾಕ್ಷಿ ಇಲ್ಲದೆ ಇಂತಹ ಗಂಭೀರ ಆರೋಪ ಮಾಡಬಾರದು. ನಮಗೆ ಅಷ್ಟು ಶಕ್ತಿ ಇದ್ದಿದ್ದರೆ ದೊಡ್ಡ ದೊಡ್ಡ ಮೀನುಗಳ ಫೋನ್ ಟ್ಯಾಪ್ ಮಾಡುತ್ತಿದ್ದೆವು' ಎಂದು ಅವರು ವ್ಯಂಗ್ಯವಾಡಿದರು.

ಕೆಪಿಎಸ್‌ಸಿ ಅಕ್ರಮದ ಬಗ್ಗೆ ಪ್ರತಿಕ್ರಿಯೆ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯಬಾರದು ಎಂದು ಕಟ್ಟುನಿಟ್ಟಿನ ಕಾಯ್ದೆ ತಂದಿರುವುದೇ ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳಿದರು.