ಕರ್ನಾಟಕ ಹೈಕೋರ್ಟ್, ಆನೇಕಲ್ ತಾಲೂಕಿನ 'ಸೂರ್ಯನಗರ 4ನೇ ಹಂತ' ವಸತಿ ಯೋಜನೆಗಾಗಿ ಕೈಗೊಂಡಿದ್ದ 1938 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಕ್ಕೆ ಸಮೀಪವಿರುವ ಈ ಯೋಜನೆಗೆ ಅಗತ್ಯ ಪರಿಸರ ಮಂಜೂರಾತಿ ಪಡೆಯದ ಕಾರಣ ಈ ತೀರ್ಪು ನೀಡಿದೆ.

ಬೆಂಗಳೂರು (ಸೆ.1): ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಗೃಹಮಂಡಳಿಗೆ (KHB) ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಆನೇಕಲ್ ತಾಲೂಕಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ 'ಸೂರ್ಯನಗರ 4ನೇ ಹಂತ'ದ ಲೇಔಟ್‌ಗಾಗಿ ಕೈಗೊಳ್ಳಲಾಗಿದ್ದ ಬರೋಬ್ಬರಿ 1,938 ಎಕರೆ 13 ಗುಂಟೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿ ಆದೇಶಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯಕ್ಕೆ (ESZ) ಈ ಯೋಜನೆ ತೀರಾ ಸಮೀಪದಲ್ಲಿದ್ದು, ಅಗತ್ಯ ಪರಿಸರ ಮಂಜೂರಾತಿಗಳನ್ನು ಪಡೆಯದಿರುವುದು ಹಾಗೂ ಪರಿಸರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯ ಈ ಪ್ರಮುಖ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಪ್ರಸ್ತಾಪ

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಹೆಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಉದ್ದೇಶಿತ ವಸತಿ ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಲಿರುವ 268.9 ಚದರ ಕಿಲೋಮೀಟರ್ ವಿಸ್ತೀರ್ಣದ ಪರಿಸರ ಸೂಕ್ಷ್ಮ ವಲಯದ (ESZ) ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಗಮನಿಸಿತು. ಈ ವಲಯವನ್ನು 168.8 ಚದರ ಕಿ.ಮೀಗೆ ಕಡಿತಗೊಳಿಸುವ ಪ್ರಸ್ತಾಪವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಕೇಂದ್ರ ಉನ್ನತಾಧಿಕಾರ ಸಮಿತಿ (CEC) ತನ್ನ ವರದಿಯಲ್ಲಿ ಈ ಪ್ರಮಾಣದ ಬೃಹತ್ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಆ.29 ರಂದು ನೀಡಿದ ತೀರ್ಪಿನಲ್ಲಿ ಪೀಠ ಉಲ್ಲೇಖಿಸಿದೆ. ಈ ವರದಿಯನ್ನು ಸುಪ್ರೀಂ ಕೋರ್ಟ್ ಇನ್ನೂ ಪುರಸ್ಕರಿಸಿಲ್ಲ ಅಥವಾ ತಿರಸ್ಕರಿಸಿಲ್ಲ. ಹೀಗಿರುವಾಗ ಯೋಜನೆಯನ್ನು ಮುಂದುವರಿಸುವುದು 1986 ರ ಪರಿಸರ (ಸಂರಕ್ಷಣೆ) ಕಾಯ್ದೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮಾನವ-ವನ್ಯಜೀವಿ ಸಂಘರ್ಷದ ಭೀತಿ

ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ಪರಿಸರ ಸೂಕ್ಷ್ಮ ವಲಯದ ಮಹತ್ವ, ವಿಶೇಷವಾಗಿ ಕಾಡುಪ್ರಾಣಿಗಳ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯುವಲ್ಲಿ ಅದರ ಪಾತ್ರವನ್ನು ಸರಿಯಾಗಿ ಪರಿಗಣಿಸಿಲ್ಲ. ಈ ಯೋಜನೆಯು 'ಕರಡಿಕ್ಕಲ್-ಮಾದೇಶ್ವರ' ವನ್ಯಜೀವಿ ಕಾರಿಡಾರ್‌ಗೆ ತೀವ್ರ ಧಕ್ಕೆ ತರಲಿದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲಿದೆ ಎಂದು ಕರ್ನಾಟಕ ಅರಣ್ಯ ಇಲಾಖೆ ಈಗಾಗಲೇ ಎಚ್ಚರಿಸಿತ್ತು. ಈ ಎಲ್ಲಾ ಆತಂಕಗಳನ್ನು ಗಾಳಿಗೆ ತೂರಿ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಮನುಷ್ಯರಿಗೆ ಮಾತ್ರವಲ್ಲ, ಕಾಡುಪ್ರಾಣಿಗಳಿಗೂ 'ಮನೆ' ಮುಖ್ಯ"

ಪರಿಸರ ಸಂರಕ್ಷಣೆಯ ವೆಚ್ಚದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಪೀಠ, ಮನುಷ್ಯನ ಅಸ್ತಿತ್ವಕ್ಕೆ ವಸತಿ ಒಂದೇ ಮುಖ್ಯವಲ್ಲ. ಪರಿಸರ, ವನ್ಯಜೀವಿಗಳು, ಅರಣ್ಯ ಮತ್ತು ಜಲಮೂಲಗಳು ಕೂಡ ಮನುಷ್ಯನ ಅಸ್ತಿತ್ವಕ್ಕೆ ಅಷ್ಟೇ ಅಗತ್ಯ. ಈ ಯೋಜನೆಯು ಬನ್ನೇರುಘಟ್ಟದ 268.9 ಚದರ ಕಿ.ಮೀ ESZ ವ್ಯಾಪ್ತಿಯಲ್ಲಿ ಬರುವುದರಿಂದ, ಇದು ಭವಿಷ್ಯದಲ್ಲಿ ಸರಿಪಡಿಸಲಾಗದಂತಹ ಪ್ರಕೃತಿ, ಪರಿಸರ ಮತ್ತು ವನ್ಯಜೀವಿ ನಾಶಕ್ಕೆ ಕಾರಣವಾಗುತ್ತದೆ. ವಿಜ್ಞಾನಾಧಾರಿತ ಪರಿಸರ ಪ್ರಭಾವ ವರದಿ (EIA) ಅಥವಾ ಸಾಮಾಜಿಕ-ಪರಿಸರ ಅಧ್ಯಯನ ನಡೆಸದೆ ಈ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದಿದೆ.

ಆನೆಗಳ ಕಾರಿಡಾರ್‌ಗಳ ಮಹತ್ವವನ್ನು ಎತ್ತಿಹಿಡಿದ ಪೀಠವು, ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಆದರೆ, ಮನುಷ್ಯನಿಗೆ ಸಿಗುವ 'ಸುರಕ್ಷಿತ ಮನೆ' ಎಂಬ ಮೂಲಭೂತ ಹಕ್ಕು ಕಾಡುಪ್ರಾಣಿಗಳಿಗೆ ಸಿಗಬಾರದೇ? ವನ್ಯಜೀವಿಗಳ ಆವಾಸಸ್ಥಾನವನ್ನು ಹಾಳುಗೆಡವಿ ಕೈಗೊಳ್ಳುವ ಅಭಿವೃದ್ಧಿ ಸಾರ್ವಜನಿಕ ಹಿತಾಸಕ್ತಿಯಾಗಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಹೇಳಿದೆ.

ಭೂಸ್ವಾಧೀನದ ಸುದೀರ್ಘ ಹಿನ್ನೆಲೆ:

ಆನೇಕಲ್ ತಾಲೂಕಿನ ಜಿಗಣಿ ಮತ್ತು ಕಸಬಾ ಹೋಬಳಿಯ ಇಂಡ್ಲವಾಡಿ, ಬಗ್ಗನಡೊಡ್ಡಿ, ಕಾಡುಜಕ್ಕನಹಳ್ಳಿ, ಕೋಣಸಂದ್ರ ಮತ್ತು ಬೊಮ್ಮಂಡಹಳ್ಳಿ ಗ್ರಾಮಗಳ 2,220 ಎಕರೆ 2 ಗುಂಟೆ ಜಮೀನಿಗೆ 2013 ರ ಅಕ್ಟೋಬರ್ 19 ರಂದು ಪ್ರಾಥಮಿಕ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿತ್ತು. ತದನಂತರ 2015 ರ ಮಾರ್ಚ್ 12 ರಂದು 1,938 ಎಕರೆ 13 ಗುಂಟೆ ಜಾಗಕ್ಕೆ ಮೂರು ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಜಮೀನಿನ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. 2025 ರ ಜನವರಿ 13 ರಂದು ಏಕಸದಸ್ಯ ಪೀಠವು, ಕೇಂದ್ರ ಪರಿಸರ ಇಲಾಖೆಯ (MoEFCC) ಮಂಜೂರಾತಿ ಪಡೆಯುವ ಷರತ್ತಿಗೊಳಪಟ್ಟು ಕೃಷಿ ಭೂಮಿ ಸ್ವಾಧೀನಕ್ಕೆ ಅನುಮತಿ ನೀಡಿ, ಜಮೀನುಗಳ ಸ್ವಾಧೀನವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕರು ಹಾಗೂ ಕೆಎಚ್‌ಬಿ ಎರಡೂ ಕಡೆಯವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ವಿಭಾಗೀಯ ಪೀಠವು ಭೂಮಾಲೀಕರ ಮೇಲ್ಮನವಿಯನ್ನು ಪುರಸ್ಕರಿಸಿ, ಇಡೀ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ ಹಾಗೂ ಕೆಎಚ್‌ಬಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.