- Home
- Karnataka Districts
- Bengaluru Urban
- ಹೆಬ್ಬಾಳ-ಸಿಲ್ಕ್‌ಬೋರ್ಡ್ ಸುರಂಗದಿಂದ ಪ್ರವಾಹ ಭೀತಿ: ರಾಜ್ಯಪಾಲರಿಗೆ IISc ತಂಡದ ವರದಿ
ಹೆಬ್ಬಾಳ-ಸಿಲ್ಕ್‌ಬೋರ್ಡ್ ಸುರಂಗದಿಂದ ಪ್ರವಾಹ ಭೀತಿ: ರಾಜ್ಯಪಾಲರಿಗೆ IISc ತಂಡದ ವರದಿ
ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರ ತಂಡವು ಬೆಂಗಳೂರಿನ ಹೆಬ್ಬಾಳ ಸುರಂಗ ರಸ್ತೆ ಯೋಜನೆಯನ್ನು ಅವೈಜ್ಞಾನಿಕ ಎಂದು ಕರೆದಿದೆ. ಈ ಯೋಜನೆಯು ಟ್ರಾಫಿಕ್ ಸಮಸ್ಯೆ, ಪ್ರವಾಹದ ಅಪಾಯ ಮತ್ತು ಪರಿಸರ ಹಾನಿಯನ್ನು ಉಂಟುಮಾಡುತ್ತದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ವರದಿಯಲ್ಲಿ ಎಚ್ಚರಿಸಿದೆ.

ಬೆಂಗಳೂರಿನ ಹೆಬ್ಬಾಳ ಸುರಂಗ (ಟನಲ್) ರಸ್ತೆ ಯೋಜನೆ
ಬೆಂಗಳೂರಿನ ಹೆಬ್ಬಾಳ ಸುರಂಗ (ಟನಲ್) ರಸ್ತೆ ಯೋಜನೆಯು ತೀರಾ ಅವೈಜ್ಞಾನಿಕವಾಗಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಪ್ರೊ. ಆಶೀಶ್ ವರ್ಮಾ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆರು ಜನರ ತಜ್ಞರ ಸಂಶೋಧನಾ ತಂಡವು ರಾಜ್ಯಪಾಲರಿಗೆ ಸುದೀರ್ಘ ವರದಿ ಸಲ್ಲಿಸಿ ಆಗ್ರಹಿಸಿದೆ.
ರಾಜ್ಯಪಾಲರಿಗೆ ವರದಿ
ಹೆಬ್ಬಾಳದಿಂದ ಮೇಕ್ರಿ ಸರ್ಕಲ್ ಹಾಗೂ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ಮಾರ್ಗದ ಕುರಿತು ಸಮಗ್ರ ಅಧ್ಯಯನ ನಡೆಸಿರುವ ಈ ತಂಡ, ಯೋಜನೆಯಿಂದ ಎದುರಾಗಬಹುದಾದ ಗಂಭೀರ ಸಮಸ್ಯೆಗಳನ್ನು ರಾಜ್ಯಪಾಲರಿಗೆ ಸವಿಸ್ತಾರವಾಗಿ ವಿವರಿಸಿದೆ. ಈ ಸುರಂಗ ರಸ್ತೆಯಿಂದಾಗಿ ಟ್ರಾಫಿಕ್ ಸಮಸ್ಯೆ ಬಗೆಹರಿಯುವ ಬದಲು ಮೇಕ್ರಿ ಸರ್ಕಲ್ ಹಾಗೂ ಹೆಬ್ಬಾಳ ಫ್ಲೈಓವರ್ ಮುಗಿಯುವ ಸ್ಥಳಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ವರದಿ ಎಚ್ಚರಿಸಿದೆ.
ಪ್ರವಾಹ ಉಂಟಾಗುವ ಭೀತಿ
ಹೆಬ್ಬಾಳ ಪ್ರದೇಶವು ತಗ್ಗು ಪ್ರದೇಶದಲ್ಲಿರುವುದರಿಂದ (Low area) ಮಳೆ ಬಂದಾಗ ಸುರಂಗ ಮಾರ್ಗದಲ್ಲಿ ಪ್ರವಾಹ ಉಂಟಾಗುವ ಭೀತಿಯಿದ್ದು, ಈ ಯೋಜನೆಯಿಂದ ಹೆಬ್ಬಾಳ ಕೆರೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಉದ್ಯಾನವನಗಳಿಗೆ ಅಪಾರ ಹಾನಿಯಾಗಲಿದೆ. ಮೂಲ ಯೋಜನಾ ವೆಚ್ಚಕ್ಕಿಂತ ನಿರ್ಮಾಣ ವೆಚ್ಚವು ಈಗಾಗಲೇ ಆರು ಪಟ್ಟು ಹೆಚ್ಚಾಗಿದ್ದು, ಇದು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದಂತಾಗುತ್ತದೆ.
'E' ಮತ್ತು 'F' ರೇಟಿಂಗ್
ಈ ಮಾರ್ಗದಲ್ಲಿ ವಿಧಿಸಲಾಗುವ ಭಾರಿ ಟೋಲ್ ಸಾಮಾನ್ಯ ನಾಗರಿಕರಿಗೆ ಭರಿಸಲಾಗದ ಹೊರೆಯಾಗಲಿದ್ದು, ಇದು ಕೇವಲ ಶ್ರೀಮಂತರಿಗೆ (Super rich) ಮಾತ್ರ ಸೀಮಿತವಾದ ರಸ್ತೆಯಾಗಲಿದೆ. ತಮ್ಮ ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಈ ಯೋಜನೆಗೆ 'E' ಮತ್ತು 'F' ರೇಟಿಂಗ್ ಸಿಕ್ಕಿದ್ದು, ಯಾವುದೇ ಸೂಕ್ತ ತಾಂತ್ರಿಕ ಸಿದ್ಧತೆಗಳಿಲ್ಲದೆ ಸರ್ಕಾರ ಟೆಂಡರ್ ಕರೆದಿರುವುದು ಆಶ್ಚರ್ಯಕರವಾಗಿದೆ ಎಂದು ತಂಡ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯಪಾಲರಲ್ಲಿ ಮನವಿ
ಈ ಎಲ್ಲಾ ಕಾರಣಗಳಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಈಗಾಗಲೇ ನೀಡಿರುವ ಟೆಂಡರ್ ಹಾಗೂ ಇಡೀ ಯೋಜನೆಯನ್ನೇ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು IISc ತಂಡವು ರಾಜ್ಯಪಾಲರಲ್ಲಿ ಮನವಿ ಮಾಡಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

