ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು, ಚಾಲನೆ ಮಾಡುವಾಗ ಆನ್‌ಲೈನ್ ಮೀಟಿಂಗ್‌ಗಳಲ್ಲಿ ಭಾಗವಹಿಸದಂತೆ ತಮ್ಮ ಉದ್ಯೋಗಿಗಳಿಗೆ ಸೂಚಿಸಲು ಸಂಚಾರ ಪೊಲೀಸರು ಐಟಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು (ಸೆ.2): ಔಟರ್ ರಿಂಗ್ ರೋಡ್‌ನಲ್ಲಿ (ORR) ಪ್ರತಿದಿನ ಬೆಳಿಗ್ಗೆ ಸಂಚರಿಸುವ ಐಟಿ ಉದ್ಯೋಗಿಗಳಿಗೆ ಟ್ರಾಫಿಕ್ ನಡುವೆ ವಾಹನ ಚಾಲನೆ ಮಾಡುವುದೇ ಒಂದು ದೊಡ್ಡ ಸವಾಲು. ಅನೇಕ ಟೆಕ್ಕಿಗಳಿಗೆ ಈ ಪ್ರಯಾಣದ ಸಮಯವೇ ಆಫೀಸ್ ಕೆಲಸದ ಸಮಯವಾಗಿಯೂ ಮಾರ್ಪಟ್ಟಿದೆ. ಆದರೆ, ಈಗ ಬೆಂಗಳೂರು ನಗರ ಸಂಚಾರ ಪೊಲೀಸರು (BTP) ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಡ್ರೈವಿಂಗ್ ಮಾಡುತ್ತಾ ಆನ್‌ಲೈನ್ ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯುವಂತೆ ಪೊಲೀಸರು ಐಟಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
ಬೆಳಗಿನ ದಟ್ಟಣೆಯ ಸಮಯದಲ್ಲಿ ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಬಿಟಿಪಿ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಚಾಲನೆ ಮಾಡುತ್ತಾ ಆನ್‌ಲೈನ್ ಮೀಟಿಂಗ್ ಅಥವಾ ಆಡಿಯೋ ಕಾಲ್‌ಗಳಲ್ಲಿ ಮಾತನಾಡುವುದನ್ನು ನಿಲ್ಲಿಸುವಂತೆ ತಮ್ಮ ಉದ್ಯೋಗಿಗಳಿಗೆ ನಿರ್ದೇಶನ ನೀಡಬೇಕೆಂದು ಐಟಿ ಸಂಸ್ಥೆಗಳಿಗೆ ಮನವಿ ಮಾಡಿದೆ.
ಡ್ರೈವಿಂಗ್ ಮಾಡುವಾಗ ಮೀಟಿಂಗ್‌ನತ್ತ ಗಮನ, ಇದರಿಂದಲೇ ಜಾಮ್
ವಾಹನ ಚಲಾಯಿಸುವಾಗ ಕೆಲಸದ ಕರೆಗಳನ್ನು ಸ್ವೀಕರಿಸುವುದು ಅಥವಾ ಮೀಟಿಂಗ್‌ಗಳಲ್ಲಿ ಭಾಗವಹಿಸುವುದರಿಂದ ಚಾಲಕರ ಗಮನ ಬೇರೆಡೆ ಸೆಳೆಯಲ್ಪಡುತ್ತದೆ . ಇದರಿಂದ ವಾಹನಗಳ ವೇಗ ಕಡಿಮೆಯಾಗುವುದು, ದಿಢೀರ್ ಬ್ರೇಕ್ ಹಾಕುವುದು ಹಾಗೂ ಲೇನ್ ಶಿಸ್ತು (Lane Discipline) ತಪ್ಪುವುದು ನಡೆಯುತ್ತದೆ. ಇದು ಅಂತಿಮವಾಗಿ ಇಡೀ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಮುಕ್ತಗೊಳಿಸಲು ಬಿಟಿಪಿ ಸಿದ್ಧಪಡಿಸಿರುವ 'ಕಾರ್ಪೊರೇಟ್ ಮೊಬಿಲಿಟಿ' ಪ್ರೆಸೆಂಟೇಷನ್‌ನಲ್ಲಿ ಈ ಪ್ರಸ್ತಾವನೆಯನ್ನು ಸೇರಿಸಲಾಗಿದೆ. ಬೆಳಗಿನ ಜಾವ ಆಫೀಸ್‌ಗೆ ತೆರಳುವಾಗ ಅನೇಕ ಟೆಕ್ಕಿಗಳು ಕಾಲ್‌ನಲ್ಲಿರುವುದನ್ನು ರಸ್ತೆಯಲ್ಲಿ ನಿಲ್ಲುವ ಟ್ರಾಫಿಕ್ ಪೊಲೀಸರು ಗಮನಿಸಿದ್ದಾರೆ.
ಉದ್ಯೋಗಿಗಳು ತಲುಪಬೇಕಾದ ಸ್ಥಳವನ್ನು ತಲುಪಿದ ನಂತರ ಅಥವಾ ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸಿದ (Park) ನಂತರವಷ್ಟೇ ವರ್ಚುವಲ್ ಮೀಟಿಂಗ್‌ಗಳಿಗೆ ಹಾಜರಾಗಬೇಕು ಎಂದು ಕಂಪನಿಗಳು ಸೂಚಿಸಬೇಕೆಂಬುದು ಪೊಲೀಸರ ಆಶಯ. ಈ ನಿಯಮವನ್ನು ಕಂಪನಿಗಳ 'ಖಾಸಗಿ ನಡಾವಳಿ ನಿಯಮಾವಳಿ' (Corporate Code of Conduct) ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇವಲ ಟೆಕ್ಕಿಗಳಷ್ಟೇ ಅಲ್ಲ!
ಚಾಲನೆ ವೇಳೆ ಮೊಬೈಲ್ ಬಳಸಿ ಗಮನ ಬೇರೆಡೆ ಸೆಳೆದುಕೊಳ್ಳುವುದು ಕೇವಲ ಐಟಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ನಗರದ ಆಟೋ ಚಾಲಕರು ಸೇರಿದಂತೆ ಹಲವರು ಡ್ರೈವಿಂಗ್ ಮಾಡುವಾಗ ಇನ್‌ಸ್ಟಾಗ್ರಾಮ್ ರೀಲ್ಸ್ (Reels) ವೀಕ್ಷಿಸುವುದನ್ನು ಸಹ ಕಾಣಬಹುದು. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆಯು ಸಮಯ ಪ್ರಜ್ಞೆ ಹಾಗೂ ವಾಹನದ ವೇಗದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಐಟಿ ಸಂಸ್ಥೆಗಳು ಹಾಗೂ ಉದ್ಯೋಗಿಗಳ ಪ್ರತಿಕ್ರಿಯೆ ಏನು?
ಪೋಲೀಸರ ಈ ಪ್ರಸ್ತಾವನೆಗೆ ಐಟಿ ವಲಯದಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ. ಔಟರ್ ರಿಂಗ್ ರೋಡ್ ಕಂಪನಿಗಳ ಸಂಘದ (ORRCA) ವಕ್ತಾರರು ಮಾತನಾಡಿ, ಪೊಲೀಸರು ಮೊದಲು ಮೂಲಭೂತ ಸಂಚಾರ ನಿಯಮಗಳನ್ನು ಜಾರಿಗೆ ತರಲು ಗಮನ ಹರಿಸಬೇಕು ಎಂದಿದ್ದಾರೆ.
ರಾಂಗ್ ರೂಟ್ ಡ್ರೈವಿಂಗ್, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುವುದು ಹಾಗೂ ಪೀಕ್ ಅವರ್‌ಗಳಲ್ಲಿ ಭಾರಿ ವಾಹನಗಳ ಸಂಚಾರದ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಪ್ರೆಶರ್ ಮತ್ತು ಟ್ರಾಫಿಕ್ ಕಿರಿಕಿರಿ ತಪ್ಪಿಸಲು, ತಮ್ಮ ಅಮೂಲ್ಯ ಸಮಯ ಹಾಳಾಗಬಾರದು ಎಂದೇ ಉದ್ಯೋಗಿಗಳು ಕಾರಿನಲ್ಲಿ ಪ್ರಯಾಣಿಸುವಾಗ ಮೀಟಿಂಗ್‌ಗಳಲ್ಲಿ ಭಾಗವಹಿಸುತ್ತಾರೆ. ಇದನ್ನು ತಡೆಯುವುದು ಕಂಪನಿಗಳಿಗಾಗಲಿ ಅಥವಾ ಪೊಲೀಸರಿಗಾಗಲಿ ಕಾರ್ಯಸಾಧ್ಯವಲ್ಲ (Practically Impossible)" ಎಂದು ORRCA ವಕ್ತಾರರು ಹೇಳಿದ್ದಾರೆ.
ಟ್ರಾಫಿಕ್‌ನಲ್ಲಿ ಹೋಗುವಾಗ ನಾನು ಕಾಲ್‌ಗಳನ್ನು ತೆಗೆದುಕೊಳ್ಳುತ್ತೇನೆ. ಇದರಿಂದ ಗಮನ ಭಂಗವಾಗುವುದು ನಿಜವಾದರೂ, ಸಮಯ ಉಳಿಸಲು ಹಾಗೂ ಕೆಲಸ ಮುಗಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಟೆಕ್ಕಿಯೊಬ್ಬರು ಹೇಳಿದ್ದಾರೆ.
ರಸ್ತೆಯಲ್ಲಿ ಟ್ರಾಫಿಕ್ ಸಂಪೂರ್ಣವಾಗಿ ನಿಂತುಹೋದಾಗ ಲ್ಯಾಪ್‌ಟಾಪ್ ಓಪನ್ ಮಾಡಿ ಕೆಲಸ ಮಾಡುವುದರಲ್ಲಿ ತಪ್ಪೇನೂ ಕಾಣಿಸುತ್ತಿಲ್ಲ. ಬೆಂಗಳೂರಿನಲ್ಲಿ ಸುಲಭವಾಗಿ ಪ್ರಯಾಣಿಸುವುದು ಈಗ ದೂರದ ಮಾತಾಗಿದೆ. ಹಾಗಾಗಿ, ರಸ್ತೆಯ ಈ ಅಸ್ತವ್ಯಸ್ತ ಸ್ಥಿತಿಗೆ ಹೊಂದಿಕೊಂಡು ಕೆಲಸ ಮುಗಿಸಲು ನಾವು ಈ ಮಾರ್ಗ ಕಂಡುಕೊಂಡಿದ್ದೇವೆ ಎಂದು ಇನ್ನೊಬ್ಬ ಟೆಕ್ಕಿ ಹೇಳಿದ್ದಾರೆ.


