ಬೆಂಗಳೂರಿನ ಪ್ಲೇಸ್ಕೂಲ್ ಶಿಕ್ಷಕಿಯೊಬ್ಬರಿಗೆ ಕೇವಲ ₹6,000 ಸಂಬಳ ನೀಡಿದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದುಬಾರಿ ನಗರದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಶಿಕ್ಷಕರ ಕಡಿಮೆ ವೇತನದ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಜು.10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ವೆಚ್ಚ (Cost of Living) ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಪ್ಲೇಸ್ಕೂಲ್ (LKG/UKG) ಶಿಕ್ಷಕಿಯೊಬ್ಬರಿಗೆ ನೀಡಲಾದ ಅತೀ ಕಡಿಮೆ ಸಂಬಳದ ಕುರಿತಾದ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಇದೀಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. ಇಷ್ಟು ಕಡಿಮೆ ಆದಾಯದಲ್ಲಿ ಈ ಮೆಟ್ರೋ ನಗರದಲ್ಲಿ ಯಾರಾದರೂ ಬದುಕಲು ಸಾಧ್ಯವೇ ಎಂದು ನೆಟ್ಟಿಗರು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ. ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈ ಇಡೀ ಚರ್ಚೆಗೆ ಕಾರಣವಾಗಿದೆ. ತಮ್ಮ ನಾದಿನಿಗೆ ಬೆಂಗಳೂರಿನ ಪ್ಲೇಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿದ್ದು, ಆಕೆಗೆ ತಿಂಗಳಿಗೆ ಕೇವಲ 6,000 ರೂಪಾಯಿ ಸಂಬಳ ನಿಗದಿಪಡಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ತಮ್ಮ ಪೋಸ್ಟ್‌ನಲ್ಲಿ, "ನನ್ನ ನಾದಿನಿಗೆ ಪ್ಲೇಸ್ಕೂಲ್/ಕಿಂಡರ್‌ಗಾರ್ಟನ್ ಶಿಕ್ಷಕಿಯಾಗಿ ಕೆಲಸ ಸಿಕ್ಕಿದೆ. ಆಕೆಗೆ ಬೆಂಗಳೂರಿನಲ್ಲಿ ತಿಂಗಳಿಗೆ ಬರೋಬ್ಬರಿ 6,000 ರೂಪಾಯಿ ಸಂಬಳ ನೀಡಲಾಗುತ್ತದೆಯಂತೆ! ಇಂದು ಶಾಲೆಗಳ ಫೀಸ್ ಗಗನಚುಂಬಿಯಾಗುತ್ತಿದ್ದರೆ, ಶಿಕ್ಷಕರ ಸಂಬಳ ಮಾತ್ರ ತಳ ಹಿಡಿಯುತ್ತಿದೆ. ಇಂತಹ ಮೆಟ್ರೋ ಸಿಟಿಯಲ್ಲಿ ತಿಂಗಳಿಗೆ 6,000 ರೂಪಾಯಿಗಿಂತ ಕಡಿಮೆ ಹಣದಲ್ಲಿ ಯಾರಾದರೂ ಹೇಗೆ ತಾನೇ ಬದುಕಲು ಸಾಧ್ಯ?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಕಾಮೆಂಟ್ಸ್‌

ಮನೆಗೆಲಸದವರಿಗಿಂತ ಕಮ್ಮಿ ಸಂಬಳ: "ನಮ್ಮ ಮನೆಯಲ್ಲಿ ಅರ್ಧ ದಿನ ಮಾತ್ರ ಕೆಲಸ ಮಾಡುವ ಮನೆಗೆಲಸದ ಮಹಿಳೆ ಕೂಡ ಇದಕ್ಕಿಂತ ಹೆಚ್ಚಿನ ಹಣ ಗಳಿಸುತ್ತಾಳೆ" ಎಂದು ಯೂಸರ್‌ ಒಬ್ಬರು ಬರೆದುಕೊಂಡಿದ್ದಾರೆ.

ಬೇಡಿಕೆ ಮತ್ತು ಪೂರೈಕೆಯ ತಾರತಮ್ಯ: ಮತ್ತೊಬ್ಬರು ಕಾಮೆಂಟ್ ಮಾಡಿ, "ಇದು ಮಾರುಕಟ್ಟೆಯಲ್ಲಿರುವ ಬೇಡಿಕೆ ಮತ್ತು ಪೂರೈಕೆಯ ನಡುವಿನ ತಾರತಮ್ಯವನ್ನು ತೋರಿಸುತ್ತದೆ. ಭಾರತದಲ್ಲಿ ನರ್ಸ್‌ ಕೂಡ ತಿಂಗಳಿಗೆ ಕೇವಲ 10,000 ದಿಂದ 15,000 ರೂ. ಗಳಿಸುತ್ತಾರೆ. ಅದೇ ಅವರು ಯುರೋಪ್ ಅಥವಾ ಗಲ್ಫ್ ದೇಶಗಳಿಗೆ ಹೋದರೆ ಭವ್ಯವಾಗಿ ಬದುಕುತ್ತಾರೆ" ಎಂದು ವ್ಯವಸ್ಥೆಯನ್ನು ಕುಟುಕಿದ್ದಾರೆ.

ಆಯಾಗಳಿಗಿಂತಲೂ ಕಮ್ಮಿ ವೇತನ: "ಸ್ನ್ಯಾಬಿಟ್ (Snabbit) ಕಂಪನಿಯು ತನ್ನ ಉದ್ಯೋಗಿಗಳಿಗೆ 18,000 ರೂ. ನಿಂದ 20,000 ರೂ. ನೀಡುತ್ತದೆ. ಬಹುಶಃ ನಿಮ್ಮ ನಾದಿನಿಗೆ ಆ ಕಿಂಡರ್‌ಗಾರ್ಟನ್‌ನಲ್ಲಿ ಕೆಲಸ ಮಾಡುವ ಆಯಾ ಅಥವಾ ಹೆಲ್ಪರ್‌ಗಳಿಗಿಂತಲೂ ಕಡಿಮೆ ಸಂಬಳ ನೀಡಲಾಗುತ್ತಿದೆ ಅನಿಸುತ್ತದೆ. ಆಕೆ ಈ ಸಂಬಳಕ್ಕೆ ಆ ಕೆಲಸಕ್ಕೆ ಸೇರಲೇಬಾರದು" ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

ಸರ್ಕಾರದ ಲೆಕ್ಕಾಚಾರದ ವ್ಯಂಗ್ಯ: ಸರ್ಕಾರದ ನೀತಿಗಳನ್ನು ವ್ಯಂಗ್ಯವಾಡಿರುವ ಮತ್ತೊಬ್ಬ ನೆಟ್ಟಿಗ, "ಸರ್ಕಾರದ ಲೆಕ್ಕಾಚಾರದ ಪ್ರಕಾರ, ಈ 6,000 ರೂಪಾಯಿಯಲ್ಲಿ ಆಕೆ 1,000 ರೂ. ಬಾಡಿಗೆ ಕಟ್ಟಬಹುದು, 1,000 ರೂ. ಮಕ್ಕಳ ಶಿಕ್ಷಣಕ್ಕೆ ಇಡಬಹುದು, 500 ರೂ. ಕರೆಂಟ್ ಮತ್ತು ನೀರಿಗೆ ನೀಡಬಹುದು, ತರಕಾರಿಗೆ 1,000 ರೂ. ಖರ್ಚು ಮಾಡಬಹುದು. ಬೆಂಗಳೂರಿನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ ಇರುವುದರಿಂದ ಆ ಹಣ ಉಳಿಯುತ್ತದೆ. ಇನ್ನುಳಿದ ಹಣದಲ್ಲಿ 1,000 ರೂ. ಉಳಿತಾಯ ಮಾಡಿ, ಬಾಕಿ ಹಣದಲ್ಲಿ ಹೊರಗಡೆ ಹೋಟೆಲ್‌ನಲ್ಲಿ ಊಟ ಮಾಡಿ ಎಂಜಾಯ್ ಮಾಡಬಹುದು! ಆಕೆ ಕೇವಲ ಅಡ್ಜಸ್ಟ್ ಮಾಡಿಕೊಳ್ಳಬೇಕು ಮತ್ತು ಎಂದಿಗೂ ದೂರು ನೀಡಬಾರದು, ನೀಡಿದರೆ ಕೆಲಸ ಹೋಗುತ್ತದೆ ಅಷ್ಟೇ" ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.