ಬೆಂಗಳೂರಿನ Gen Z ಉದ್ಯಮಿ ಆಕಾಶ್ ನಾರಾಯಣ್ ಅವರು ಕೇವಲ 24ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದಾರೆ. ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿರುವ ಯುವ ಉದ್ಯಮಿಯೊಬ್ಬರ ಕಥೆ ಇದೀಗ ಭಾರೀ ಗಮನ ಸೆಳೆಯುತ್ತಿದೆ.
ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವುದು ಅನೇಕರ ಕನಸು. ಆದರೆ, 24ನೇ ವಯಸ್ಸಿನಲ್ಲೇ ₹1.8 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿರುವ ಯುವ ಉದ್ಯಮಿಯೊಬ್ಬರ ಕಥೆ ಇದೀಗ ಭಾರೀ ಗಮನ ಸೆಳೆಯುತ್ತಿದೆ. ಬೆಂಗಳೂರಿನ Gen Z ಉದ್ಯಮಿ ಆಕಾಶ್ ನಾರಾಯಣ್ ಅವರು ಕೇವಲ 24ನೇ ವಯಸ್ಸಿಗೆ ಈ ಸಾಧನೆ ಮಾಡಿದ್ದಾರೆ. ಇಂದು ಅವರು ವಾರ್ಷಿಕವಾಗಿ ಬರೋಬ್ಬರಿ ₹13 ಕೋಟಿ ಒಟ್ಟು ಆದಾಯ ಗಳಿಸುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ಕಾನೂನು-ತಂತ್ರಜ್ಞಾನ ಸ್ಟಾರ್ಟ್‌ಅಪ್ ನಡೆಸುತ್ತಿದ್ದಾರೆ. ಆದರೆ, ಈ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ತಮಗೆ ಮಾತ್ರ ನೀಡದ ಆಕಾಶ್, ತಮ್ಮ ತಾಯಿ, ಮಾರ್ಗದರ್ಶಕರು, ಆರಂಭಿಕ ತಂಡ ಮತ್ತು ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾರೆ.
24ನೇ ವಯಸ್ಸಿಗೇ ₹1.8 ಕೋಟಿ ಅಪಾರ್ಟ್‌ಮೆಂಟ್
ಆಕಾಶ್ ನಾರಾಯಣ್ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಕಾಸಾಗ್ರಾಂಡ್ ವಿವಾಸಿಟಿಯಲ್ಲಿ ₹1.8 ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಸದ್ಯ ಈ ವಸತಿ ಯೋಜನೆ ನಿರ್ಮಾಣ ಹಂತದಲ್ಲಿದ್ದು, 2027ರ ಏಪ್ರಿಲ್ ವೇಳೆಗೆ ಫ್ಲ್ಯಾಟ್ ಹಸ್ತಾಂತರವಾಗುವ ನಿರೀಕ್ಷೆಯಿದೆ. ಆಕಾಶ್ ಪಾಲಿಗೆ ಇದು ಕೇವಲ ಐಷಾರಾಮಿ ಮನೆ ಖರೀದಿಯಲ್ಲ. ಜೀವನದಲ್ಲಿ ಹಲವು ವರ್ಷಗಳ ಅನಿಶ್ಚಿತತೆ, ಕಷ್ಟ ಮತ್ತು ಹೋರಾಟದ ಬಳಿಕ ಸಿಕ್ಕಿರುವ ದೊಡ್ಡ ಮೈಲಿಗಲ್ಲು. ಒಂದು ಕಾಲದಲ್ಲಿ ಏನೂ ಸರಿಯಾಗಿ ನಡೆಯದ ಪರಿಸ್ಥಿತಿಯಿಂದ ಇಂದು ಆರ್ಥಿಕ ಸ್ವಾತಂತ್ರ್ಯದ ಹಂತಕ್ಕೆ ತಲುಪಿರುವುದನ್ನು ಅವರು ತಮ್ಮ ಯಶಸ್ಸಿನ ಪ್ರಮುಖ ಭಾಗವಾಗಿ ನೋಡುತ್ತಾರೆ.
ಇದು ನನ್ನೊಬ್ಬನ ಸಾಧನೆಯಲ್ಲ
ತಮ್ಮ ಮೊದಲ ಅಪಾರ್ಟ್‌ಮೆಂಟ್ ಖರೀದಿಸಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕಾಶ್, 24ನೇ ವಯಸ್ಸಿನಲ್ಲಿ ಸ್ವಂತ ಮನೆ ಖರೀದಿಸಿರುವುದು ತಮ್ಮೊಬ್ಬರ ಸಾಧನೆಯಲ್ಲ ಎಂದು ಹೇಳಿದ್ದಾರೆ. ನಾನು 24ನೇ ವಯಸ್ಸಿನಲ್ಲಿ ನನ್ನ ಮೊದಲ ಅಪಾರ್ಟ್‌ಮೆಂಟ್ ಖರೀದಿಸಿದೆ. ಹಿಂತಿರುಗಿ ನೋಡಿದಾಗ, ಈ ಮೈಲಿಗಲ್ಲು ನನ್ನದು ಮಾತ್ರವಲ್ಲ. ಇದು ನನ್ನ ಕುಟುಂಬ, ನನ್ನ ಮಾರ್ಗದರ್ಶಕರು, ನನ್ನ ತಂಡ ಮತ್ತು ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನನ್ನನ್ನು ನೆಲದ ಮೇಲೆ ಇರಿಸಿದ ಸ್ನೇಹಿತರಿಗೆ ಸೇರಿದೆ ಎಂದು ಅವರು ಹೇಳಿದ್ದಾರೆ. ಪ್ರತಿ ಪಾಠ, ಪ್ರತಿ ತಡರಾತ್ರಿ ಮತ್ತು ಪ್ರತಿ ತ್ಯಾಗವೂ ನನ್ನನ್ನು ಈ ಕ್ಷಣಕ್ಕೆ ಕರೆತಂದಿದೆ. ನಾನು ಎಲ್ಲಿದ್ದೇನೆ ಎಂಬುದಕ್ಕೆ ಆಳವಾಗಿ ಕೃತಜ್ಞನಾಗಿದ್ದೇನೆ. ನಾವು ಮುಂದೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಬಗ್ಗೆ ಇನ್ನಷ್ಟು ಉತ್ಸಾಹವಿದೆ. ಇದು ಕೇವಲ ಆರಂಭ" ಎಂದು ಆಕಾಶ್ ಬರೆದಿದ್ದಾರೆ.
ಕಷ್ಟದ ದಿನಗಳಲ್ಲಿ ತಾಯಿ ನೀಡಿದ ಬೆಂಬಲ
ಫ್ಲ್ಯಾಟ್‌ನ ಕೀ ಕೈಗೆ ಸಿಕ್ಕಿದ ಸಂದರ್ಭದಲ್ಲಿ ಮೊದಲಿಗೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು ಎಂದು ಅನಿಸಲಿಲ್ಲ ಎಂದು ಆಕಾಶ್ ಹೇಳಿದ್ದಾರೆ. ಬದಲಾಗಿ, ತಮ್ಮ ಜೀವನದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದ ಕಷ್ಟದ ವರ್ಷಗಳು ನೆನಪಿಗೆ ಬಂದವು. ಆಗ ಇಂತಹ ಮನೆ ಖರೀದಿಸುವುದು ತಮ್ಮ ಪಾಲಿಗೆ ಅಂತಿಮ ಕನಸಿನಂತಿತ್ತು ಎಂದು ಅವರು ಹೇಳಿದ್ದಾರೆ. ನನ್ನ ತಾಯಿ ಯಾವುದೇ ಖಚಿತತೆ ಇಲ್ಲದ ಸಮಯದಲ್ಲೂ ಪ್ರತಿದಿನ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಆರಂಭಿಕ ತಂಡವು ಸಾಬೀತಾಗದ ಉತ್ಪನ್ನ ಮತ್ತು ಅನನುಭವಿ ಸಂಸ್ಥಾಪಕನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿತು. ಹೀಗಾಗಿ ಈ ಯಶಸ್ಸನ್ನು ಒಬ್ಬಂಟಿಯಾಗಿ ಆಚರಿಸುವುದು ನನಗೆ ಪ್ರಾಮಾಣಿಕವಾಗಿ ಅನಿಸಲಿಲ್ಲ ಎಂದು ಆಕಾಶ್ ಹೇಳಿದ್ದಾರೆ.
₹13 ಕೋಟಿ ವಾರ್ಷಿಕ ಆದಾಯ ಗಳಿಸುವ ಸ್ಟಾರ್ಟ್‌ಅಪ್
ಆಕಾಶ್ ನಾರಾಯಣ್ ಅವರು 2023ರಲ್ಲಿ ತಮ್ಮ ಕಂಪನಿ ಲೀಗಲಿಟ್ (Legalit) ಅನ್ನು ಸ್ಥಾಪಿಸಿದ್ದಾರೆ. ವಕೀಲರಿಗಾಗಿ ಪ್ರಾಕ್ಟೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಗಿ ಈ ಕಂಪನಿಯನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಕಾನೂನು ಕ್ಷೇತ್ರ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ನಿರ್ಮಿಸಿರುವ ಈ ಸ್ಟಾರ್ಟ್‌ಅಪ್ ಇದೀಗ ವೇಗವಾಗಿ ಬೆಳೆಯುತ್ತಿದೆ. ವರದಿಗಳ ಪ್ರಕಾರ, ಕಂಪನಿ ವಾರ್ಷಿಕವಾಗಿ ಸುಮಾರು ₹13 ಕೋಟಿ ಒಟ್ಟು ಆದಾಯ ಗಳಿಸುತ್ತಿದೆ. ಕೇವಲ ಕೆಲವೇ ವರ್ಷಗಳಲ್ಲಿ ಸ್ಟಾರ್ಟ್‌ಅಪ್ ಅನ್ನು ಈ ಮಟ್ಟಕ್ಕೆ ಬೆಳೆಸಿರುವ ಆಕಾಶ್, ಇದೀಗ ತಮ್ಮ ಸ್ವಂತ ಮನೆ ಖರೀದಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
ಕಾನೂನು ಓದಿದ ಆಕಾಶ್, ಡೇಟಾ ಸೈನ್ಸ್ ಕೂಡ ಕಲಿತರು
ಆಕಾಶ್ ನಾರಾಯಣ್ ಅವರ LinkedIn ಪ್ರೊಫೈಲ್ ಪ್ರಕಾರ, ಅವರು ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಮಣಿಪಾಲ್ ಯೂನಿವರ್ಸಿಟಿ ಜೈಪುರದಲ್ಲಿ ಡೇಟಾ ಸೈನ್ಸ್ ಅಧ್ಯಯನ ಮಾಡಿದ್ದಾರೆ. ಕಾನೂನು ಮತ್ತು ಡೇಟಾ ಸೈನ್ಸ್ ಕ್ಷೇತ್ರದ ಜ್ಞಾನವನ್ನು ಒಟ್ಟುಗೂಡಿಸಿ, 2023ರಲ್ಲಿ Legalit ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಂದು ಅದೇ ಕಂಪನಿ ಅವರ ಯಶಸ್ಸಿನ ಪ್ರಮುಖ ಭಾಗವಾಗಿದೆ.
