ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಹೋರಾಟ ತೀವ್ರಗೊಂಡಿದೆ. ಪ್ರತಿಭಟನೆ ತೀವ್ರಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 13ಕ್ಕೆ ಕರ್ನಾಟಕ ಬಂದ್ ಘೋಷಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಬೆಂಗಳೂರು (ಜು.31) ಕಾವೇರಿ ನದಿ ನೀರು ವಿವಾದ ತೀವ್ರಗೊಳ್ಳುತ್ತಿದೆ. ಕರ್ನಾಟಕ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಬೆನ್ನಲ್ಲೇ ಕಾವೇರಿ ನೀರು ತಮಿಳುನಾಡಿಗೆ ಹರಿಸುವ CWRC ಆದೇಶ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿದೆ. ಬಂದ್ ಬೇಕು ಬೇಡ ನಡುವೆ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿದ ಕನ್ನಡ ಪರ ಸಂಘಟನೆಗಳು ಮಹತ್ವದ ನಿರ್ಧಾರ ಘೋಷಿಸಿದೆ.

ಆಗಸ್ಟ್ 13ಕ್ಕೆ ಕರ್ನಾಟಕ ಬಂದ್, ಬೆಳಗ್ಗೆ 6 ಗಂಟೆಯಿಂದ ಬಂದ್

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸೂಕ್ತ ಪರಿಹಾರ ನೀಡಲು ಬಯಸಿರುವ ಕನ್ನಡ ಪರ ಸಂಘಟನೆಗಳು ಆಗಸ್ಟ್ 13ಕ್ಕೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ಆಗಸ್ಟ್ 13ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಎಲ್ಲರೂ, ಎಲ್ಲಾ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿ. ಇದು ಕರ್ನಾಟಕ ಜನರ ನೀರಿನ ಸಮಸ್ಯೆಗಾಗಿ ನಡೆಯುತ್ತಿರುವ ಹೋರಾಟ ಎಂದು ವಾಟಾಳ್ ನಾಗಾರಾಜ್ ಮನಿ ಮಾಡಿದ್ದಾರೆ. ಎಲ್ಲಾ ರೈತರು ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಂದ್ ಮ‌ೂಲಕ ಉತ್ತರಿಸಲು ಸಂಘಟನಗಳು ಮುಂದಾಗಿದೆ.

ಕಾವೇರಿ ಹೋರಾಟಕ್ಕೆ ಆಟೋ ಚಾಲಕ ಸಂಘಟನೆಗಳ ಬೆಂಬಲ

ಆಗಸ್ಟ್ 13 ಕ್ಕೆ ಕರೆ ನೀಡಿರುವ ಬಂದ್‌ಗೆ ಆದರ್ಶ್ ಆಟೋ ಡ್ರೈವರ್ಸ್ ಯೂನಿಯನ್ ಬೆಂಬಲ ಸೂಚಿಸಿದೆ. ಆಗಸ್ಟ್ 13ಕ್ಕೆ ಆಟೋ ಸಂಚಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ ಆಗಸ್ಟ್ 13ರಂದು ಸಂಪೂರ್ಣ ಆಟೋ ಸಂಚಾರ ಬಂದ್ ಆಗಲಿದೆ ಎಂದಿದೆ.

ಸಾರಾ ಗೋವಿಂದು ಹೇಳಿದ್ದೇನು?

ಪದೇಪದೇ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ತೀರ್ಪಿನ ವಿಚಾರವಾಗಿ ಮೇಲ್ಮನವಿ ಸಲ್ಲಿಸಿದಾಗಲೇ ನಮಗೆ ಗೊತ್ತಾಗಿತ್ತು. ಏನು ಬದಲಾವಣೆ ಆಗೋದಿಲ್ಲ ಎಂದು ತಿಳಿದಿತ್ತು. ಪ್ರತಿಬಾರಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ವಾಸ್ತವ ಪರಿಸ್ಥಿತಿ ಪರೀಶೀಲನೆ ಮಾಡದೇ ಅವೈಜ್ಞಾನಿಕವಾಗಿ ತೀರ್ಪು ನೀಡಿದ್ದಾರೆ. ಈ ರೀತಿ ಎಲ್ಲೀವರೆಗೆ ದಬ್ಬಾಳಿಕೆ ಮಾಡುತ್ತೀರಾ, ನಾವು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಾರಾ ಗೋವಿಂದ್ ಎಚ್ಚರಿಸಿದ್ದಾರೆ.

ಕರ್ನಾಟಕಕ್ಕೆ ಕುಡಿಯೋಕೆ ನೀಡಿಲ್ಲ

ವಾಟಾಳ್ ನಾಗರಾಜ್ ಹಾಗೂ ಸಾರಾ ಗೋವಿಂದ್ ನೇತೃತ್ವದಲ್ಲಿ ಸಭೆ ನಡಸಲಾಗಿದೆ. ಈಗಾಗಲೇ ಕಾವೇರಿ ನೀರು ತಮಿಳುನಾಡಿಗೆ ಬಿಡಬೇಕು ಅಂತ ಹೇಳಿದ್ದಾರೆ. ಎರಡು ಬಾರಿ ಆದೇಶ ಬಂದಿದೆ. ಕರ್ನಾಟಕಕ್ಕೆ ಕುಡಿಯೋದಕ್ಕೆ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಕರವೇ ಮುಖಂಡ ಶಿವರಾಮೆಗೌಡ ಪ್ರಶ್ನಿಸಿದ್ದಾರೆ. ಕಾವೇರಿ ಮಂಡಳಿ ನಮ್ಮ ಪಾಲಿಗೆ ಅನ್ಯಾಯ ಮಂಡಳಿಯಾಗಿದೆ ಎಂದಿದ್ದಾರೆ.

ನಮ್ಮ ಹೋರಾಟ ಮುಂದುವರಿಯುತ್ತೆ

ಕೇಂದ್ರ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರ ಕನ್ನಡದ ಮಕ್ಕಳಿಗೆ, ಕರ್ನಾಟಕಕ್ಕೆ ಮರಣ ಶಾಸನ ನೀಡಿದ್ದಾರೆ. ಮುಂದಿನ ಪೀಳಿಗೆಗೆ ನೀರನ್ನು ಉಳಿಸಿಕೊಳ್ಳಬೇಕು. ಸಿಎಂ ಅವರು ಬಂಗಾರಪ್ಪ ಅವರ ರೀತಿಯಲ್ಲಿ ಸುಗ್ರೀವಾಜ್ಞೆ ತಂದು ನೀರು ನಿಲ್ಲಿಸಬೇಕು. ನೀರು ನಿಲ್ಲಿಸದೇ ಇದ್ದರೇ ಕರ್ನಾಟಕ ಸಂಪೂರ್ಣ ಸ್ತಬ್ದವಾಗುತ್ತೆ. ಬೇರೆ ಕಡೆಯಿಂದ ನೀರು ತರುವ ಪ್ರಯತ್ನ ಮಾಡಿಲ್ಲ.. ಹೀಗಾಗಿ ಕಾವೇರಿ ನೀರು ಮುಖ್ಯ. ಹೀಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಕರವೇ ನಾಯಕ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.