ಬೆಂಗಳೂರಿನ ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ, ರಸ್ತೆ ಬದಿಯಲ್ಲಿದ್ದ ಮೂರು ದಶಕಗಳಷ್ಟು ಹಳೆಯದಾದ ಆಲದ ಮರವನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ರಸ್ತೆ ಬದಿಯ ದೊಡ್ಡ ಆಲದ ಮರವನ್ನು ರಾತ್ರೋರಾತ್ರಿ ಕಡಿದು ಹಾಕಿರುವುದನ್ನು ಖಂಡಿಸಿ ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು.

ಆರೋಗ್ಯವಾಗಿದ್ದ ಮರವನ್ನು ತಡರಾತ್ರಿ ಎರಡು ಗಂಟೆಯಲ್ಲಿ ಬಂದು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಈ ಮರವು ಸ್ಥಳೀಯರ ಪಾಲಿಗೆ ಪುರಾತನ ಕುರುಹುವಿನಂತೆ ಇತ್ತು. ಇದೇ ರೀತಿ ಸಮೀಪದ ಪ್ರದೇಶದಿಂದ ಮತ್ತೆರೆಡು ಮರಗಳನ್ನು ಕಡಿದು ಹಾಕಲಾಗಿದೆ. ಸುಮಾರು ಮೂರು ದಶಕಗಳಿಂದ ಇದ್ದ ದೊಡ್ಡ ಮರವು ಅನೇಕರಿಗೆ ನೆರಳು ನೀಡುತ್ತಿತ್ತು. ಆದರೆ ಈಗ ಬೋಳು ಬೋಳಾಗಿ ಕಾಣಿಸುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಮರ ಕತ್ತರಿಸಿರುವುದರಿಂದ ಆಘಾತಗೊಂಡಿರುವ ಸ್ಥಳೀಯರು ಪ್ರತಿಭಟನೆ ನಡೆಸಿದರು. ಮರ ಕಡಿಯಲು ಜಿಬಿಎನಿಂದ ಅನುಮತಿ ಪಡೆಯಲಾಗಿತ್ತೆ? ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮರ ಕಡಿಯಲಾಗಿದೆಯೇ? ಆರೋಗ್ಯವಂತ ಮರವನ್ನು ಕಡಿಯಲು ಕಾರಣವೇನು? ಅಧಿಕಾರಿಗಳು ಮರ ಕಡಿಯಲು ಅವಕಾಶ ನೀಡಿದ್ದು ಹೇಗೆ? ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. ಸಮೀಪದಲ್ಲೇ ನಿರ್ಮಾಣ ಹಂತದ ಕಟ್ಟಡಕ್ಕೆ ಅಡ್ಡಿಯಾಗುತ್ತದೆ ಎಂದು ಮರ ಕಡಿದು ಹಾಕಲಾಗಿದೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.