ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ದರ ಏರಿಕೆಯನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ನಗರದಾದ್ಯಂತ ಸಾವಿರಾರು ಚಿಕನ್ ಅಂಗಡಿಗಳು ಬಂದ್ ಆಗಲಿದ್ದು, ಗ್ರಾಹಕರು ಚಿಕನ್ ಅಭಾವ ಮತ್ತು ಬೆಲೆ ಏರಿಕೆಯನ್ನು ಎದುರಿಸುವ ಸಾಧ್ಯತೆಯಿದೆ.

ಬೆಂಗಳೂರು (ಸೆ.1): ರಾಜಧಾನಿ ಬೆಂಗಳೂರಿನ ಮಾಂಸ ಪ್ರಿಯರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. ಗುರುವಾರ ಮತ್ತು ಶುಕ್ರವಾರ ನಗರದಾದ್ಯಂತ ಚಿಕನ್ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಲಿವೆ. ತ್ಯಾಜ್ಯ ವಿಲೇವಾರಿ ಸಂಬಂಧ ಬಿಎಸ್‌ಡಬ್ಲ್ಯೂಎಮ್‌ಎಲ್‌ (BSWML) ಜಾರಿಗೊಳಿಸಲು ಹೊರಟಿರುವ ಹೊಸ ದರ ಪಟ್ಟಿಯನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ (KPTA) ಈ ಮುಷ್ಕರಕ್ಕೆ ಕರೆ ನೀಡಿದೆ.

ಚಿಕನ್ ಅಂಗಡಿಗಳಿಂದ ಹೊರಬರುವ ತ್ಯಾಜ್ಯಕ್ಕೆ (Poultry Waste) ಪ್ರತಿ ಕೆಜಿಗೆ ಬರೋಬ್ಬರಿ 5 ರೂಪಾಯಿ ದರ ನಿಗದಿಪಡಿಸಲು BSWML ಮುಂದಾಗಿದೆ. ಇದರಿಂದಾಗಿ ಪ್ರತಿಯೊಂದು ಸಣ್ಣ ಅಂಗಡಿಯ ಮಾಲೀಕರೂ ಪ್ರತಿದಿನ ಭಾರಿ ನಷ್ಟ ಅನುಭವಿಸುವಂತಾಗಿದೆ. ಸಂಸ್ಥೆಯ ಈ ನಿರ್ಧಾರ ಖಂಡಿಸಿ ವ್ಯಾಪಾರಿಗಳು ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಎರಡು ದಿನ ಚಿಕನ್ ಅಭಾವ

ನಗರದಲ್ಲಿರುವ ಸುಮಾರು 6,000 ದಿಂದ 7,000 ಚಿಕನ್ ಅಂಗಡಿಗಳು ಗುರುವಾರ ಮತ್ತು ಶುಕ್ರವಾರ ಬಂದ್ ಮಾಡಲು ನಿರ್ಧರಿಸಿವೆ. ಗುರುವಾರದ ಧರಣಿ ಪ್ರತಿಭಟನೆಯ ನಂತರ ಶುಕ್ರವಾರವೂ ಅಂಗಡಿಗಳನ್ನು ಮುಚ್ಚಿ ಬಂದ್ ಬೆಂಬಲಿಸಲು ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಸರಾಸರಿ 7 ಲಕ್ಷ ಕೆಜಿಗೂ ಹೆಚ್ಚು ಚಿಕನ್ ಮಾರಾಟವಾಗುತ್ತದೆ. ಇದರಿಂದ ದಿನಂಪ್ರತಿ ಸುಮಾರು 2 ರಿಂದ 3 ಲಕ್ಷ ಕೆಜಿಯಷ್ಟು ಚಿಕನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಒಂದು ಸಾಮಾನ್ಯ ಚಿಕನ್ ಅಂಗಡಿಯಿಂದ ಪ್ರತಿದಿನ ಕನಿಷ್ಠ 30 ಕೆಜಿ ತ್ಯಾಜ್ಯ ಸಂಗ್ರಹವಾಗಲಿದ್ದು, ಹೊಸ ನಿಯಮದ ಪ್ರಕಾರ ಪ್ರತಿಯೊಬ್ಬ ವ್ಯಾಪಾರಿಯೂ BSWML ಗೆ ದಿನಕ್ಕೆ 150 ರೂಪಾಯಿಗೂ ಹೆಚ್ಚು ಹಣ ತೆರಬೇಕಾಗುತ್ತದೆ.

ಈ ಹೆಚ್ಚುವರಿ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಈ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಎರಡು ದಿನಗಳ ಕಾಲ ಬಂದ್‌ಗೆ ಕರೆ ನೀಡಿರುವುದರಿಂದ ವಾರಾಂತ್ಯಕ್ಕೆ ಮುನ್ನವೇ ಚಿಕನ್ ಬೆಲೆ ಏರಿಕೆಯಾಗುವ ಅಥವಾ ನಗರದಲ್ಲಿ ಚಿಕನ್ ಸಿಗದೆ ಗ್ರಾಹಕರು ಪರದಾಡುವ ಸಾಧ್ಯತೆಯಿದೆ.