ಬೆಂಗಳೂರಿನ ಕಂಟೋನ್ಮೆಂಟ್ ಜಂಕ್ಷನ್ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಸಮಗ್ರ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸುವಂತೆ ಬಿಬಿಎಂಪಿ ಆಯುಕ್ತ ಜಗದೀಶ್ ಸೂಚಿಸಿದ್ದಾರೆ. ಜೊತೆಗೆ, ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸಿ ಸೌಂದರೀಕರಣಕ್ಕೆ ಆದ್ಯತೆ ನೀಡಲು ತಿಳಿಸಿದ್ದಾರೆ. ಚರ್ಚ್ ಸ್ಟ್ರೀಟ್ ಟ್ರಾಫಿಕ್ ನಿಯಂತ್ರಣಕ್ಕೂ ಶೀಘ್ರದಲ್ಲೇ ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಲಿದ್ದಾರೆ.
ಬೆಂಗಳೂರು (ಅ.14): ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಮಹತ್ವದ ಹೆಜ್ಜೆ ಇಟ್ಟಿದೆ. ತೀವ್ರ ಸಂಚಾರ ದಟ್ಟಣೆಯಿಂದ ಕೂಡAತಿರುವ ಶಿವಾಜಿನಗರ ವಿಭಾಗದ ಕಂಟೋನ್ಮೆಂಟ್ ಜಂಕ್ಷನ್ನ (Cantonment Junction) ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (DPR) ತಯಾರಿಸುವಂತೆ ಪಾಲಿಕೆ ಆಯುಕ್ತರಾದ ಜಗದೀಶ್.ಜಿ (Commissioner Jagadeesh. G) ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಆಯುಕ್ತರು:
ಇಂದು ಶಿವಾಜಿನಗರ ವಿಭಾಗದ ಕಂಟೋನ್ಮೆಂಟ್ ಜಂಕ್ಷನ್ಗೆ ಭೇಟಿ ನೀಡಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಆಯುಕ್ತ ಜಗದೀಶ್, ನಂತರ ಮಾತನಾಡಿದರು. ಕಂಟೋನ್ಮೆಂಟ್ ಜಂಕ್ಷನ್ ನಗರದ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ವಾಹನಗಳು ಇಲ್ಲಿ ಸಂಚರಿಸುತ್ತವೆ. ಹೀಗಾಗಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಟ್ರಾಫಿಕ್ ದಟ್ಟಣೆಯನ್ನು ಶಾಶ್ವತವಾಗಿ ನಿವಾರಿಸುವ ದೃಷ್ಟಿಯಿಂದ ಈ ಜಂಕ್ಷನ್ನ ಸಮಗ್ರ ಅಭಿವೃದ್ಧಿ ಮತ್ತು ಸೌಂದರೀಕರಣಕ್ಕಾಗಿ (Beautification) ಕೂಡಲೇ ಅಗತ್ಯ ಪ್ರಸ್ತಾವನೆ ಹಾಗೂ ಡಿಪಿಆರ್ ಸಿದ್ಧಪಡಿಸಲು ಅವರು ಸೂಚಿಸಿದರು.
ಸ್ವಚ್ಛತೆ ಹಾಗೂ ಸೌಂದರೀಕರಣಕ್ಕೆ ಆದ್ಯತೆ:
ಈ ವೇಳೆ ಕಂಟೋನ್ಮೆಂಟ್ ವೃತ್ತದ ಸುತ್ತಮುತ್ತ ಕಸಕಡ್ಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದನ್ನು ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ (Debris) ಬಿದ್ದಿರುವುದನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸಿದರು. ತಕ್ಷಣವೇ ಈ ತ್ಯಾಜ್ಯಗಳನ್ನು ತೆರವುಗೊಳಿಸುವಂತೆ ಹಾಗೂ ತೋಟಗಾರಿಕೆ ವಿಭಾಗದ ಮೂಲಕ ವೃತ್ತವನ್ನು ಸುಂದರಗೊಳಿಸುವಂತೆ ತಾಕೀತು ಮಾಡಿದರು. ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ (Footpaths) ಕಂಡುಬರುವ ಅನಗತ್ಯ ವಸ್ತುಗಳು ಮತ್ತು ನಿರ್ಮಾಣ ತ್ಯಾಜ್ಯಗಳನ್ನು ಕೂಡಲೇ ತೆರವುಗೊಳಿಸಬೇಕು. ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮಾರ್ಗಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಚರ್ಚ್ ಸ್ಟ್ರೀಟ್ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಭೆ:
ನಗರದ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ (Church Street) ಪ್ರದೇಶಗಳಲ್ಲಿ ವಾರಾಂತ್ಯದಲ್ಲಿ (Weekends) ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ತೀವ್ರ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಪಾದಚಾರಿಗಳ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಈ ಸ್ಥಳ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ.ಆರ್, ಮುಖ್ಯ ಅಭಿಯಂತರರಾದ ವಿಜಯಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರಾದ ಚಂದ್ರಶೇಖರ್ ಸೇರಿದಂತೆ ನಗರ ಯೋಜಕರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


