ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮದ್ಯವ್ಯಸನಿಯೊಬ್ಬ ರೈಲಿನೊಳಗೆ ಅಸಭ್ಯವಾಗಿ ವರ್ತಿಸಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಕೆಂಗೇರಿ ನಿಲ್ದಾಣದ ಬಳಿ ನಡೆದ ಈ ಘಟನೆಯಿಂದ ಸಹ ಪ್ರಯಾಣಿಕರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮೆಟ್ರೋ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಮೂಡಿವೆ.

ಬೆಂಗಳೂರು (ಅ.14): ಶಿಸ್ತು, ನೈರ್ಮಲ್ಯ ಹಾಗೂ ಅತ್ಯಂತ ಸುರಕ್ಷಿತ ಪ್ರಯಾಣಕ್ಕೆ ಹೆಸರಾಗಿರುವ 'ನಮ್ಮ ಮೆಟ್ರೋ' (Namma Metro) ಒಳಗೆ ಮತ್ತೊಮ್ಮೆ ಅಶಿಸ್ತಿನ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೆಟ್ರೋ ರೈಲಿನೊಳಗೆ ನಡೆಸಿದ ಅವಾಂತರ ಹಾಗೂ ಹೈಡ್ರಾಮಾದಿಂದಾಗಿ ಪ್ರಯಾಣಿಕರು ಬೆಚ್ಚಿಬಿದ್ದಿರುವ ಘಟನೆ ವರದಿಯಾಗಿದೆ.

ನೇರಳೆ ಮಾರ್ಗದಲ್ಲಿ ಘಟನೆ:

ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಈ ಅಘಟಿತ ಘಟನೆ ನಡೆದಿದೆ. ಕೆಂಗೇರಿ ನಿಲ್ದಾಣದ (Kengeri Station) ಬಳಿ ಮೆಟ್ರೋ ರೈಲು ಸಂಚರಿಸುತ್ತಿದ್ದ ವೇಳೆ, ಪ್ರಯಾಣಿಕರಿಂದ ತುಂಬಿದ್ದ ಬೋಗಿಯೊಳಗೆ ಮಧ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ತೀವ್ರ ಅಸಭ್ಯ ವರ್ತನೆ ತೋರಿದ್ದಾನೆ. ಮದ್ಯದ ನಶೆಯಲ್ಲಿ ಪ್ರಜ್ಞೆ ತಪ್ಪಿದಂತೆ ವರ್ತಿಸಿದ ಈ ವ್ಯಕ್ತಿ, ಮೆಟ್ರೋದ ಪ್ರಯಾಣಿಕರ ಸೀಟ್‌ಗಳ ಮೇಲೆ ಬಿದ್ದು ಉರುಳಾಡಿದ್ದಾನೆ.

ಪ್ರಯಾಣಿಕರ ಕಂಗಾಲು:

ಮದ್ಯದ ಅಮಲಿನಲ್ಲಿ ಕಚಡಾ ಮಾಡಿಕೊಳ್ಳುತ್ತಾ, ಸೀಟುಗಳ ಮೇಲೆ ಮಲಗಿ ಈ ವ್ಯಕ್ತಿ ನಡೆಸಿದ ಅತಿರೇಕದ ವರ್ತನೆಯನ್ನು ಕಂಡು ಸಹ ಪ್ರಯಾಣಿಕರು ಕಂಗಾಲಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಇರುವ ಬೋಗಿಯಲ್ಲೇ ಈ ರೀತಿ ಹೈಡ್ರಾಮಾ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ಮುಜುಗರಕ್ಕೊಳಗಾಗುವಂತಾಯಿತು. ಕೆಲವರು ಈ ಇಡೀ ಅಸಭ್ಯ ವರ್ತನೆಯ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗಿದೆ.

ಸುರಕ್ಷತೆ ಮತ್ತು ಶಿಸ್ತಿನ ಬಗ್ಗೆ ಚರ್ಚೆ:

ಈ ಘಟನೆಯು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯ (Security Check) ಕಟ್ಟುನಿಟ್ಟಿನ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮದ್ಯ ಸೇವಿಸಿದ ವ್ಯಕ್ತಿಗಳು ಕಾವಲು ಸಿಬ್ಬಂದಿಯ ಕಣ್ಣುತಪ್ಪಿಸಿ ಮೆಟ್ರೋ ಒಳಗೆ ಪ್ರವೇಶಿಸುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಮೆಟ್ರೋ ನಿಲ್ದಾಣಗಳಲ್ಲಿ ತಪಾಸಣೆ ನಡೆಸುವ ಭದ್ರತಾ ಸಿಬ್ಬಂದಿ ಇಂತಹ ಕುಡಕರು ಮತ್ತು ಅಶಿಸ್ತಿನ ವ್ಯಕ್ತಿಗಳನ್ನು ಪ್ರವೇಶದ್ವಾರದಲ್ಲೇ ತಡೆಯಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಮತ್ತು ಆನ್‌ಲೈನ್ ಬಳಕೆದಾರರು ಒತ್ತಾಯಿಸಿದ್ದಾರೆ.