ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರವು ಬಸ್ ಪ್ರಯಾಣ ದರ ಹೆಚ್ಚಿಸಲು ಮುಂದಾಗಿದೆ. ಸಾರಿಗೆ ನಿಗಮಗಳ ನಷ್ಟದ ಹಿನ್ನೆಲೆಯಲ್ಲಿ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ದರ ಏರಿಕೆ ಪ್ರಮಾಣ ನಿರ್ಧಾರವಾಗಲಿದೆ. ಗ್ಯಾರಂಟಿ ಯೋಜನೆಗಳಿಂದಲೇ ಈ ಸಂಕಷ್ಟ ಎದುರಾಗಿದೆ ಎಂದು ವಿಪಕ್ಷಗಳು ಆರೋಪ.

ಬೆಂಗಳೂರು (ನ.4): ಹಾಲಿನ ದರ ಏರಿಕೆಯ ಬಿಸಿ ತಣ್ಣಗಾಗುವ ಮೊದಲೇ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಿಸಲು ಮುಂದಾಗಿದ್ದು, ಈ ಸಂಬಂಧ ಸಾರಿಗೆ ಸಚಿವ ಭೈರತಿ ಸುರೇಶ್ ಬುಧವಾರ ಸಾರಿಗೆ ಇಲಾಖೆ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬಸ್ ಟಿಕೆಟ್ ಎಷ್ಟು ಹೆಚ್ಚಳವಾಗುತ್ತೆ?

ಸಭೆಯಲ್ಲಿ ಬಸ್ ದರ ಏರಿಕೆ ಪ್ರಮಾಣದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇನ್ನೂ ಬಹಿರಂಗಪಡಿಸಿಲ್ಲ. ಗುರುವಾರದಿಂದಲೇ ಪರಿಷ್ಕೃತ ದರ ಜಾರಿ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನಿರ್ದೇಶಕರು ಹಾಗೂ ನಾಲ್ಕು ನಿಗಮಗಳ‍ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಲಾಭದಲ್ಲಿ ಎಂದಿದ್ರಾ? ಬೈರತಿ ಸುರೇಶ್

ಈ ಹಿಂದಿನ ಹೇಳಿಕೆಯಲ್ಲಿ ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮಗಳು ಲಾಭದಲ್ಲಿವೆ ಎಂಬ ಹೇಳಿಕೆ ನೀಡಿದ್ದ ಬೈರತಿ ಸುರೇಶ್, ಇದೀಗ ಬುಧವಾರದ ಸೆ.30ರಂದು ಸುದ್ದಿಗೋಷ್ಠಿ ವೇಳೆ, ಸಾರಿಗೆ ನಿಗಮಗಳು ಆರ್ಥಿಕವಾಗಿ ನಷ್ಟದಲ್ಲಿವೆ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಬಿಜೆಪಿ ಸರ್ಕಾರ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ಹೆಚ್ಚಳ ಮಾಡಿದೆ ಇದರ ಪರಿಣಾಮವಾಗಿ ಲೀಟರ್‌ಗೆ ಡೀಸೆಲ್ ಬೆಲೆ ಈಗ 15 ರಿಂದ 16 ರೂಪಾಯಿ ಹೆಚ್ಚಳವಾಗಿದೆ. ಇದರಿಂದ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ ಎಂದು ಹೇಳಿದ್ದಾರೆ.

ಯಾವುದು ನಿಜ? ಗ್ಯಾರಂಟಿ ಯೋಜನೆಯಿಂದಲೇ ಈ ಸಂಕಷ್ಟ ಬಂದಿರೋದು ಎಂದು ವಿಪಕ್ಷಗಳು ಆರೋಪಿಸಿವೆ. ಒಟ್ಟಾರೆ ರಾಜ್ಯದ ಜನರ ಜೇಬಿಗೆ ಸರ್ಕಾರ ಕೈಹಾಕಿದೆ. ಈಗಾಗಲೇ ಜೀವನ ದುರ್ಬರವಾಗಿದ್ದರೂ ಹಾಲು, ಮೊಸರು, ಬಳಿಕ ಇದೀಗ ಬಸ್ ಟಿಕೆಟ್ ದರ ಹೆಚ್ಚಳ ಮಾಡುತ್ತಿರುವುದು ನೋಡಿದರೆ ಇದು ಜನಪರ ಸರ್ಕಾರವೇ? ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.