ಬೆಂಗಳೂರಿನ ಎಂಜಿ ರಸ್ತೆಯ ಕಾವೋರ್ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ವಿಕಾಸ್ ಮತ್ತು ಅವರ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು (ಅ.14): ಪಬ್ ಮೇಲೆ ಅನಿರೀಕ್ಷಿತ ದಾಳಿ ವೇಳೆ ಸಿಸಿಬಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ಹಾಗೂ ಅವರ ಸ್ನೇಹಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಂಜಿ ರಸ್ತೆ ಕಾವೋರ್ ಪಬ್ ಮೇಲೆ ದಾಳಿ ವೇಳೆ ಘಟನೆ
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸ್ವಕ್ಷೇತ್ರ ಕುಪ್ಪಂ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿ ವಿಕಾಸ್ ಮರ್ಮಜ್, ಆತನ ಸ್ನೇಹಿತರಾದ ಅಭಯ್ ಉದಯ್ ಸಿಂಗ್, ನಿತೀಶ್ ಹಾಗೂ ರೋಷನ್ ಮೇಲೆ ಆರೋಪ ಬಂದಿದ್ದು, 4 ದಿನಗಳ ಹಿಂದೆ ಎಂಜಿ ರಸ್ತೆಯ ಕಾವೋರ್ ಪಬ್ ಮೇಲೆ ಸಿಸಿಬಿ ದಾಳಿ ವೇಳೆ ಈ ಗಲಾಟೆ ನಡೆದಿದೆ. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಅಕ್ರಮ ಚಟುವಟಿಕೆ ಶಂಕೆ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯ ಎಲ್ಲ ಪಬ್, ಡ್ಯಾನ್ಸರ್ ಬಾರ್ಗಳು, ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ಗಳ ಮೇಲೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರಥ್ಯದಲ್ಲಿ ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದರು. ಅಂತೆಯೇ ಎಂಜಿ ರಸ್ತೆ ಬಳಿ ಕಾವೋರ್ ಪಬ್ಗೆ ಸಿಸಿಬಿಯ ವಿಶೇಷ ವಿಚಾರಣಾ ದಳ ದಾಳಿ ನಡೆಸಿತು.
ಈ ಕಾರ್ಯಾಚರಣೆ ವೇಳೆ ಪಬ್ನಲ್ಲಿದ್ದ ಗ್ರಾಹಕರನ್ನು ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ಪಬ್ನಲ್ಲಿ ಸ್ನೇಹಿತರ ಜತೆ ಪಾರ್ಟಿಯಲ್ಲಿದ್ದ ಐಎಎಸ್ ಅಧಿಕಾರಿ ವಿಕಾಸ್ ಆಕ್ಷೇಪಿಸಿದ್ದಾರೆ. ಆಗ ವಿಕಾಸ್ ಅವರನ್ನು ಯಾರು ಎಂದು ತಿಳಿದುಕೊಂಡಿದ್ದೀರಿ, ಅವರೊಬ್ಬರು ಹಿರಿಯ ಐಎಎಸ್ ಅಧಿಕಾರಿ ಎಂದು ಹೇಳಿ ಅವರ ಸ್ನೇಹಿತರು ಸಿಸಿಬಿ ಪೊಲೀಸರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಇನ್ಸ್ಪೆಕ್ಟರ್ಗಳಾದ ಬಿ.ಎಸ್.ಅಶೋಕ್, ಮಹಾದೇವಯ್ಯ ಹಾಗೂ ಅರುಣ್ ಸೋಲಂಕಿ ಜತೆ ಆರೋಪಿಗಳ ಬಿರುಸಿನ ಮಾತುಕತೆ ನಡೆಸಿದ್ದಾರೆ.
ಆಗ ಗುರುತಿನ ಪತ್ರ ತೋರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ಮದ್ಯದ ಅಮಲಿನಲ್ಲಿದ್ದ ವಿಕಾಸ್, ಸಿಸಿಬಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾದ್ಧಾಂತ ಮಾಡಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ವಿಕಾಸ್ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಘಟನೆ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿವೆ.


