ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ. ಕನ್ನಡಿಗರ ಉದ್ಯೋಗದ ಕುರಿತು ಸಮೀಕ್ಷೆ ನಡೆಸುತ್ತಿರುವ ಕರವೇ, ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರು (ನ.04): ಬೆಂಗಳೂರಿನಲ್ಲಿರುವ ಐಟಿ-ಬಿಟಿ ಕಂಪನಿಗಳು ಸೇರಿದಂತೆ ವಿವಿಧ ಕಂಪನಿಗಳಲ್ಲಿನ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ.25 ರಷ್ಟು ಮಾತ್ರ ಕನ್ನಡಿಗರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣ ಗೌಡ ತಿಳಿಸಿದ್ದಾರೆ.
ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗ ಉದ್ಯೋಗಿಗಳ ಸಂಖ್ಯೆಯನ್ನು ಸರ್ವೇ ಮೂಲಕ ಕಲೆ ಹಾಕುತ್ತಿರುವ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಕರವೇ ಸಂಘಟನೆಯ 10 ತಂಡಗಳು ವಿವಿಧ ಕಂಪನಿಯ ಕಚೇರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿವೆ. ಕೆಲವು ಕಂಪನಿಗಳಲ್ಲಿನ ಅಧಿಕಾರಿಗಳೊಂದಿಗೆ ನಮ್ಮ ತಂಡದವರು ಮಾತುಕತೆ ನಡೆಸುವಾಗ ಶೇ.25ರಷ್ಟು ಮಾತ್ರ ಕನ್ನಡಿಗರು ಇರುವುದು ಕಂಡು ಬಂದಿದೆ. ಮತ್ತೆ ಕೆಲವೆಡೆ ಕಡೆ ಶೇ.6 ರಿಂದ 7ರಷ್ಟು ಮಾತ್ರ ಕನ್ನಡಿಗರು ಇರುವುದು ಅಲ್ಲಿನ ಉನ್ನತ ಮಟ್ಟದ ಉದ್ಯೋಗಿಗಳಿಂದಲೇ ಗೊತ್ತಾಗಿದೆ ಎಂದರು.
ಇನ್ನು ಇನ್ಫೋಸಿಸ್ನಲ್ಲಿ ಮಾತ್ರ ಶೇ.60ರಷ್ಟು ಅಂದರೆ ಸುಮಾರು 50,000ದಷ್ಟು ಕನ್ನಡಿಗರು ಇದ್ದಾರೆ ಎಂದು ಗೊತ್ತಾಗಿದೆ. ಆದರೆ, ಐಬಿಎಂನಲ್ಲಿ ಶೇ.20ರಿಂದ ಶೇ.25ರಷ್ಟು ಮಾತ್ರ ಕನ್ನಡಿಗರಿದ್ದಾರೆ. ಅದೇ ಕಂಪನಿಯ ತಮಿಳುನಾಡು ಕಚೇರಿಯಲ್ಲಿ ಶೇ.90ರಷ್ಟು ತಮಿಳರು ಹಾಗೂ ಹೈದರಬಾದಿನಲ್ಲಿ ಶೇ.70ರಷ್ಟು ತೆಲುಗು ಉದ್ಯೋಗಿಗಳಿದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರ ಅನ್ಯಾಯ ಮಾಡಲಾಗುತ್ತಿದೆ ಎಂದು ನಾರಾಯಣಗೌಡ ಹೇಳಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆ:
ನ.30ರವರೆಗೆ ಸರ್ವೇ ನಡೆಯಲಿದೆ. ಈವರೆಗೆ 230 ಕಚೇರಿಗಳಿಗೆ ಭೇಟಿ ನೀಡಲಾಗಿದ್ದು, ಕೆಲವೆಡೆ ಮಾತ್ರ ಕಂಪನಿಯವರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಉಳಿದವರು ಇ ಮೇಲ್ ಐಡಿ ಪಡೆದುಕೊಂಡಿದ್ದು, ಕೆಲವು ದಿನಗಳ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕ್ಗಳು ಮತ್ತು ರಾಜ್ಯದ ಐಟಿಯೇತರ ಕೈಗಾರಿಕೆ, ಉದ್ಯಮಗಳಲ್ಲಿನ ಕನ್ನಡಿಗರ ಕುರಿತು ಮಾಹಿತಿ ಸಂಗ್ರಹಿಸುತ್ತೇವೆ. ಬಳಿಕ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ. ವರದಿ ಆಧಾರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ, ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಬೇಕು ಎಂದು ನಾರಾಯಣಗೌಡ ತಿಳಿಸಿದರು.
ಸರ್ವೇ ನಿಲ್ಲುವುದಿಲ್ಲ:
ರಾಜ್ಯದ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆದ್ಯತೆ ನೀಡಬೇಕು ಎಂದು ಮೊದಲಿನಿಂದಲೂ ಹೋರಾಟ ನಡೆದಿದೆ. ಕಂಪನಿಗಳ ಪ್ರತಿನಿಧಿಗಳು ನಮ್ಮ ಮನವಿ ಪತ್ರವನ್ನು ಸ್ವೀಕರಿಸಿ ಮಾಹಿತಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ನಮ್ಮ ಅಭಿಯಾನ ನಿಲ್ಲಿಸಲು ಕೆಲವು ವ್ಯಕ್ತಿಗಳು ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಇಂತಹ ಒತ್ತಡಗಳಿಗೆ, ಬ್ಲಾಕ್ಮೇಲ್ಗಳಿಗೆ ಸರ್ಕಾರ ಮಣಿಯಬಾರದು. ನಾವೂ ಈ ಆಂದೋಲನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ನಾರಾಯಣಗೌಡ ಹೇಳಿದರು.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಯಾಬಿನೆಟ್ನಲ್ಲಿ ಅಂಗೀಕರಿಸಿದ್ದ ಉದ್ಯೋಗ ಮೀಸಲಾತಿ ಕಾಯ್ದೆಯನ್ನು ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಬೇಕು. ಸರ್ಕಾರ ಈ ವಿಷಯದಲ್ಲಿ ಕಾಲಹರಣ ಮಾಡಬಾರದು. ಒಂದು ವೇಳೆ ಮಸೂದೆ ಜಾರಿಯಾಗದೇ ಇದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ನಾರಾಯಣಗೌಡ ಹೇಳಿದ್ದಾರೆ.
ಇನ್ನು ತಮಿಳುನಾಡಿನ ಐಪಿಎಸ್ ಅಧಿಕಾರಿ, ಕರ್ನಾಟಕ ಮೂಲದ ಧನುಷ್ ಕುಮಾರ್ ಎಂಬುವವರು ನಮ್ಮ ಅಭಿಯಾನ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅವರು ಕರ್ನಾಟಕದ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಈಗಾಗಲೇ ಪೋಸ್ಟ್ ಡಿಲೀಟ್ ಮಾಡಿದ್ದಾರೆಂದು ಗೊತ್ತಾಗಿದೆ. ಇನ್ನೊಮ್ಮೆ ತಲೆಹರಟೆ ಮಾಡಿದರೆ ತಕ್ಕ ಉತ್ತರ ಕೊಡುತ್ತೇವೆ ಎಂದು ನಾರಾಯಣಗೌಡ ಹೇಳಿದ್ದಾರೆ.
ಮೋಹನ ದಾಸ್ ಪೈ ಶಕುನಿ!
ಮಹಾಭಾರತದಲ್ಲಿ ಶಕುನಿಯು ಕೌರವರ ಜೊತೆಯೇ ಇದ್ದು ಅವರ ನಾಶಕ್ಕೆ ಸಂಚು ರೂಪಿಸುವಂತೆ ನಮ್ಮ ನಾಡಿನಲ್ಲಿದ್ದು, ಕನ್ನಡಿಗರಿಗೆ ದ್ರೋಹ ಎಸಗುವ ಕೆಲಸವನ್ನು ಉದ್ಯಮಿ ಮೋಹನ ದಾಸ್ ಪೈ ಮಾಡುತ್ತಿದ್ದಾರೆ ಎಂದು ನಾರಾಯಗೌಡ ಕಿಡಿ ಕಾರಿದ್ದಾರೆ.
ಮೋಹನ ದಾಸ್ ಪೈ ಸದಾ ಕನ್ನಡಿಗರ ವಿರುದ್ಧ ಐಟಿ ಸಂಸ್ಥೆಗಳನ್ನು ಎತ್ತಿ ಕಟ್ಟುವ ಪ್ರಯತ್ನಗಳನ್ನು ನಡೆಸುತ್ತ ಬಂದಿದ್ದಾರೆ. ಈಗಲೂ ನಮ್ಮ ಅಭಿಯಾನ ನಿಲ್ಲಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ. ಕನ್ನಡಿಗರ ಮೀಸಲಾತಿ ಮಸೂದೆಗೆ ಅಡ್ಡಗಾಲು ಆಗಿದ್ದಾರೆ. ಕನ್ನಡಿಗರ ಪಾಲಿಗೆ ಅವರು ಒಬ್ಬ ನಾಡದ್ರೋಹಿ ಎಂದು ನಾರಾಯಣಗೌಡ ಕಿರಿ ಕಾರಿದ್ದಾರೆ.
ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಅವರುಗಳನ್ನು ಬ್ರಿಟಿಷರಿಗೆ ಹಿಡಿದುಕೊಟ್ಟಿದ್ದು ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿಗಳು. ಇಂತಹವರನ್ನು ನಾವು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಈ ಶಕುನಿ ತಂತ್ರ ಫಲಿಸುವುದಿಲ್ಲ. ಕನ್ನಡಿಗರನ್ನು ನಾಶ ಮಾಡಲು ಹೊರಟವರು ತಾವೇ ನಾಶವಾಗುತ್ತಾರೆ ಎಂದು ಮೋಹನ್ ದಾಸ್ ಪೈ ವಿರುದ್ಧ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.






