ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನದ ಮಾಲೀಕತ್ವದ ಕುರಿತು ಇಸ್ಕಾನ್ ಮುಂಬೈ ಮತ್ತು ಬೆಂಗಳೂರು ನಡುವಿನ ದೀರ್ಘಕಾಲದ ಕಾನೂನು ಹೋರಾಟದಲ್ಲಿ, ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪಿನ ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ಹೊಸ ಪೀಠವನ್ನು ಸ್ಥಾಪಿಸಲು ಪರಿಗಣಿಸುತ್ತಿದೆ. ನ್ಯಾಯಪೀಠದ ಭಿನ್ನಾಭಿಪ್ರಾಯದ ನಂತರ ಈ ಪ್ರಕರಣವು ಇದೀಗ ಅಂತಿಮ ಹಂತದ ಕಾನೂನು ಹೋರಾಟಕ್ಕೆ ತಲುಪಿದೆ.

ನವದೆಹಲಿ: ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರಸಿದ್ಧ ಹರೇ ಕೃಷ್ಣ ದೇವಸ್ಥಾನದ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಸ್ಕಾನ್ ಮುಂಬೈ ಹಾಗೂ ಇಸ್ಕಾನ್ ಬೆಂಗಳೂರು ನಡುವೆ ನಡೆಯುತ್ತಿರುವ ದೀರ್ಘಕಾಲದ ಕಾನೂನು ಹೋರಾಟದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೇ 16, 2025 ರಂದು ನೀಡಲಾಗಿದ್ದ ತೀರ್ಪನ್ನು ಪುನರ್ ಪರಿಶೀಲಿಸಲು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಹೊಸ ಪೀಠವನ್ನು ಸ್ಥಾಪಿಸುವ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಆಗಸ್ಟ್ 17ರಂದು ಒಪ್ಪಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಪೀಠದ ಮುಂದೆ ಇಸ್ಕಾನ್ ಮುಂಬೈ ಪರ ವಕೀಲರು ಸುದೀರ್ಘಕಾಲದಿಂದ ಬಾಕಿ ಇರುವ ಈ ವಿವಾದದ ಇತ್ಯರ್ಥಕ್ಕೆ ಹೊಸ ಪೀಠ ಸ್ಥಾಪಿಸಬೇಕೆಂದು ಮನವಿ ಮಾಡಿದರು. ಈ ಹಿಂದೆ ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಹಾಗೂ ನ್ಯಾಯಮೂರ್ತಿ ದೀಪಂಕರ್ ದತ್ತ ಅವರಿದ್ದ ಎರಡು ಪ್ರತ್ಯೇಕ ಪೀಠಗಳ ಮುಂದೆ ಈ ಪರಿಶೀಲನಾ ಅರ್ಜಿ ಸಲ್ಲಿಕೆಯಾಗಿದ್ದರೂ, ನಂತರದ ದಿನಗಳಲ್ಲಿ ಯಾವುದೇ ವಿಚಾರಣೆ ನಡೆದಿರಲಿಲ್ಲ ಎಂಬುದನ್ನು ವಕೀಲರು ಪೀಠದ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು, ನಾವು ಈ ಕೋರಿಕೆಯನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ ಮತ್ತು ಹೈಕೋರ್ಟ್ ತೀರ್ಪು:

ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸೊಸೈಟಿಯಾದ ಇಸ್ಕಾನ್ ಬೆಂಗಳೂರು, ದಶಕಗಳಿಂದ ಬೆಂಗಳೂರಿನ ದೇವಸ್ಥಾನ ಮತ್ತು ಅದರ ಶೈಕ್ಷಣಿಕ ಸಂಕೀರ್ಣವನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾ ನಿರ್ವಹಿಸಿಕೊಂಡು ಬರುತ್ತಿದೆ. ಆದರೆ, 1860 ರ ಸೊಸೈಟಿ ನೋಂದಣಿ ಕಾಯ್ದೆ ಹಾಗೂ 1950 ರ ಬಾಂಬೆ ಪಬ್ಲಿಕ್ ಟ್ರಸ್ಟ್ಸ್ ಕಾಯ್ದೆಯಡಿ ನೋಂದಾಯಿತವಾಗಿರುವ ಇಸ್ಕಾನ್ ಮುಂಬೈ, ಈ ಆಸ್ತಿಯ ಮೇಲೆ ಹಕ್ಕು ಸಾಧಿಸಿತ್ತಲ್ಲದೆ, ಇಸ್ಕಾನ್ ಬೆಂಗಳೂರು ಸಂಸ್ಥೆಯು ತನ್ನ ಕೇವಲ ಒಂದು ಶಾಖೆ ಎಂದು ಪ್ರತಿಪಾದಿಸಿತ್ತು.

2009 ರಲ್ಲಿ ಬೆಂಗಳೂರಿನ ಸ್ಥಳೀಯ ವಿಚಾರಣಾ ನ್ಯಾಯಾಲಯವು ಇಸ್ಕಾನ್ ಬೆಂಗಳೂರಿನ ಪರವಾಗಿ ತೀರ್ಪು ನೀಡಿ, ಅದರ ಕಾನೂನುಬದ್ಧ ಹಕ್ಕನ್ನು ಎತ್ತಿಹಿಡಿದಿತ್ತಲ್ಲದೆ, ಇಸ್ಕಾನ್ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಿತ್ತು. ಆದಾಗ್ಯೂ, ಮೇ 23, 2011 ರಂದು ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿ, ಇಸ್ಕಾನ್ ಮುಂಬೈ ಪರವಾಗಿ ಆದೇಶ ನೀಡುವ ಮೂಲಕ ದೇವಾಲಯದ ನಿಯಂತ್ರಣವನ್ನು ಮುಂಬೈ ಸಂಸ್ಥೆಗೆ ವಹಿಸಿತ್ತು.

ಸುಪ್ರೀಂ ಕೋರ್ಟ್ ಕದ ತಟ್ಟಿದ ಇಸ್ಕಾನ್ ಬೆಂಗಳೂರು:

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಜೂನ್ 2, 2011 ರಂದು ತನ್ನ ಪದಾಧಿಕಾರಿ ಕೋದಂಡರಾಮ ದಾಸ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

ದೀರ್ಘ ವಿಚಾರಣೆಯ ನಂತರ, ಮೇ 16, 2025 ರಂದು ನಿವೃತ್ತ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ವಿವಾದಿತ 'ಎ' ಶೆಡ್ಯೂಲ್ ಆಸ್ತಿಯ ಮೇಲಿನ ಹಕ್ಕನ್ನು ಬೆಂಬಲಿಸಲು ಇಸ್ಕಾನ್ ಮುಂಬೈ ಯಾವುದೇ ಸೂಕ್ತ ಪುರಾವೆಗಳನ್ನು ಸಲ್ಲಿಸಿಲ್ಲ ಎಂಬ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಆಸ್ತಿಯು ಇಸ್ಕಾನ್ ಬೆಂಗಳೂರಿಗೆ ಸೇರಿದ್ದು ಎಂದು ಸ್ಪಷ್ಟ ತೀರ್ಪು ನೀಡಿತು.

ಪರಿಶೀಲನಾ ಅರ್ಜಿಯಲ್ಲಿ ಮೂಡಿದ ಭಿನ್ನಾಭಿಪ್ರಾಯ:

ಮೇ 16 ರ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಇಸ್ಕಾನ್ ಮುಂಬೈ ತಕ್ಷಣವೇ ಪರಿಶೀಲನಾ ಅರ್ಜಿಯನ್ನು (Review Petition) ಸಲ್ಲಿಸಿತು.

ನವೆಂಬರ್ 2025 ರಲ್ಲಿ, ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರಿದ್ದ ಪೀಠವು ಈ ಪರಿಶೀಲನಾ ಅರ್ಜಿಯ ಕುರಿತು ವಿಭಿನ್ನ (Split Verdict) ತೀರ್ಪು ನೀಡಿತು.

ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ: ತೀರ್ಪಿನಲ್ಲಿ ಸ್ಪಷ್ಟ ದೋಷವಿದೆ ಎಂದು ಅಭಿಪ್ರಾಯಪಟ್ಟ ಅವರು, "ಮುಂಬೈ ಶಾಖೆಗೆ ತನ್ನ ವಾದವನ್ನು ಮುಕ್ತ ನ್ಯಾಯಾಲಯದಲ್ಲಿ ಮಂಡಿಸಲು ಅವಕಾಶ ನೀಡಬೇಕು ಮತ್ತು ಸಂಬಂಧಪಟ್ಟ ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಬೇಕು" ಎಂದು ಎರಡು ಸಾಲುಗಳ ಆದೇಶ ನೀಡಿದರು.

ನ್ಯಾಯಮೂರ್ತಿ ಎ.ಜಿ. ಮಸಿಹ್: ಮರುಪರಿಶೀಲನೆ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, "ದಾಖಲೆಗಳನ್ನು ಪರಿಶೀಲಿಸಿದ ನಂತರ ಮೇ 16 ರ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಆದ್ದರಿಂದ ಈ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಆದೇಶಿಸಿದರು.

ನ್ಯಾಯಪೀಠದಲ್ಲಿ ಈ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ, ಮುಂದಿನ ಸೂಕ್ತ ನಿರ್ದೇಶನಗಳಿಗಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ (CJI) ಮುಂದೆ ಇಡಲು ತೀರ್ಮಾನಿಸಲಾಗಿತ್ತು. ಇದೀಗ ಸಿಜೆಐ ನೇತೃತ್ವದ ಪೀಠವು ಹೊಸ ವಿಚಾರಣಾ ಪೀಠ ರಚನೆಯ ಇಂಗಿತ ವ್ಯಕ್ತಪಡಿಸಿರುವುದರಿಂದ, ಬೆಂಗಳೂರು ಹರೇ ಕೃಷ್ಣ ದೇವಸ್ಥಾನದ ಆಸ್ತಿ ವಿವಾದವು ಅಂತಿಮ ಹಂತದ ಕಾನೂನು ಹೋರಾಟಕ್ಕೆ ತಲುಪಿದೆ.