ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗುಂಪು ಘರ್ಷಣೆಯಲ್ಲಿ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಮೃತನ ದೇಹದಲ್ಲಿ ಸಿಕ್ಕ ಬುಲೆಟ್ ಪೊಲೀಸರದ್ದಲ್ಲ, ಖಾಸಗಿ ಗನ್‌ಮ್ಯಾನ್‌ಗಳು ಫೈರ್ ಮಾಡಿರುವ ಶಂಕೆ ಇದೆ ಎಂದು ಎಡಿಜಿಪಿ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ಶೂಟೌಟ್‌ನಲ್ಲಿ ಮೃತಪಟ್ಟ ಯುವಕನ ದೇಹದಲ್ಲಿ ದೊರೆತ ಬುಲೆಟ್ ಪೊಲೀಸರದ್ದಲ್ಲ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾನರ್ ತೆರವು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಿಂದ ಓರ್ವ ಯುವಕ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕನ ದೇಹದಲ್ಲಿ ದೊರೆತ ಬುಲೆಟ್ ಪೊಲೀಸರದ್ದಲ್ಲ. ಪೊಲೀಸರು ಗೋಲಿಬಾರ್ ಮಾಡಿಲ್ಲ, ಅಶ್ರುವಾಯು ಸಿಡಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಗನ್‌ಮ್ಯಾನ್‌ಗಳು ಫೈರ್ ಮಾಡಿದ್ದಾರೆ ಎಂದು ತಿಳಿದು ಬಂದಿದ್ದರಿಂದ ಖಾಸಗಿ ಗನ್ ಮ್ಯಾನ್‌ಗಳಿಂದ 5 ಗನ್‌ಗಳನ್ನು ಸೀಜ್ ಮಾಡಿ, ಪರವಾನಗಿ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮೃತ ಯುವಕನ ದೇಹದಲ್ಲಿ ಸಿಕ್ಕ ಬುಲೆಟ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದ್ದು, ವರದಿ ಬಳಿಕ ಯಾರ ಗನ್‌ನಿಂದ ಫೈರ್ ಆಗಿದೆ ಎನ್ನುವುದು ತಿಳಿಯಲಿದೆ ಎಂದರು.
1,500 ಪೊಲೀಸ್ ಸಿಬ್ಬಂದಿ ನಿಯೋಜನೆ
ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿನ ವಿಡಿಯೋ, ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಲ್ಲು ತೂರಾಟ ನಡೆಸಿದವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. 1,500 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಈ ಘಟನೆಯಲ್ಲಿ ಪೊಲೀಸರ ವೈಫಲ್ಯದ ಬಗ್ಗೆಯೂ ಆಂತರಿಕ ಪರಿಶೀಲನೆ ನಡೆಸುತ್ತಿದ್ದು, ಒಂದು ವೇಳೆ ಸಿಬ್ಬಂದಿಯ ವೈಫಲ್ಯ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅಂತ್ಯಕ್ರಿಯೆ
ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ (25) ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿತು. ಬಿಎಂಸಿಆರ್‌ಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಹುಸೇನ್ ನಗರದ ಅವರ ನಿವಾಸಕ್ಕೆ ತರಲಾಯಿತು. ಈ ವೇಳೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ಭರತ್ ರೆಡ್ಡಿ ಆಗಮಿಸಿ, ಮೃತದೇಹದ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನ ಬಲಿ ಪಡೆದ ಗನ್ ಯಾರದ್ದು? ತನಿಖೆ
ಬಳಿಕ, ಹುಸೇನ್ ನಗರದಿಂದ ಆರಂಭವಾದ ಶವಯಾತ್ರೆ, ಐದು ಕಿಲೋಮೀಟರ್ ದೂರ ಸಾಗಿ, ಹರಿಶ್ಚಂದ್ರ ಘಾಟ್ ತಲುಪಿತು. ಈ ವೇಳೆ, ರಾಜಶೇಖರನ ಶವಕ್ಕೆ ಶಾಸಕರಾದ ಭರತ್ ರೆಡ್ಡಿ, ಜೆಎನ್ ಗಣೇಶ ಹೆಗಲು ಕೊಟ್ಟರು. ಬಳಿಕ, ಅಲ್ಲಿನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಹೋದರ ಈಶ್ವರ ರೆಡ್ಡಿ ಅಂತಿಮ ವಿಧಿವಿಧಾನ ನೆರವೇರಿಸಿದರು. ಅಂತ್ಯಕ್ರಿಯೆಯಲ್ಲಿ ಶಾಸಕ ಭರತ್ ರೆಡ್ಡಿ, ಜೆಎನ್ ಗಣೇಶ, ರಾಜಶೇಖರ ಅವರ ಸಂಬಂಧಿಗಳು, ಸ್ನೇಹಿತರು ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೃತ ರಾಜಶೇಖರ್‌ಗೆ ಓರ್ವ ಸಹೋದರ, ಇಬ್ಬರು ತಂಗಿಯರಿದ್ದು, ಇತ್ತೀಚಿಗೆ ತಂದೆ ಮೃತಪಟ್ಟಿದ್ದರು. ತಾಯಿ, ತಮ್ಮ, ತಂಗಿಯರೊಂದಿಗೆ ವಾಸವಾಗಿದ್ದ ರಾಜಶೇಖರ್ ರೆಡ್ಡಿ ಅವರು ಜೀವನಕ್ಕಾಗಿ ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಕುಟುಂಬಕ್ಕೆ ಆಸರೆಯಾಗಿದ್ದರು.
ಇದನ್ನೂ ಓದಿ: Ballari: ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಶಾಸಕ ನಾರಾ ಭರತ್ ರೆಡ್ಡಿ


