ಬಳ್ಳಾರಿಯ ಗುರುಕುಲ ವಸತಿ ಶಾಲೆಯಲ್ಲಿ, 9ನೇ ತರಗತಿ ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಇತರ ವಿದ್ಯಾರ್ಥಿಗಳು ಮತ್ತು ವಾರ್ಡನ್ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಈ ಭೀಕರ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಹ ವಿದ್ಯಾರ್ಥಿಗಳ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ ವಿದ್ಯಾರ್ಥಿ
ಬಳ್ಳಾರಿ: ಬಳ್ಳಾರಿಯ ಗುರುಕುಲ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದುರಂತರದಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು 8 ಬಾಲಕರು ಗಂಭೀರ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರು ಬಾಲಕರ ಸ್ಥಿತಿ ಗಂಭೀರವಾಗಿದೆ. ರಾತ್ರಿ ಊಟದ ಬಳಿಕ ಎಲ್ಲರೂ ಮಲಗಿಕೊಂಡ ಮೇಲೆ ವಿದ್ಯಾರ್ಥಿಯೋರ್ವ ಮಂಚದ ರಾಡ್ ತೆಗೆದುಕೊಂಡು ಸಿಕ್ಕಾಸಿಕ್ಕಾವರ ಮೇಲೆ ಹಲ್ಲೆ ಮಾಡಿದ್ದು, ಎಂಟು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬಾಲಕನ ಈ ಹುಚ್ಚಾಟದಿಂದಾಗಿ 7 ಬಾಲಕರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿ ಬಿಮ್ಸ್ ಮತ್ತು ಟ್ರಾಮಕೇರ್ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗಿದೆ
ಹಾಸ್ಟೆಲ್‌ನ ವಾರ್ಡನ್ ಮೇಲೂ ಬಾಲಕ ಹಲ್ಲೆ ಮಾಡಿದ್ದು,ಹಲ್ಲೆಯ ಬಳಿಕ ಆತ ಓಡಿ ಹೋಗಿದ್ದಾನೆ. ತಡರಾತ್ರಿ ಈ ಘಟನೆ ನಡೆದಿದ್ದು, ಮಕ್ಕಳ ಪೋಷಕರನ್ನು ಈ ಘಟನೆ ಬೆಚ್ಚಿ ಬೀಳಿಸಿದೆ. ಮಾಹಿತಿಯ ಪ್ರಕಾರ ಆರಂಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದ್ದು, ಅದೇ ವಿಚಾರ ದೊಡ್ಡದು ಮಾಡಿದ ಒಂಬತ್ತನೇ ತರಗತಿ ಬಾಲಕನಿಂದ ಸಿಕ್ಕ ಸಿಕ್ಕ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ರಾಡ್‌ನಿಂದ ಬಿದ್ದ ಏಟಿಗೆ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಾಸ್ಟೆಲ್ ವಾರ್ಡನ್ ಮೇಲೆಯೂ ಬಾಲಕ ಹಲ್ಲೆ ಮಾಡಿದ್ದು, ಗಾಯಾಳುಗಳೆಲ್ಲರೂ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕರಾಗಿದ್ದಾರೆ. ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇದೆಂಥಾ ಕಾಲ ಬಂತಪ್ಪಾ? ಸಿನಿಮಾ ಸ್ಟೈಲ್‌ನಲ್ಲಿ ಹಿರಿಯ ಶಿಕ್ಷಕನನ್ನೇ ಥಳಿಸಿದ ವಿದ್ಯಾರ್ಥಿ: ಕಣ್ಣೀರಿಟ್ಟ ಶಿಕ್ಷಕ
ಸಾವನ್ನಪ್ಪಿದ ಬಾಲಕನ ಪೋಷಕರ ಆಕ್ರಂದನ
ಘಟನೆಯಲ್ಲಿ ಸಾವನ್ನಪ್ಪಿದ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು ದೂರಿದ್ದಾರೆ. ಒಬ್ಬ ಬಾಲಕ ಹೀಗೆ 9 ಜನರನ್ನು ಹೊಡೆಯೋಕೆ ಹೇಗೆ ಸಾಧ್ಯ. ಆರೋಪಿ ಬಾಲಕ ಗಾಂಜಾ ಅಥವಾ ಡ್ರಗ್ಸ್ ತೆಗೆದುಕೊಂಡಿರಬಹುದು ಎಂದು ಪೋಷಕರು ಆರೋಪಿಸಿದ್ದಾರೆ. ಆರೋಪಿ ಬಾಲಕ ಮಂಚದ ರಾಡ್, ಸ್ಕೈವಾರ ಸೇರಿದಂತೆ ಇತರ ವಸ್ತುಗಳಿಂದ ಹೊಡೆದಿದ್ದಾನೆ. ಮೃತ ಬಾಲಕ ಕಳೆದ ನಾಲ್ಕು ವರ್ಷದಿಂದ ಇದೇ ವಸತಿ ಶಾಲೆಯಲ್ಲಿ ಓದುತ್ತಿದ್ದನು. ಈವರೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದ್ರೆ ದಿಢೀರನೇ ಹೀಗೆ ಅಗಲು ಕಾರಣವೇನು ಎಂದು ಪೋಷಕರು ಪ್ರಶ್ನಿಸಿದ್ದಾರೆ.
ತಡರಾತ್ರಿ ಹಾಸ್ಟೆಲ್‌ನಿಂದ ನಮ್ಮ ಮಗನಿಗೆ ಸೀರಿಯಸ್ ಎಂದು ಪೋನ್ ಮಾಡಿದ್ರು, ಇಲ್ಲಿಗೆ ಬಂದು ಬಂದು ನೋಡಿದ್ರೇ ಮಗನ ಸಾವಾಗಿದೆ ಎಂದ ಮೃತ ಬಾಲಕನ ತಂದೆ ಲಕ್ಷ್ಮೀಕಾಂತ ಕಣ್ಣೀರಿಟ್ಟಿದ್ದಾರೆ. ಮೃತ ಬಾಲಕ ಆಂಧ್ರ ಮೂಲದ ಅದವಾನಿ ಗ್ರಾಮದವನಾಗಿದ್ದಾನೆ. ಇಷ್ಟು ಜನರ ಮೇಲೆ ಹಲ್ಲೆ ಮಾಡಿದ್ದಾನೆ ಎಂದ್ರೇ ಅವನು ಗಾಂಜಾ ಹೊಡೆದಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ರಾತ್ರಿ ಊಟದ ಬಳಿಕ ಎಲ್ಲರೂ ಮಲಗಿಕೊಂಡಾಗ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದಾನೆ. ಮಂಚದ ರಾಡ್ , ಸ್ಕೈವರ್, ರೆಡಿಯಮ್ ಕಟರ್ ಚಾಕು ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ ಇದಕ್ಕೆ ನಶೆಯೇ ಕಾರಣ ಇರಬಹುದು ಎಂದು ಪೋಷಕರು ಹೇಳಿದ್ದಾರೆ.


