ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯು ತಾರಕಕ್ಕೇರಿದೆ. ಈ ಘಟನೆಯಿಂದಾಗಿ ಶಾಸಕ ಭರತ್ ರೆಡ್ಡಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಲಾಗಿದೆ. 

ಬಳ್ಳಾರಿ: ನನ್ನಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಯಾರಿಂದಲೇ ನಡೆದಿರಲಿ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಆದರೆ, ನಿನ್ನೆ ತಡರಾತ್ರಿವರೆಗೆ ನಡೆದ ಬೆಳವಣಿಗೆಯಲ್ಲಿ ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಶಾಸಕನಾಗಿ ನಾನು ಜನರ ಕ್ಷಮೆ ಕೇಳುತ್ತೇನೆ ಎಂದರು.

ಶಾಸಕ ನಾಗೇಂದ್ರ ಮಾತನಾಡಿ, ಬಳ್ಳಾರಿಯಲ್ಲಿ ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ರೆಡ್ಡಿ ಅವರ ಮನವೊಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಬಳ್ಳಾರಿಗೆ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ, ಸಿಎಂ ಹಾಗೂ ಡಿಸಿಎಂ ಅವರ ಸೂಚನೆಯಂತೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಸಂಸದ ತುಕಾರಾಂ

ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಇ.ತುಕಾರಾಂ ಸ್ಪಷ್ಟಪಡಿಸಿದ್ದಾರೆ.

ಕಂಪ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಾಟೆ ಅನಿರೀಕ್ಷಿತವಾಗಿ ನಡೆದ ದುರ್ಘಟನೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಈಗಾಗಲೇ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಐಜಿಪಿ ವರ್ತಿಕಾ ಕಾಟೀಯಾರ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯನ್ನು ಭಯಮುಕ್ತವಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಳ್ಳಾರಿ ಬಂಗಾರದ ತಟ್ಟೆಯಂತಹ ಮಹತ್ವದ ಪ್ರದೇಶವಾಗಿದ್ದು, ಇಲ್ಲಿ ಶಾಂತಿ, ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅಮಾನತು

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿರುಗುಪ್ಪ ರಸ್ತೆಯಲ್ಲಿನ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಲಾಗಿದೆ.

ಗುರುವಾರ ರಾತ್ರಿ ನಡೆದ ಗಲಭೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಹಾಗೂ ಮೇಲಿನ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದರಿಂದ ಈ ಕ್ರಮ ವಹಿಸಲಾಗಿದೆ ಎಂದು ಆದೇಶದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಕೆ.ವಿ.ಅಶೋಕ ಈ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶ ತಕ್ಷಣವೇ ಜಾರಿಗೆ ಬಂದಿದ್ದು, ಅಮಾನತ್ತಿನ ಅವಧಿಯಲ್ಲಿ ಅಧಿಕಾರಿ ಸರ್ಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿದೆ.

ಬಳ್ಳಾರಿ ಗಲಾಟೆಗೆ ಕಾರಣ ಆದವರ ಬಂಧಿಸಿ: ರಾಜಣ್ಣ

ತುಮಕೂರು: ಬಳ್ಳಾರಿಯಲ್ಲಿ ನಡೆದ ಗಲಾಟೆ ನಿಜಕ್ಕೂ ಖಂಡನೀಯ. ಇಂತಹ ಹಿಂಸೆ ನಡೆದಿರುವುದು ವಾಲ್ಮೀಕಿ ಮಹರ್ಷಿಗೆ ಮಾಡಿದ ಅವಮಾನ. ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರಲ್ಲಿ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಾಣ ಆಗಬೇಕು. 

ಪೊಲೀಸರ ತನಿಖೆ ನಂತರ ಘಟನೆಗೆ ಕಾರಣಿಕರ್ತರು ಯಾರು ಅನ್ನೋದು ಗೊತ್ತಾಗಲಿದೆ. ಫೈರಿಂಗ್ ಯಾರು ಮಾಡಿದರು ಅನ್ನುವುದನ್ನು ಈಗಲೇ ಊಹಿಸಿ ಹೇಳಿಕೆ ಕೊಡುವುದು ಸರಿಯಲ್ಲ. ಯಾರ ಮೇಲೋ ಆರೋಪ ಮಾಡಿ ಗೂಬೆ ಕೂರಿಸುವುದು ಸರಿಯಲ್ಲ. ಯಾವ ಗನ್‌ನಿಂದ ಗುಂಡು ಹಾರಿದೆ ಅನ್ನುವುದನ್ನು ಪತ್ತೆ ಹಚ್ಚಲು ಎಫ್ಎಸ್ಎಲ್‌ನವರು ಹೋಗಿದ್ದಾರೆ ಎಂದು ತಿಳಿಸಿದರು.