ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಘಟನೆಯನ್ನು ತೀವ್ರವಾಗಿ ಖಂಡಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇದು ರಾಜ್ಯಕ್ಕೆ ಒಳ್ಳೆಯ ಸಂಸ್ಕೃತಿಯಲ್ಲ ಎಂದಿದ್ದಾರೆ. ಇದೇ ವೇಳೆ, ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು, ಪಾರದರ್ಶಕತೆಗಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಬಿಜೆಪಿಗೆ ಸವಾಲು ಹಾಕಿದರು.

ಬೆಂಗಳೂರು (ಜ.2): ಬಳ್ಳಾರಿಯಲ್ಲಿ ನಡೆದ ಗಲಭೆ, ಫೈರಿಂಗ್ ಘಟನೆಯನ್ನು ನಾನು ವೈಯಕ್ತಿಕವಾಗಿ ಖಂಡಿಸಿವೆ ಎಂದು ಪ್ರಕರಣದ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ವಿಧಾನಸೌಧದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಭೆ ಪ್ರಕರಣ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದರು.

ಬಳ್ಳಾರಿ ಗಲಭೆ: ಎಸ್ಪಿ ಜೊತೆ ಚರ್ಚೆ

ಈ ಪ್ರಕರಣದ ಬಗ್ಗೆ ಸದ್ಯ ನನ್ನ ಬಳಿ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಬಳ್ಳಾರಿ ಎಸ್ಪಿ ಅವರ ಜೊತೆ ಪ್ರಾಥಮಿಕವಾಗಿ ಮಾತನಾಡಿದ್ದೇನೆ. ಗೃಹ ಸಚಿವರು ಈಗಾಗಲೇ ಘಟನೆಯ ಸಂಪೂರ್ಣ ವರದಿಯನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಮರ್ಪಕವಾಗಿ ತನಿಖೆಯಾದರೆ ಮಾತ್ರ ಯಾರು ಫೈರಿಂಗ್ ಮಾಡಿದ್ದಾರೆ ಎಂಬ ಸತ್ಯಾಂಶ ಹೊರಬರಲಿದೆ, ಎಂದು ತಿಳಿಸಿದರು.

ರಾಜ್ಯಕ್ಕೆ ಇದು ಒಳ್ಳೆಯ ಸಂಸ್ಕೃತಿಯಲ್ಲ

ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಂತೋಷ್ ಲಾಡ್, ವೈಯಕ್ತಿಕವಾಗಿ ನಾನು ಈ ರೀತಿಯ ಹಿಂಸಾಚಾರವನ್ನು ಖಂಡಿಸುತ್ತೇನೆ. ಗಲಾಟೆ ಮಾಡುವುದು ಅಥವಾ ಗುಂಡು ಹಾರಿಸುವ ಸಂಸ್ಕೃತಿ ರಾಜ್ಯಕ್ಕಾಗಲಿ ಅಥವಾ ಬಳ್ಳಾರಿ ಜಿಲ್ಲೆಗಾಗಲಿ ಗೌರವ ತರುವಂತದ್ದಲ್ಲ. ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಜೆ ವರ್ಗಾವಣೆ ಮಾಡಿದ್ದು ಯಾಕೆ?

ಮುಂದುವರಿದು ಮಾತನಾಡಿದ ಅವರು, ನ್ಯಾಯಾಂಗದ ನಡೆ ಹಾಗೂ ವೋಟ್ ಚೋರಿ ವಿಚಾರದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಸಿಜೆಯನ್ನ (CJ) ಏಕೆ ಬದಲಾವಣೆ ಮಾಡಿದರು? ತಮಗೆ ಅನುಕೂಲವಾಗುವಂತೆ ರಾತ್ರೋರಾತ್ರಿ ವಾತಾವರಣ ನಿರ್ಮಿಸಲಾಯಿತು. ವೋಟ್ ಚೋರಿ ವಿಚಾರದಲ್ಲಿ ವರದಿಗಳು ಹಿನ್ನಡೆ ತರುತ್ತಿವೆ. ಈ ಬಗ್ಗೆ ಕನಿಷ್ಠ ಚುನಾವಣಾ ಆಯೋಗಕ್ಕೂ ಮಾಹಿತಿ ಇಲ್ಲದಂತಾಗಿದೆ ಎಂದು ಗುಡುಗಿದರು.

ಮಾನದಂಡಗಳ ಏರುಪೇರು: IMF ವರದಿ ಉಲ್ಲೇಖ

ದೇಶದ ಆರ್ಥಿಕ ಮತ್ತು ಪ್ರಜಾಪ್ರಭುತ್ವದ ಸ್ಥಿತಿಗತಿ ಬಗ್ಗೆ ಮಾತನಾಡಿದ ಲಾಡ್, IMF (ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ) ಕೂಡ ಹೇಳಿದೆ, ದೇಶದಲ್ಲಿ ಎಲ್ಲಾ ಮಾನದಂಡಗಳು ಏರುಪೇರಾಗಿವೆ ಎಂದು. ನಾವಿನ್ನೂ ಕೇವಲ 'ವಂದೇ ಮಾತರಂ' ಬಗ್ಗೆ ಚರ್ಚೆ ಮಾಡುತ್ತಾ ಕುಳಿತಿದ್ದೇವೆ. ಆದರೆ ವಾಸ್ತವದಲ್ಲಿ ವ್ಯವಸ್ಥೆ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ಯಾಲೆಟ್ ಪೇಪರ್ ಚುನಾವಣೆಗೆ ಭಯವೇಕೆ?

ಇವಿಎಂ (EVM) ಕುರಿತ ಚರ್ಚೆಯನ್ನು ಪ್ರಸ್ತಾಪಿಸಿದ ಸಚಿವರು ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದರು. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಇವರಿಗೆ ಯಾಕೆ ಇಷ್ಟೊಂದು ಭಯ? ಜನರಲ್ಲಿರುವ ಸಂಶಯ ಹೋಗಲಾಡಿಸಲು ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಲಿ ಎಂದು ಒತ್ತಾಯಿಸಿದರು.