ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಆರೋಪದ ಮೇಲೆ ಜಿಲ್ಲಾ ಎಸ್‌ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಅಧಿಕಾರ ಸ್ವೀಕರಿಸಿ 1 ದಿನಕ್ಕೆ ಅಮಾನತ್ತಾಗಿದ್ದಾರೆ.
ಬೆಂಗಳೂರು/ಬಳ್ಳಾರಿ: ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ನಡೆದ ಹಿಂಸಾಚಾರ ಹಾಗೂ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಆರೋಪದ ಮೇಲೆ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿದ್ದ ಪವನ್ ನೆಜ್ಜೂರು (IPS-2016) ಅವರನ್ನು ಅಮಾನತುಗೊಳಿಸಲಾಗಿದೆ. ಸರ್ಕಾರದ ಈ ದಿಢೀರ್ ಕ್ರಮವು ರಾಜ್ಯ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಘಟನೆಯ ವಿವರ:
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಸ್‌ಪಿ ವೃತ್ತದ ಬಳಿ (ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಮನೆ ಮುಂದೆ) ಗುಂಪು ಘರ್ಷಣೆ ನಡೆದಿತ್ತು. ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ರಾಜಕೀಯ ಬಣಗಳ (ಬಿಜೆಪಿ ಜನಾರ್ಧನ ರೆಡ್ಡಿ ಬಣ ಹಾಗೂ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಬಣ) ನಡುವೆ ಸಂಘರ್ಷ ಉಂಟಾಗಿ ಕಲ್ಲು ತೂರಾಟ ನಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಈ ವೇಳೆ ಉದ್ರಿಕ್ತ ಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಜಿಲ್ಲಾ ಪೊಲೀಸ್ ಆಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅಮಾನತಿಗೆ ಕಾರಣಗಳೇನು?
ಡಿಜಿ ಮತ್ತು ಐಜಿಪಿ (DG&IGP) ಅವರು ಸಲ್ಲಿಸಿದ ವರದಿಯ ಆಧಾರದ ಮೇಲೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಮಾನತು ಆದೇಶದಲ್ಲಿ ಮುಖ್ಯವಾಗಿ ಎರಡು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಸ್ಥಿತಿಗತಿ ನಿಭಾಯಿಸುವಲ್ಲಿ ವೈಫಲ್ಯ: ಗಲಭೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಪವನ್ ನೆಜ್ಜೂರು ಅವರು ವಿಫಲರಾಗಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ: ಮೈದಾನದಲ್ಲಿನ ನೈಜ ಸ್ಥಿತಿಗತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಅಥವಾ ಬ್ರೀಫಿಂಗ್ ನೀಡುವಲ್ಲಿ ಎಸ್‌ಪಿ ಎಡವಿದ್ದಾರೆ.
ಸರ್ಕಾರದ ಆದೇಶ: ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ರ ಅಡಿಯಲ್ಲಿ ಈ ಅಮಾನತು ಆದೇಶವನ್ನು ಹೊರಡಿಸಲಾಗಿದೆ.
ಈ ಆದೇಶದ ಪ್ರಮುಖ ಅಂಶಗಳು ಹೀಗಿವೆ:
- ಪವನ್ ನೆಜ್ಜೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
- ತನಿಖೆ ಬಾಕಿ ಇರುವವರೆಗೂ ಇವರು ಕೇಂದ್ರ ಸ್ಥಾನವನ್ನು ಬಿಟ್ಟು ಹೊರಹೋಗುವಂತಿಲ್ಲ.
- ಅಮಾನತು ಅವಧಿಯಲ್ಲಿ ಅವರಿಗೆ ನಿಯಮಾನುಸಾರ ಜೀವನೋಪಾಯ ಭತ್ಯೆಯನ್ನು ನೀಡಲಾಗುತ್ತದೆ.
ಬಳ್ಳಾರಿ ವ್ಯಾಪ್ತಿಯ ಡಿಐಜಿಪಿ (DIGP) ಅವರು ನೀಡಿದ ಶಿಫಾರಸಿನ ಮೇರೆಗೆ ಡಿಜಿ ಮತ್ತು ಐಜಿಪಿ ಅವರು ಈ ಕ್ರಮಕ್ಕೆ ಅನುಮೋದನೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಹಾಗೂ ಅಧಿಕಾರಿಗಳ ಜವಾಬ್ದಾರಿಯನ್ನು ಎಚ್ಚರಿಸಲು ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ಅಮಾನತು:
ರಾಜ್ಯ ಸರ್ಕಾರವು ಹೊಸ ವರ್ಷಕ್ಕೂ ಮುನ್ನ ರಾಜ್ಯಾದ್ಯಂತ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಗೆ ವರ್ಗಾವಣೆಯಾಗಿದ್ದ ಪವನ್ ನೆಜ್ಜೂರು ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಿ.31ರಂದು ಅಧಿಕಾರ ಸ್ವೀಕರಿಸಿದ್ದರು. ಬಳ್ಳಾರಿ ನಗರದ ಬಗ್ಗೆ ಮಾಹಿತಿ ಸಂಗ್ರಹಿಸುವ ಮುನ್ನವೇ ಜ.1ರ ರಾತ್ರಿ ದೊಡ್ಡದಾಗಿ ಗಲಭೆ ನಡೆದಿದೆ. ನಗರದ ಪರಿಚಯವೇ ಇಲ್ಲದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ತವ್ಯ ಲೋಪದ ಆಧಾರದ ಮೇಲೆ ಇದೀಗ ಅಮಾನತ್ತಾಗಿ ಮನೆಯಲ್ಲಿ ಕೂರುವಂತಾಗಿದೆ. ಇದು ಅವರ ಸರ್ಕಾರಿ ಸೇವೆಯ ಮೇಲೆಯೂ ಕಪ್ಪುಚುಕ್ಕೆಯಾಗಿ ಶಾಶ್ವತವಾಗಿ ಉಳಿಯಲಿದೆ.


