ಉಪನಿಷತ್ತು ಹೇಳುವಂತೆ, ಮನಸ್ಸು, ಪರಿಸರ ಮತ್ತು ಆತ್ಮದಲ್ಲಿ ಶಾಂತಿ ನೆಲೆಸಿದಾಗ ಮಾತ್ರ ನಿಜವಾದ ಜ್ಞಾನವನ್ನು ಗ್ರಹಿಸಲು ಸಾಧ್ಯ; ದೇವರೊಂದಿಗೆ ಒಂದಾಗುವ ಸಮರ್ಪಣೆಯೇ ಭಯ, ಆತಂಕ ಮತ್ತು ಚಿಂತೆಯಿಂದ ಮುಕ್ತಿಯ ದಾರಿ ಎಂದು ಗುರುದೇವ ಶ್ರೀ ಶ್ರೀ ರವಿಶಂಕರ್ ವಿವರಿಸಿದ್ದಾರೆ.

ಗುರುದೇವ ಶ್ರೀ ಶ್ರೀ ರವಿ ಶಂಕರ್

‘ಉಪನಿಷತ್’ ಎಂಬ ಪದದ ಅರ್ಥ ಗುರುವಿನ ಸಮೀಪದಲ್ಲಿ ಕುಳಿತುಕೊಳ್ಳುವುದು. ಕೇವಲ ದೈಹಿಕವಾಗಿ ಸಮೀಪದಲ್ಲಿ ಕುಳಿತುಕೊಳ್ಳುವುದಲ್ಲ, ಮಾನಸಿಕವಾಗಿಯೂ ಗುರುವಿನ ಸಮೀಪದಲ್ಲಿರುವುದು. ಮಾನಸಿಕವಾಗಿ ಸಮೀಪದಲ್ಲಿ ಕುಳಿತುಕೊಳ್ಳುವುದೆಂದರೆ, ಗುರುವಿನ ಮಾತುಗಳನ್ನೂ, ಆ ಮಾತುಗಳ ಹಿಂದಿರುವ ಚೈತನವನ್ನೂ ಅರ್ಥಮಾಡಿಕೊಳ್ಳುವುದು. ಅನೇಕ ವಿಷಯಗಳನ್ನು ಶಬ್ದಗಳ ಮೂಲಕ ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ವಿಷಯವು ಎಷ್ಟು ಗಹನವಾಗಿರುತ್ತದೆಯೋ, ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಅಷ್ಟೇ ಕಷ್ಟವಾಗುತ್ತದೆ. ನೋವು ಅಥವಾ ಪ್ರೀತಿಯಂತಹ ಯಾವುದೇ ಭಾವನೆಯನ್ನು ನೀವು ಅನುಭವಿಸಬಹುದು; ಆದರೆ ಅದನ್ನು ಸಂಪೂರ್ಣವಾಗಿ ವಿವರಿಸುವುದು ಅಥವಾ ವ್ಯಕ್ತಪಡಿಸುವುದು ಅಸಾಧ್ಯ. ಯಾವುದನ್ನಾದರೂ ಸಂಪೂರ್ಣವಾಗಿ ಶಬ್ದಗಳಲ್ಲಿ ವಿವರಿಸಲು ನಿಮಗೆ ಸಾಧ್ಯವಾದರೆ, ಆ ವಿಷಯ ಸೂಕ್ಷ್ಮವಾದದ್ದಲ್ಲ, ಸ್ಥೂಲವಾದದ್ದು ಎಂದರ್ಥ. ಉಪನಿಷತ್ತನ್ನು ಅಧ್ಯಯನ ಮಾಡಿ, ಅದರ ಬಗ್ಗೆ ಮನನ ಮಾಡುವುದರಿಂದ, ಶಬ್ದಗಳಿಗೆ ನಿಲುಕದ ಅನೇಕ ವಿಷಯಗಳನ್ನು ಗ್ರಹಿಸಬಹುದು; ಇಲ್ಲಿ ಶಬ್ದಗಳು ಕೇವಲ ಒಂದು ಮಾಧ್ಯಮವಾಗಿದ್ದು, ಅವುಗಳ ಮೂಲಕ ಶಕ್ತಿ, ಕೃಪೆ ಮತ್ತು ಆನಂದದ ಪ್ರವಾಹ ಹರಿದು, ನಿಮ್ಮ ಜೀವನವನ್ನೇ ಪರಿವರ್ತಿಸಬಲ್ಲದು.

ಉದಾಹರಣೆಗೆ, 'ಯೋಗಸಾರ ಉಪನಿಷತ್ತು' ದೇವರೊಂದಿಗೆ ಒಂದಾಗುವ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ‘ಯೋಗ’ ಎಂದರೆ ಒಂದಾಗುವುದು. ಈ ಸಂಪೂರ್ಣ ಸೃಷ್ಟಿಯಲ್ಲಿ ಒಂದಾಗುವ ಮತ್ತು ಏಕವಾಗುವ ಒಂದು ಸಹಜ ಪ್ರವೃತ್ತಿ ಇದೆ; ಏಕೆಂದರೆ ‘ಎರಡು’ (ಬೇರ್ಪಟ್ಟ ಸ್ಥಿತಿ) ಎಂಬುದು ನೋವಿನಿಂದ ಕೂಡಿರುತ್ತದೆ. ಪ್ರತಿಯೊಂದೂ ಯಾವುದೋ ಒಂದರೊಂದಿಗೆ ವಿಲೀನಗೊಳ್ಳಲು ಬಯಸುತ್ತದೆ. ಈ ತುಡಿತವನ್ನೇ ಪ್ರೀತಿ ಎಂದು ಕರೆಯಲಾಗುತ್ತದೆ; ದೇವರ ಮೇಲಿನ ಅಂತಹ ಪ್ರೀತಿಯನ್ನೇ ‘ಯೋಗ’ ಎಂದು ಕರೆಯುತ್ತಾರೆ.

ಇದಕ್ಕಾಗಿ ಶಾಂತಿ ಮೊದಲನೆಯ ಹಾಗೂ ಅತ್ಯಂತ ಪ್ರಮುಖವಾದ ಅವಶ್ಯಕತೆ. ಏಕೆಂದರೆ ಶಾಂತಿ ಇದ್ದಾಗ ಮಾತ್ರ ನೀವು ಜ್ಞಾನವನ್ನು ಪಡೆಯಲು ಸಾಧ್ಯ. ಶಾಂತಿಯಲ್ಲಿ ಮೂರು ವಿಧಗಳಿವೆ — ಪರಿಸರದಲ್ಲಿ ಶಾಂತಿ, ಮನಸ್ಸಿನಲ್ಲಿ ಶಾಂತಿ ಮತ್ತು ಆತ್ಮದಲ್ಲಿ ಶಾಂತಿ. ಈ ಮೂರು ಬಗೆಯ ಶಾಂತಿ ನಿಮ್ಮಲ್ಲಿ ಸ್ವಲ್ಪ ಮಟ್ಟಿಗಾದರೂ ಇಲ್ಲದಿದ್ದರೆ, ಮಾತುಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗದೇ ಹೋಗಬಹುದು.

ನಿಮ್ಮ ಸುತ್ತಲೂ ಶಾಂತಿಯುತ ವಾತಾವರಣ ಇರಬೇಕು. ನಿಮ್ಮ ಮನಸ್ಸು ಶಾಂತವಾಗಿದ್ದು, ನಿಮ್ಮ ನಿಯಂತ್ರಣದಲ್ಲಿರಬೇಕು. ಮನಸ್ಸು ಚಂಚಲವಾಗಿದ್ದು, ನಿಮ್ಮ ವ್ಯವಹಾರ, ಮನೆ ಅಥವಾ ಕಾರಿನ ಕಡೆಗೆ ಅಲೆದಾಡುತ್ತಿದ್ದರೆ, ನೀವು ಸಂಪೂರ್ಣವಾಗಿ ಆಲಿಸಲು ಅಥವಾ ಗ್ರಹಿಸಲು ಸಾಧ್ಯವಾಗುವುದಿಲ್ಲ. ಆಗ ಗುರುವಿನ ಸನಿಹದಲ್ಲಿ ಕುಳಿತಿದ್ದರೂ ಜ್ಞಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ, ನಿಮ್ಮ ಆತ್ಮದಲ್ಲಿಯೂ ಶಾಂತಿ ಇರಬೇಕು. ಆತ್ಮವು ಸಂಪೂರ್ಣವಾಗಿ ಅಶಾಂತವಾಗಿದ್ದರೆ, ಅದು ಜ್ಞಾನದ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ.

ಆದಿ-ಅಂತ್ಯಗಳಿಲ್ಲದ ಮತ್ತು ಸಮಸ್ತ ಜ್ಞಾನದ ಮೂಲವಾಗಿರುವ ಭಗವಂತನನ್ನು ಆರಾಧಿಸಿ ಪೂಜಿಸುವುದರ ಮೂಲಕ ಈ ಮೂರು ಬಗೆಯ ಶಾಂತಿಯನ್ನು ಪಡೆಯಬಹುದು ಎಂದು ಉಪನಿಷತ್ತು ಹೇಳುತ್ತದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಕಾವ್ಯ ಮತ್ತು ಸಂಗೀತ, ಇವೆಲ್ಲವೂ ಅಂತಹ ಚೇತನದಿಂದಲೇ ಉದ್ಭವಿಸುತ್ತವೆ. ಆ ಚೈತನ್ಯ, ಆ ಅನಂತತೆ, ಆ ದಿವ್ಯತೆಯನ್ನೇ ಬ್ರಹ್ಮನ್ (ಪರಮಾತ್ಮ) ಎಂದು ಕರೆಯಲಾಗುತ್ತದೆ. ಆತನೇ ಈ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಪರಿವರ್ತನೆಗೆ ಕಾರಣನಾಗಿದ್ದಾನೆ.

ಉಪನಿಷತ್ತಿನ ಮೊದಲ ವಾಕ್ಯವೇ ದೇವರನ್ನು ಒಂದು ಜ್ಯೋತಿರ್ಮಯ ತತ್ತ್ವವಾಗಿ ಪರಿಚಯಿಸುತ್ತದೆ. ಆತನು ಸೂರ್ಯನಂತೆ ಪ್ರಕಾಶಿಸುತ್ತಾನೆ. ಸೂರ್ಯನು ಈ ಭೂಮಿಯ ಮೇಲಿನ ಸಮಸ್ತ ಜೀವರಾಶಿಗೂ ಹೇಗೆ ಚಾಲಕ ಶಕ್ತಿಯಾಗಿದ್ದಾನೋ, ಹಾಗೆಯೇ ದೇವರು ಸಮಸ್ತ ಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದಾನೆ. ಆತನು ಸ್ವಯಂ-ಪ್ರಕಾಶಮಾನನಾಗಿದ್ದು, ಇತರರನ್ನೂ ಬೆಳಗಿಸುತ್ತಾನೆ. ಒಂದು ಟಾರ್ಚ್‌ ಹಿಡಿದಾಗ, ಅದರ ಬೆಳಕಿನಿಂದ ನೀವು ಕತ್ತಲೆಯಲ್ಲಿರುವ ಎಲ್ಲವನ್ನೂ ಮಾತ್ರವಲ್ಲದೆ, ಆ ಟಾರ್ಚನ್ನೂ ನೋಡಬಹುದು; ಏಕೆಂದರೆ ಟಾರ್ಚ್ ಸ್ವತಃ ಬೆಳಕಿನ ಮೂಲವಾಗಿದೆ.

ಅದೇ ರೀತಿಯಲ್ಲಿ, ನೀವೂ ಸಹ ಸ್ವಯಂ-ಪ್ರಕಾಶಮಾನರಾಗಿದ್ದೀರಿ. ನೀವು ಇಲ್ಲಿರುವಾಗ, ನಿಮ್ಮ ಅಸ್ತಿತ್ವಕ್ಕೆ ಬೇರೆ ಯಾವುದೇ ಸಾಕ್ಷಿಯ ಅಗತ್ಯವಿರುವುದಿಲ್ಲ; ನಿಮ್ಮ ಉಪಸ್ಥಿತಿಯೇ ಸಾಕು. ಬೇರೆ ಯಾವುದಾದರೂ ವಿಧಾನದಿಂದ ನಿಮ್ಮನ್ನು ಸಾಬೀತುಪಡಿಸಲು ಪ್ರಯತ್ನಿಸಿದರೆ, ಆ ವಿಧಾನಗಳು ಸುಳ್ಳು ಆಧಾರಗಳಾಗುತ್ತವೆ. ಆದ್ದರಿಂದ, ದೇವರನ್ನು ಹುಡುಕುವಾಗ ಸಾಕ್ಷಿಗಾಗಿ ಸುಳ್ಳು ವಿಧಾನಗಳನ್ನು ಹುಡುಕಬೇಡಿ. ಭಗವಂತನು ಇಂತಹ ಸಾಕ್ಷ್ಯಗಳಿಗೆ ಅತೀತನಾದವನು.

ನೀವು ತಲೆಯ ಮೇಲೆ ಹೊರೆಯೊಂದನ್ನು ಹೊತ್ತುಕೊಂಡಿದ್ದರೆ, ಮುಕ್ತಿ ಅಥವಾ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಿಲ್ಲ. “ನಾನು ಮಹಾನ್” ಎಂದು ನೀವು ಭಾವಿಸುತ್ತಿದ್ದು, ಸಾವಿನ ಆಲೋಚನೆಯೇ ನಿಮ್ಮನ್ನು ಭಯಭೀತರನ್ನಾಗಿಸುತ್ತಿದ್ದರೆ, ಹೇಗೆ ತಾನೇ ನೀವು ಮುಕ್ತಿಯನ್ನು ಅನುಭವಿಸಲು ಸಾಧ್ಯ? ನೀವು ದೇವರೊಂದಿಗೆ ಒಂದಾಗದಿದ್ದರೆ, ನಿಜವಾದ ಅರ್ಥದಲ್ಲಿ ನೀವು ಕಣ್ಮರೆಯಾಗುವಿರಿ. ನಿಮ್ಮನ್ನು ನೀವು ಉಳಿಸಿಕೊಳ್ಳಲು ಸಾಧ್ಯವಾಗುವುದು ದೇವರೊಂದಿಗೆ ಒಂದಾಗುವುದರಿಂದ ಮಾತ್ರ. ನೀವು ಕಳೆದುಕೊಳ್ಳುವುದೇನೆಂದರೆ, ನಿಮ್ಮ ಮನಸ್ಸಿಗೆ ಹೊರೆಯಾಗಿ, ನಿಮ್ಮೊಳಗಿನ ಅನಂತ ಸಾಮರ್ಥ್ಯವನ್ನು ಅನುಭವಿಸದಂತೆ ನಿಮ್ಮನ್ನು ತಡೆಯುವ ಭಯ, ಆತಂಕ, ಒತ್ತಡ, ಚಿಂತೆ ಮತ್ತು ಸೀಮಿತ ದೃಷ್ಟಿಕೋನಗಳನ್ನು ಮಾತ್ರ. ಸಮರ್ಪಣೆ ಉಂಟಾದ ಕ್ಷಣದಲ್ಲೇ, ಶಾಂತಿ ಮತ್ತು ಸ್ವಾತಂತ್ರ್ಯದ ಅನುಭವ ನಿಮ್ಮೊಳಗೆ ಮೂಡುತ್ತದೆ.