ಪ್ರತಿನಿತ್ಯ ದೇವರ ದೀಪ ಹಚ್ಚಿದ ನಂತರ ಉಳಿಯುವ ಬತ್ತಿಯನ್ನು ಕಸಕ್ಕೆ ಎಸೆಯುವುದು ತಪ್ಪು. ಈ ಸುಟ್ಟ ಬತ್ತಿಗಳನ್ನು ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮತ್ತು ಮಕ್ಕಳಿಗೆ ತಗುಲಿದ ದೃಷ್ಟಿ ತೆಗೆಯಲು ಹೇಗೆ ಬಳಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಹೆಚ್ಚಿನ ಮನೆಗಳಲ್ಲಿ ಪ್ರತಿನಿತ್ಯವೂ ದೇವರಿಗೆ ದೀಪವನ್ನು ಹಚ್ಚುವುದು ವಾಡಿಕೆ. ದೇವರ ಮುಂದೆ ಒಂದು ದೀಪ ಇದ್ದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ ಸದಾ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ. ಅಷ್ಟಕ್ಕೂ ಹಿಂದೂ ಧರ್ಮದಲ್ಲಿ ದೀಪಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕೆಲವರು ಒಂದೇ ದೀಪ ಹಚ್ಚಿದರೆ, ಮತ್ತೆ ಕೆಲವರು ದೇವರ ಇಕ್ಕೆಲಗಳಲ್ಲಿ ಎರಡು ದೀಪಗಳನ್ನು ಹಚ್ಚುವುದು ಇದೆ. ಇದಕ್ಕೆ ಪ್ರತಿನಿತ್ಯವೂ ಬತ್ತಿಯನ್ನು ಬದಲಿಸಬೇಕು ಎನ್ನುವ ಮಾತಿದೆ. ಆದರೆ ಕೆಲವರು ಒಂದು ಬತ್ತಿಯು ಸಂಪೂರ್ಣ ಸುಟ್ಟು ಕರಕಲಾಗುವವರೆಗೂ ಅದನ್ನೇ ಉರಿಸುವುದು ಇದೆ.

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿನಿತ್ಯ ಎರಡು ಬತ್ತಿಗಳನ್ನು ದೇವರ ಮುಂದೆ ಇಟ್ಟು ದೀಪ ಹಚ್ಚುವುದು ವಾಡಿಕೆ. ಸಂಪ್ರದಾಯದ ಪ್ರಕಾರ, ಪ್ರತಿನಿತ್ಯವೂ ಬತ್ತಿಗಳನ್ನು ಬದಲಾಯಿಸಬೇಕು. ಆದರೆ ಹೀಗೆ ಬತ್ತಿ ಬದಲಾಯಿಸಿದಾಗ, ಅದನ್ನು ಕಸದ ಬುಟ್ಟಿಗೆ ಎಸೆಯುವವರೇ ಹೆಚ್ಚು ಮಂದಿ. ಆದರೆ, ಇದು ತಪ್ಪು ಎನ್ನುತ್ತದೆ ಶಾಸ್ತ್ರ. ದೇವರ ಮುಂದೆ ಇಟ್ಟು ಉರಿದಿರುವ ಬತ್ತಿ ಕೂಡ ಶ್ರೇಷ್ಠವಾಗಿದ್ದು, ಅದನ್ನು ಕಸದ ಬುಟ್ಟಿಗೆ ಎಸೆಯುವುದು ಸರಿಯಲ್ಲ.

ಏನು ಮಾಡಬೇಕು?

ಹಾಗೆಂದು ಅದನ್ನು ಹಾಗೆಯೇ ಇಟ್ಟುಕೊಳ್ಳಲು ಆಗುವುದಿಲ್ಲ. ಗಿಡ,ಮರ ಇದ್ದರೂ ಅವುಗಳ ಬುಡದಲ್ಲಿ ಚೆಲ್ಲಿದರೆ ಪುನಃ ಅದು ಯಾರದ್ದೋ ಕಾಲ್ತುಳಿತಕ್ಕೆ ಒಳಗಾಗುತ್ತದೆ. ಕುಂಡಗಳಲ್ಲಿ ಹಾಕಿದರೆ ಎಣ್ಣೆಯ ಅಂಶ ಕುಂಡಕ್ಕೆ ಬಿದ್ದು, ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಕಸದ ಬುಟ್ಟಿಗೇ ಹಾಕಿಬಿಡುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಇದೇ ಬತ್ತಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ನೆಗೆಟಿವ್​ ಎನರ್ಜಿಗಳನ್ನು ತೆಗೆಯಲು ಸಹಕಾರಿಯಾಗಿದೆ.

ದೃಷ್ಟಿ ತೆಗೆಯಲು ಅನುಕೂಲ

ಹೌದು. ವಾರಕ್ಕೊಮ್ಮೆ ಒಟ್ಟುಗೂಡುವ ಬತ್ತಿನಲ್ಲಿ ಒಂದೆಡೆ ಕಲೆಕ್ಟ್​ಮಾಡಿಕೊಂಡು ಇಡಿ. ಕೊನೆಗೆ ಅದನ್ನು ಒಂದು ದೇವರ ಬಟ್ಟಲಿನಲ್ಲಿ ಅಥವಾ ಸಾಧ್ಯವಾದರೆ ಮಣ್ಣಿನ ಹಣತೆಯಲ್ಲಿ ಇಟ್ಟು, ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಿ, ಅದನ್ನು ನಿಮ್ಮ ಮಕ್ಕಳಿಗೆ ದೃಷ್ಟಿ ತೆಗೆಯಲು ಬಳಸಿ. ದೃಷ್ಟಿ ತೆಗೆಯುವುದು ಎಂದರೆ, ಸಾಮಾನ್ಯವಾಗಿ ದೃಷ್ಟಿ ಹೇಗೆ ತೆಗೆಯಲಾಗುತ್ತದೆಯೋ ಅದೇ ರೀತಿ, ಮಕ್ಕಳನ್ನು ಕುಳ್ಳರಿಸಿ ಆ ದೀಪದಿಂದ ದೃಷ್ಟಿ ತೆಗೆಯಿರಿ. ಅದು ಸಂಪೂರ್ಣ ಸುಟ್ಟು ಕರಕಲಾಗುವವರೆಗೂ ಹಾಗೆಯೇ ಇರಲಿ. ಆ ಬಳಿಕ ಬೂದಿ ಏನಾದರೂ ಇದ್ದರೆ ಅದು ಸಂಪೂರ್ಣ ತಣ್ಣಗಾದ ಮೇಲೆ ಗಿಡದ ಬುಡಕ್ಕೆ ಹಾಕಿ. ಹೀಗೆ ಮಾಡಿದರೆ ಬತ್ತಿಯನ್ನೂ ಒಳಿತಿಗೆ ಬಳಸಿದಂತೆ ಆಗುತ್ತದೆ.