2026ರಲ್ಲಿ ಪ್ರಪಂಚ ನಾಶವಾಗಲಿದೆ ಎಂಬ ಬಾಬಾ ವಂಗಾ ಭವಿಷ್ಯವಾಣಿಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಆದರೆ, ಬಾಬಾ ವಂಗಾ ಹೇಳಿರುವುದೇನು? ನಿಜಕ್ಕೂ ಏನಾಗಲಿದೆ? ಇಲ್ಲಿದೆ ಓದಿ ನೋಡಿ. 

2026ನೇ ವರ್ಷ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ದುನಿಯಾ ನಾಶ’, ‘ಎಲ್ಲವೂ ಮುಗಿತು’ ಎಂಬ ಮೀಮ್ಸ್‌ಗಳು, ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಕೆಲವರು 2026ರಲ್ಲಿ ಪ್ರಪಂಚ ಅಂತ್ಯವಾಗುತ್ತದೆ ಎಂದು ಭವಿಷ್ಯವಾಣಿ ನೀಡುತ್ತಿದ್ದಾರೆ. ಮೂರನೇ ಮಹಾಯುದ್ಧ, ಭೀಕರ ಪ್ರಕೃತಿ ವಿಕೋಪಗಳು, ಭೂಮಿಗೆ ಏಲಿಯನ್ಸ್‌ ಪ್ರವೇಶ, ಕ್ಷುದ್ರಗ್ರಹ ಡಿಕ್ಕಿ, ಆರ್ಥಿಕ ವಿನಾಶ– ಇಂತಹ ಭಯಾನಕ ಭವಿಷ್ಯವಾಣಿಗಳು ಎಲ್ಲೆಂದರಲ್ಲಿ ಕೇಳಿಬರುತ್ತಿವೆ.

Add Asianetnews Kannada as a Preferred SourcegooglePreferred

ಈ ಭೀತಿಗೆ ಪ್ರಮುಖ ಕಾರಣವೆಂದರೆ ಬಲ್ಗೇರಿಯಾದ ಅಂಧ ಜ್ಯೋತಿಷಿ ಬಾಬಾ ವಂಗಾ ಹೆಸರಿನಲ್ಲಿ ಹರಡಲಾಗುತ್ತಿರುವ ಭವಿಷ್ಯವಾಣಿಗಳು. ಅವರ ಅನುಯಾಯಿಗಳ ಹೇಳಿಕೆಯ ಪ್ರಕಾರ, 2026ರಲ್ಲಿ ಮಹಾಯುದ್ಧ, ಭೂಕಂಪ, ಪ್ರವಾಹ, ಅತಿವೃಷ್ಟಿ, ಜ್ವಾಲಾಮುಖಿ ಸ್ಫೋಟಗಳು ಸಂಭವಿಸಬಹುದು. ಜೊತೆಗೆ ಭೂಮಿಗೆ ಅನ್ಯಗ್ರಹ ಜೀವಿಗಳ ಸಂಪರ್ಕವಾಗಬಹುದು ಎಂಬ ಮಾತುಗಳೂ ಹರಡಿವೆ. ಹಾಗೇ ಅತಿಯಾದ ಎಐ ಹುಟ್ಟು ಮತ್ತು ಬಳಕೆಯಿಂದ ಕೋಟ್ಯಂತರ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗಿದೆ.

ಆದರೆ ಸತ್ಯವೇನೆಂದರೆ, ಬಾಬಾ ವಂಗಾ 1996ರಲ್ಲೇ ನಿಧನರಾಗಿದ್ದು, ಅವರ ಯಾವುದೇ ಭವಿಷ್ಯವಾಣಿಗಳಿಗೂ ಅಧಿಕೃತ ಲಿಖಿತ ದಾಖಲೆಗಳಿಲ್ಲ. ಅವು ಮಾತುಮಾತಾಗಿ ಹರಡಿವೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಬಹುತೇಕ ಮಾಹಿತಿಗಳು ಹಳೆಯ ಹೇಳಿಕೆಗಳ ತಪ್ಪು ಅರ್ಥ, ಊಹಾಪೋಹ ಮತ್ತು ಅತಿರಂಜಿತ ವ್ಯಾಖ್ಯಾನಗಳೇ ಎಂದು ತಜ್ಞರು ಹೇಳುತ್ತಾರೆ. ವಾಸ್ತವದಲ್ಲಿ, ಬಾಬಾ ವಂಗಾ ಪ್ರಪಂಚ ಅಂತ್ಯವಾಗುವುದು 5079ರಲ್ಲಿ ಎಂದು ಹೇಳಿದ್ದಾರೆ ಎನ್ನಲಾಗುತ್ತದೆ. 2026ರಲ್ಲಿ ಅಲ್ಲ.

ಬಾಬಾ ವಂಗಾ ಮಾತ್ರವಲ್ಲದೆ, ನಾಸ್ಟ್ರಡಾಮಸ್‌ರ ಕಾವ್ಯವಾಣಿಗಳನ್ನೂ 2026ಕ್ಕೆ ಜೋಡಿಸಿ ‘ರಕ್ತದ ನದಿಗಳು ಹರಿಯಲಿವೆ’, ‘ರೋಗಗಳು ಹರಡಲಿವೆ’, ‘ಕ್ರೂರ ಆಡಳಿತಗಾರರು ಬರಲಿದ್ದಾರೆ’ ಎಂದು ಅರ್ಥೈಸಲಾಗುತ್ತಿದೆ. ಇನ್ನು ಕೆಲ ಜ್ಯೋತಿಷಿಗಳು, ಧಾರ್ಮಿಕ ನಾಯಕರು ತಮ್ಮದೇ ಭವಿಷ್ಯವಾಣಿಗಳನ್ನು ಸೇರಿಸಿ ಭೀತಿಗೆ ಇಂಧನ ತುಂಬುತ್ತಿದ್ದಾರೆ. ಯುದ್ಧದ ಭಯವಂತೂ ಸಾಕಷ್ಟಿದೆ. ರಷ್ಯಾ- ಉಕ್ರೇನ್‌ ಯುದ್ಧ, ಅಮೆರಿಕ- ವೆನೆಜುವೆಲಾ ಬೆಳವಣಿಗೆ, ಇರಾನ್-‌ ಇಸ್ರೇಲ್- ಸಿರಿಯಾ ಯುದ್ಧ, ಪರಮಾಣು ಬಾಂಬ್‌ಗಳನ್ನು ಹೊಂದಿರುವ ಚೀನಾ, ಪಾಕಿಸ್ತಾನದ ತಗಾದೆಗಳು ಇವೆಲ್ಲವೂ ಯುದ್ಧಭೀತಿಗೆ ಇಂಧನ ತುಂಬಿವೆ.

ವದಂತಿಗಳು ಏಕೆ ಇಷ್ಟು ಬೇಗ ಹರಡುತ್ತವೆ?

ತಜ್ಞರ ಪ್ರಕಾರ, ಭಯ ಮತ್ತು ಅನಿಶ್ಚಿತತೆ ಇರುವ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತವೆ. ಯುದ್ಧ, ಹವಾಮಾನ ಬದಲಾವಣೆ, ಆರ್ಥಿಕ ಸಮಸ್ಯೆಗಳು, ಕೃತಕ ಬುದ್ಧಿಮತ್ತೆ (AI) ವೇಗದ ಬೆಳವಣಿಗೆ – ಇವೆಲ್ಲವೂ ಈಗಾಗಲೇ ಜನರಲ್ಲಿ ಆತಂಕ ಮೂಡಿಸಿರುವ ವಿಷಯಗಳು. ಅದಕ್ಕೆ ‘2026 ಅಂತಿಮ ವರ್ಷ’ ಎಂಬ ಒಂದು ದಿನಾಂಕ ಸೇರಿಸಿದಾಗ, ಜನರಿಗೆ ಒಂದು ರೀತಿಯ ಖಚಿತತೆ ಸಿಗುತ್ತದೆ. ಹೆದರಿದವನ ಮೇಲೆ ಹಾವೆಸೆದಂತಾಗುತ್ತದೆ. ಇದೇ ಕಾರಣಕ್ಕೆ ಇಂತಹ ವದಂತಿಗಳು ಹೆಚ್ಚು ಶೇರ್ ಆಗುತ್ತವೆ.

ಇತಿಹಾಸ ನೋಡಿದರೆ, ಇಂತಹ ಅನೇಕ ‘ಪ್ರಪಂಚ ಅಂತ್ಯ’ ಭವಿಷ್ಯವಾಣಿಗಳು ವಿಫಲವಾಗಿವೆ. 2000ನೇ ವರ್ಷದ Y2K ಭೀತಿ, 2012ರ ಮಾಯನ್ ಕ್ಯಾಲೆಂಡರ್ ಅಂತ್ಯದ ಕಥೆ – ಯಾವುದೂ ನಿಜವಾಗಲಿಲ್ಲ. ಮಾನವಕುಲ ಪ್ರತಿಸಾರಿ ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದೆಯೇ ಹೊರತು, ನಾಶವಾಗಿಲ್ಲ.

ಹಾಗಾದರೆ 2026ರಲ್ಲಿ ಏನಾಗಲಿದೆ?

2026ರಲ್ಲಿ ಯುದ್ಧ, ಪ್ರಕೃತಿ ವಿಕೋಪ, ತಾಂತ್ರಿಕ ಸವಾಲುಗಳು ಇರಬಹುದು. ಆದರೆ ‘ಪ್ರಪಂಚ ಅಂತ್ಯ’ವಾಗಲಿದೆ ಎಂಬುದು ಬಹಳ ಅಸಂಭವ. ವದಂತಿಗಳನ್ನು ನಂಬದೇ, ನಂಬಬಹುದಾದ ಮಾಹಿತಿಯನ್ನು ಮಾತ್ರ ಪರಿಶೀಲಿಸಿ ಎಂದು ತಜ್ಞರು ಸಲಹೆ ಕೊಡುತ್ತಾರೆ. ಸಾರಾಂಶವಾಗಿ ಹೇಳುವುದಾದರೆ, 2026 ಭಯದ ವರ್ಷವಾಗಬಹುದು, ಆದರೆ ಮಾನವಕುಲದ ಕೊನೆಯ ವರ್ಷ ಅಲ್ಲ. ‘ಟಾಟಾ ಬೈಬೈ’ ಹೇಳಬೇಕಿರುವುದು 2025ಕ್ಕೆ – ಪ್ರಪಂಚಕ್ಕೆ ಅಲ್ಲ. ಎಲ್ಲ ಸಮಸ್ಯೆಗಳ ನಡುವೆಯೂ ಈ ಜಗತ್ತು ಮುಂದುವರಿಯುತ್ತಲೇ ಇರುತ್ತದೆ.