ಜೀವನದ ಅನುಭವಗಳೇ ಅತ್ಯುತ್ತಮ ಶಿಕ್ಷಕ. ಯಶಸ್ಸು, ವೈಫಲ್ಯಗಳ ಮೂಲಕ ಕಲಿಯುವ ಪಾಠಗಳು ಪುಸ್ತಕಗಳಿಂದ ಸಿಗುವುದಿಲ್ಲ. ಚಾಣಕ್ಯರು ಹೇಳುವ ಏಳು ಅಮೂಲ್ಯ ಪಾಠಗಳನ್ನು ತಿಳಿಯಿರಿ.
ಕಾಲ ಎಲ್ಲಾ ಗಾಯಗಳನ್ನು ಗುಣಪಡಿಸುತ್ತದೆ. ವಯಸ್ಸಾದಂತೆ ಬುದ್ಧಿವಂತಿಕೆ ಬರುತ್ತದೆ ಎಂದೆಲ್ಲ ಹೇಳುತ್ತಾರೆ. ಹೌದು, ಕಾಲವೇ ನಿಜವಾಗಿಯೂ ಜೀವನದ ಅತ್ಯಂತ ಶಕ್ತಿಶಾಲಿ ಶಿಕ್ಷಕ. ನೀವು ಎಷ್ಟೇ ಸಲಹೆಗಳನ್ನು ಓದಿದರೂ ಅಥವಾ ಎಷ್ಟು ಎಚ್ಚರಿಕೆಗಳನ್ನು ಕೇಳಿದರೂ, ಕೆಲವು ಪಾಠಗಳು ನಿಮ್ಮ ಬದುಕಿನ ಅನುಭವಗಳಿಂದಲೇ ಬರಬೇಕು. ನೀವು ಸಂತೋಷದ ಮತ್ತು ಸವಾಲಿನ- ಎರಡೂ ಕ್ಷಣಗಳನ್ನು ಅನುಭವಿಸಿದಾಗ ಮಾತ್ರ ಪಾಠ ಕಲೀತೀರಿ. ಪ್ರತಿಯೊಂದು ಅನುಭವ, ಅದು ಯಶಸ್ಸಾಗಿರಲಿ, ವೈಫಲ್ಯವಾಗಿರಲಿ, ಪುಸ್ತಕಗಳಿಂದ ಪಡೆಯಲಾಗದ ತಿಳುವಳಿಕೆಯನ್ನು ನಿಮ್ಮಲ್ಲಿ ಮೂಡಿಸುತ್ತವೆ. ಆ ಪಾಠಗಳು ನಿಮಗೆ ಗೊಂದಲದಲ್ಲಿ ಸ್ಪಷ್ಟತೆಯನ್ನು, ಹತಾಶೆಯಲ್ಲಿ ತಾಳ್ಮೆಯನ್ನು ಮತ್ತು ದುರ್ಬಲತೆಯಲ್ಲಿ ಶಕ್ತಿಯನ್ನು ನೀಡುತ್ತವೆ. ಹಿರಿಯರು ನಿಮಗೆ ಯಾವಾಗಲೂ ʼನೀವು ವಯಸ್ಸಾದಾಗ ಗೊತ್ತಾಗುತ್ತದೆʼ ಎಂದು ಹೇಳುವುದು ಇದಕ್ಕೇ. ಅಂಥ ಏಳು ಅಮೂಲ್ಯ ಪಾಠಗಳು, ಆಚಾರ್ಯ ಚಾಣಕ್ಯರ ಪ್ರಕಾರ ಹೀಗಿವೆ.
1) ತಾಳ್ಮೆ ವೇಗಕ್ಕಿಂತ ಹೆಚ್ಚು ಶಕ್ತಿಶಾಲಿ. ಜಗತ್ತಿಗೆ ಇಂದು ಎಲ್ಲವೂ ಕ್ವಿಕ್ ಆಗಿ ಬೇಕು. ಇಂಥ ಜಗತ್ತಿನಲ್ಲಿ ತಾಳ್ಮೆ ಎಂಬುದು ಹಳೆಯ ಶೈಲಿಯಂತೆ ಭಾಸವಾಗುತ್ತದೆ. ಆದರೆ, ಆತುರಪಡುವುದು ಶಾಶ್ವತ ಯಶಸ್ಸು ಅಥವಾ ಸಂತೋಷಕ್ಕೆ ಮಾರಕ ಎಂದು ಕಾಲವು ನಮಗೆ ಕಲಿಸುತ್ತದೆ. ಅದು ಕೆರಿಯರ್ ಕಟ್ಟಿಕೊಳ್ಳುವುದಾಗಲಿ, ದುಃಖದಲ್ಲಿರುವ ಹೃದಯವನ್ನು ಸಂತೈಸುವುದಾಗಲಿ, ಕೌಶಲ್ಯವನ್ನು ಕರಗತ ಮಾಡಿಕೊಳ್ಳುವುದಾಗಲಿ, ಯಾವುದೇ ಆಗಿದ್ದರೂ ತಾಳ್ಮೆಯು ಸ್ವಾಭಾವಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
2) ವೈಫಲ್ಯವು ಒಂದು ಮೆಟ್ಟಿಲು, ಅಂತ್ಯವಲ್ಲ. ಆರಂಭಿಕ ಸೋಲುಗಳು ನನ್ನನ್ನು ನಾಶ ಮಾಡಿದವು ಎಂದು ನೀವು ಭಾವಿಸಬಹುದು. ಆದರೆ ಕಾಲಾನಂತರದಲ್ಲಿ, ವೈಫಲ್ಯ ಕೇವಲ ಪ್ರತಿಕ್ರಿಯೆ ಎಂದು ನೀವು ಕಲಿಯುತ್ತೀರಿ. ಇದು ಬೆಳವಣಿಗೆಯ ಅಗತ್ಯ ಭಾಗ. ಇದು ನಿಮ್ಮನ್ನು ಪುನರ್ವಿಮರ್ಶಿಸಲು, ಹೊಂದಿಕೊಳ್ಳಲು ಮತ್ತು ಬಲಶಾಲಿಯಾಗಲು ಕಲಿಸುತ್ತದೆ. ಅತ್ಯಂತ ಯಶಸ್ವಿ ಜನರು ಬಹಳ ಸಲ ಸೋತವರು ಮತ್ತು ಗೆಲುವನ್ನು ಬಿಟ್ಟುಕೊಡಲು ನಿರಾಕರಿಸಿದವರು.
3) ಜನರು ಬದಲಾಗುತ್ತಾರೆ, ಮತ್ತು ಅದು ಓಕೆ. ಸಂಬಂಧಗಳು ವಿಕಸನಗೊಳ್ಳುತ್ತವೆ ಮತ್ತು ಸಂಬಂಧಿಗಳು ಅನಿರೀಕ್ಷಿತ ದಿಕ್ಕುಗಳಲ್ಲಿ ಹೋಗಬಹುದು. ಯಾರನ್ನಾದರೂ ತುಂಬಾ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು ಅಥವಾ ಅವರು ಹಾಗೆಯೇ ಇರಬೇಕೆಂದು ನಿರೀಕ್ಷಿಸುವುದು ನೋವಿಗೆ ಕಾರಣ. ಬಿಟ್ಟುಕೊಡುವುದು ಎಂದರೆ ನೀವು ಕಡಿಮೆ ಕಾಳಜಿ ವಹಿಸುತ್ತೀರಿ ಎಂದಲ್ಲ. ಇದರರ್ಥ ನೀವು ಜೀವನದ ನೈಸರ್ಗಿಕ ಹರಿವನ್ನು ಗೌರವಿಸುತ್ತೀರಿ ಎಂದರ್ಥ.
4) ಸ್ವ-ಆರೈಕೆ ಅತ್ಯಗತ್ಯ, ಅದು ಸ್ವಾರ್ಥವಲ್ಲ. ನೀವು ಚಿಕ್ಕವರಿದ್ದಾಗ, ನಿಮ್ಮ ಸ್ವಂತ ಅಗತ್ಯಗಳಿಗಿಂತಲೂ ಇತರರಿಗೆ ಆದ್ಯತೆ ನೀಡುವುದು ಸುಲಭ. ಆದರೆ, ನಿಮ್ಮನ್ನೇ ನೀವು ನಿರ್ಲಕ್ಷಿಸಿದರೆ ಅದು ನಿಮ್ಮ ಶಕ್ತಿ ಮತ್ತು ಸಂತೋಷವನ್ನು ಬರಿದು ಮಾಡುತ್ತದೆ. ಇದನ್ನು ಕಾಲ ನಿಮಗೆ ಕಲಿಸುತ್ತದೆ. ಸ್ವ-ಆರೈಕೆ, ನಿಮ್ಮ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಆರೈಕೆ ನಿಮಗೆ ಅವಶ್ಯಕ.
5) ಹೋಲಿಕೆ ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ. ನಿಮ್ಮ ಯಶಸ್ಸನ್ನು ಇತರರೊಂದಿಗೆ ಅಳೆಯುವುದು ಸಲ್ಲದು. ವಿಶೇಷವಾಗಿ ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಇದು ಎಲ್ಲೆಡೆ ಇರುವ ಪಿಡುಗು. ಆದರೆ ಕಾಲಾನಂತರದಲ್ಲಿ ಹೋಲಿಕೆಯು ಅಭದ್ರತೆ ಮತ್ತು ಅತೃಪ್ತಿಯನ್ನು ಮಾತ್ರ ಉಂಟುಮಾಡುತ್ತದೆ ಎಂದು ನೀವು ಅರಿತುಕೊಳ್ಳುತ್ತೀರಿ. ನಿಮ್ಮ ಪ್ರಯಾಣ ನಿಮ್ಮದೇ ಆದ ವೇಗ ಮತ್ತು ಮೈಲಿಗಲ್ಲುಗಳೊಂದಿಗೆ ವಿಶಿಷ್ಟವಾಗಿರುತ್ತದೆ.
6) ಕೃತಜ್ಞತೆಯು ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಜೀವನವು ಪರಿಪೂರ್ಣವಲ್ಲ. ಕೃತಜ್ಞತೆಯ ಶಕ್ತಿ ಏನೆಂದರೆ ಅದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಸಣ್ಣ ಸಂತೋಷದ ಕ್ಷಣಗಳು, ನಿಮ್ಮ ಸುತ್ತಲಿನವರನ್ನು ಪ್ರಶಂಸಿಸುವುದು ಅವ್ಯವಸ್ಥೆಯ ನಡುವೆ ಶಾಂತಿಯನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಆಳವಾದ ಸಂತೋಷಕ್ಕೆ ಬಾಗಿಲು ತೆರೆಯುತ್ತದೆ.
7) ನಿಮ್ಮ ಸಮಯ ಅಮೂಲ್ಯ. ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ವಯಸ್ಸಾದಂತೆ, ಸಮಯ ಸೀಮಿತವಾಗಿದೆ ಎಂಬ ಗಂಭೀರ ಅರಿವು ಬರುತ್ತದೆ. ಜೀವನದ ಗೊಂದಲಗಳು ಕಡಿಮೆ ಮುಖ್ಯವೆಂದು ತೋರುತ್ತದೆ. ಮತ್ತು ಆದ್ಯತೆಗಳು ಸ್ಪಷ್ಟವಾಗುತ್ತವೆ. ನಿಮ್ಮ ಆತ್ಮವನ್ನು ಶ್ರೀಮಂತಗೊಳಿಸುವ ಉತ್ಸಾಹಗಳು, ಸಂಬಂಧಗಳು ಮತ್ತು ಅನುಭವಗಳಲ್ಲಿ ನಿಮ್ಮ ಶಕ್ತಿಯನ್ನು ಹೂಡಿಕೆ ಮಾಡಲು ನೀವು ಕಲಿಯುತ್ತೀರಿ.
Lord Shiva's Parents: ಜಗದೊಡೆಯನಾದ ಶಿವನ ತಂದೆ -ತಾಯಿ ಯಾರು?
ಈ ಪಾಠಗಳು ಓದುವುದರಿಂದ ಅಥವಾ ಇತರರ ಸಲಹೆಗಳಿಂದ ಬರುವುದಿಲ್ಲ. ಅವು ಜೀವನದಲ್ಲಿ ನಿಮ್ಮ ಅನಿರೀಕ್ಷಿತ ಪ್ರಯಾಣಗಳ ಉತ್ತುಂಗ ಅಥವಾ ಪತನದ ಮೂಲಕ ಬರುತ್ತವೆ. ನೀವು ಅನುಭವಿಸಲು, ಬೆಳೆಯಲು ಹೆಚ್ಚು ಸಮಯ ವಿನಿಯೋಗಿಸಿದರೆ ಈ ಸತ್ಯಗಳು ಸ್ಪಷ್ಟವಾಗುತ್ತವೆ. ನೀವು ಈ ಎಲ್ಲಾ ಪಾಠಗಳನ್ನು ಕರಗತ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ಜೀವನದ ಸೌಂದರ್ಯವೆಂದರೆ, ಕಲಿಕೆ ಎಂದಿಗೂ ನಿಲ್ಲುವುದಿಲ್ಲ. ಸಮಯವನ್ನು ನಿಮ್ಮ ಶ್ರೇಷ್ಠ ಶಿಕ್ಷಕನಾಗಿ ಅಳವಡಿಸಿಕೊಳ್ಳುವುದನ್ನು ಮುಂದುವರಿಸಿ. ನೀವು ಪ್ರತಿದಿನ ಬುದ್ಧಿವಂತ, ಬಲಶಾಲಿ ಮತ್ತು ಹೆಚ್ಚು ಸಹಾನುಭೂತಿಯುಳ್ಳವರಾಗುತ್ತೀರಿ.
