ಗೆಳತಿಯ ಮದುವೆಗೆ ಸುಂದರವಾಗಿ ಕಾಣಲು, ಯುವತಿಯೊಬ್ಬಳು 'ಡೆವಿಲ್ ವೇಟ್ ಲಾಸ್ ಪ್ಲಾನ್' ಅನುಸರಿಸಿ 15 ಕೆಜಿ ತೂಕ ಇಳಿಸಿಕೊಂಡಳು. ಆದರೆ, ಕಾರ್ಬೋಹೈಡ್ರೇಟ್‌ಗಳನ್ನು ತ್ಯಜಿಸಿ ಕಠಿಣ ವ್ಯಾಯಾಮ ಮಾಡಿದ್ದರಿಂದ ಆಕೆಯ ಆರೋಗ್ಯ ಹದಗೆಟ್ಟು, ಪ್ರಿ-ಡಯಾಬಿಟಿಸ್ ಹಂತ ತಲುಪಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಆತ್ಮೀಯ ಗೆಳತಿಯ ಮದುವೆಯಲ್ಲಿ 'ಬ್ರೈಡ್ಸ್‌ಮೇಡ್' ಆಗಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಯುವತಿಯೊಬ್ಬಳನ್ನು ಆಸ್ಪತ್ರೆ ಮೆಟ್ಟಿಲೇರುವಂತೆ ಮಾಡಿದೆ. ಅವೈಜ್ಞಾನಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದ ಪರಿಣಾಮ, 26 ವರ್ಷದ ಯುವತಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾಳೆ.
ಏನಿದು 'ಡೆವಿಲ್ ವೇಟ್ ಲಾಸ್ ಪ್ಲಾನ್'?
ಮದುವೆ ನಿಶ್ಚಿತಾರ್ಥದ ಸಮಯದಲ್ಲಿ ಸುಮಾರು 65 ಕೆಜಿ ತೂಕವಿದ್ದ 26 ವರ್ಷದ ಯುವತಿ ಕ್ಸಿಯಾಯು, ಅಲ್ಪ ಅವಧಿಯಲ್ಲಿ ಸಣ್ಣಗಾಗಲು ತಾನೇ ಒಂದು ಕಠಿಣ ಯೋಜನೆಯನ್ನು ರೂಪಿಸಿಕೊಂಡಿದ್ದಳು. ಇದಕ್ಕೆ ಆಕೆ ಇಟ್ಟಿದ್ದ ಹೆಸರು 'ಡೆವಿಲ್ ವೇಟ್ ಲಾಸ್ ಪ್ಲಾನ್'. ಈ ಯೋಜನೆಯಡಿ ಆಕೆ ಪ್ರತಿದಿನ ಸುಮಾರು 10 ಕಿಲೋಮೀಟರ್ ಓಟ ಮತ್ತು ನಡಿಗೆಯನ್ನು ಕಡ್ಡಾಯಗೊಳಿಸಿಕೊಂಡಿದ್ದಳು. ಅಷ್ಟೇ ಅಲ್ಲದೆ, ತನ್ನ ಆಹಾರ ಕ್ರಮದಿಂದ ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಳು. ಕೇವಲ ಅತಿ ಕಡಿಮೆ ಪ್ರಮಾಣದ ತರಕಾರಿ ಮತ್ತು ಚಿಕನ್ ಬ್ರೆಸ್ಟ್ ಮಾತ್ರ ಸೇವಿಸುತ್ತಿದ್ದಳು.
15 ಕೆಜಿ ತೂಕ ಇಳಿಕೆ, ಬೆನ್ನಲ್ಲೇ ಆರೋಗ್ಯ ಕುಸಿತ
ಈ ಕಠಿಣ ಹಾದಿಯ ಮೂಲಕ ಆಕೆ ಕೇವಲ ಎರಡು ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡು 50 ಕೆಜಿಗೆ ತಲುಪಿದಳು. ಆದರೆ, ತೂಕ ಇಳಿಕೆಯ ಸಂಭ್ರಮದ ಬೆನ್ನಲ್ಲೇ ತೀವ್ರ ಆಯಾಸ, ತಲೆಸುತ್ತು, ಅತಿಯಾದ ಹಸಿವು ಮತ್ತು ಕೆಲಸದಲ್ಲಿ ಗಮನಹರಿಸಲು ಸಾಧ್ಯವಾಗದಂತಹ ಸಮಸ್ಯೆಗಳು ಆಕೆಯನ್ನು ಕಾಡತೊಡಗಿದವು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಆಕೆಯನ್ನು ಹ್ಯಾಂಗ್‌ಝೌ ಸಾಂಪ್ರದಾಯಿಕ ಚೀನೀ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರ ಎಚ್ಚರಿಕೆ
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಡಾ. ಚೆಂಗ್ ಬೋನಿಂಗ್ ಅವರಿಗೆ ಆಘಾತಕಾರಿ ಸತ್ಯವೊಂದು ತಿಳಿದುಬಂದಿದೆ. ಕ್ಸಿಯಾಯು ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿತ್ತು ಹಾಗೂ ಆಕೆ 'ಪ್ರಿ-ಡಯಾಬಿಟಿಸ್' ಹಂತಕ್ಕೆ ತಲುಪಿದ್ದಳು. ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ತ್ಯಜಿಸಿ ಕಠಿಣ ವ್ಯಾಯಾಮ ಮಾಡಿದ್ದು ಆಕೆಯ ಇನ್ಸುಲಿನ್ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಯ (Metabolism) ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಈ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. 'ಸಾಮಾನ್ಯವಾಗಿ ಮದುವೆಯಾಗುವ ಹುಡುಗಿಯರು ಇಷ್ಟೊಂದು ಕಷ್ಟಪಡುತ್ತಾರೆ, ಆದರೆ ಇಲ್ಲಿ ಗೆಳತಿಯೇ ಮದುಮಗಳಿಗಿಂತ ಹೆಚ್ಚು ರಿಸ್ಕ್ ತಗೊಂಡಿದ್ದಾಳೆ' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ವೈದ್ಯರ ಸಲಹೆಯಂತೆ ಪೌಷ್ಟಿಕ ಆಹಾರ ಸೇವಿಸುತ್ತಿರುವ ಕ್ಸಿಯಾಯು ಚೇತರಿಸಿಕೊಂಡಿದ್ದು, 52.5 ಕೆಜಿ ತೂಕದೊಂದಿಗೆ ಆರೋಗ್ಯವಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.


