ನ್ಯೂಯಾರ್ಕ್(ಮೇ.01): ಕೊರೋನಾ ವೈರಸ್ ಅಮೆರಿಕಾವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ವೈರಸ್ ಹರಡದಂತೆ ತೆಗೆದುಕೊಂಡ ಕ್ರಮಗಳೆಲ್ಲಾ ವ್ಯರ್ಥವಾಗುತ್ತಿದೆ. ಇದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಬೆನ್ನಿಗೆ ನಿಂತಿದ್ದು ಅಮೆರಿಕವನ್ನು ಕೆರಳಿ ಕಂಡವನ್ನಾಗಿಸಿದೆ. ಚೀನಾ ಹಾಗೂ ವಿಶ್ವ ಸಂಸ್ಥೆ ವಿರುದ್ಧ ಸಮರ ಸಾರಿರುವ ಡೋನಾಲ್ಡ್ ಟ್ರಂಪ್ ಇದೀಗ ಕೊರೋನಾ ಹುಟ್ಟಿಗೆ ಚೀನಾ ಕಾರಣ, ಇದಕ್ಕೆ ಸಾಕ್ಷಿ ಇದೆ ಎಂದಿದ್ದಾರೆ.

ಯುವ ಜನತೆಯನ್ನು ಹೆಚ್ಚು ಬಲಿ ಪಡೆಯುತ್ತಿದೆ ಕೊರೋನಾ; ಆತಂಕ ತಂದ ಆರೋಗ್ಯ ಇಲಾಖೆ ವರದಿ!

ಚೀನಾದ ವುಹಾನ್ ಲ್ಯಾಬ್‌ನಿಂದ ವೈರಸ್ ಹಬ್ಬಿದೆ ಅನ್ನೋ ಕುರಿತು ಹಲವು ವರದಿಗಳು ಬಹಿರಂಗವಾಗಿದೆ. ಆದರೆ ಇವೆಲ್ಲವನ್ನೂ ಚೀನಾ ನಿರಾಕರಿಸಿದೆ. ಚೀನಾ ಉದ್ದೇಶ ಪೂರ್ವಕವಾಗಿ ವೈರಸ್ ಹರಡಿ ಅನ್ನೋ ಮಾತುಗಳು ಇವೆ. ಇತ್ತ ಅಮೆರಿಕ ಆರಂಭದಿಂದಲೂ ಚೀನಾ ವೈರಸ್, ವುಹಾನ್ ವೈರಸ್ ಎಂದೇ ಹೇಳಿದೆ. ಇದೀಗ ತನ್ನ ಮಾತಿಗೆ ಬದ್ದವಾಗಿದೆ ಎಂದು ಅಮೆರಿಕ ಪುನರುಚ್ಚರಿಸಿದೆ. ಇಷ್ಟೇ ಅಲ್ಲ ಚೀನಾದ ವುಹಾನ್ ಲ್ಯಾಬ್‌ನಿಂದಲೇ ಕೊರೋನಾ ವೈರಸ್ ಹಬ್ಬಿದೆ ಅನ್ನೋದಕ್ಕೆ ಬಲವಾದ ಸಾಕ್ಷ್ಯವಿದೆ ಎಂದು ಪತ್ರಕರ್ತನ ಪ್ರಶ್ನೆಗೆ ಡೋನಾಲ್ಡ್ ಟ್ರಂಪ್ ಉತ್ತರಿಸಿದ್ದಾರೆ.

ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಏನಿರುತ್ತೆ.? ಏನಿರೋಲ್ಲ...?

ಕೊರೋನಾ ವೈರಸ್ ಹರಡಲು ವುಹಾನ್ ಲ್ಯಾಬ್ ಕಾರಣ ಎನ್ನಲು ಯಾವ ಸಾಕ್ಷ್ಯ ನಿಮ್ಮಲ್ಲಿದೆ ಎಂದು ಪತ್ರಕರ್ತ ಟ್ರಂಪ್ ಪ್ರಶ್ನಿಸಿದ್ದರು. ಇದಕ್ಕುತ್ತರಿಸಿದ ಟ್ರಂಪ್, ಅಮೆರಿಕಾ ಈಗಾಗಲೇ ಕೊರೋನಾ ವೈರಸ್ ಹುಟ್ಟಿನ ಕುರಿತು ತನಿಖೆ ನಡೆಸುತ್ತಿದೆ. ನಮಗೆ ಲಭ್ಯವಿರುವ ಮಹತ್ವದ ಮಾಹಿತಿಗಳ ಪ್ರಕಾರ ವುಹಾನ್ ಲ್ಯಾಬ್‌ನಿಂದಲೇ ಕೊರೋನಾ ವೈರಸ್ ಜನ್ಮತಾಳಿದೆ. ಇದು ಅಚಾನಕ್ಕಾಗಿ ಹುಟ್ಟಿದ ವೈರಸ್ ಅಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಚೀನಾ ಮೇಲೆ ಆರೋಪದ ಸುರಿಮಳೆಗೈದ ಟ್ರಂಪ್ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ. ವಿಶ್ವಕ್ಕೆ ಮಾರಕ ಕೊರೋನಾ ಮಹಾಮಾರಿ ಅಂಟಿಸಿದ ಚೀನಾಗೆ ತಕ್ಕ ಶಾಸ್ತಿಯಾಗಲಿದೆ. ಆದರೆ ಏನೂ ಅರಿಯದಂತೆ ಚೀನಾಗೆ ಬೆಂಬಲ ನೀಡುತ್ತಿರುವ ವಿಶ್ವ ಸಂಸ್ಥೆ ಕೂಡ ಕಳ್ಳಾಟ ನಡೆಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.