ಕ್ರಿಮಿನಲ್ ಕೇಸ್ ಇದ್ದವರೇ ಸಂಸತ್ತಿಗೆ ಹೆಚ್ಚು ಆಯ್ಕೆ: ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಕೆ
ಕ್ರಿಮಿನಲ್ ಕೇಸಿನ ಹಿನ್ನೆಲೆ ಇರುವ ಅಭ್ಯರ್ಥಿಗಳೇ ಲೋಕಸಭೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು 2019ರ ಲೋಕಸಭಾ ಚುನಾವಣೆ ಆಧರಿಸಿದ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ.
ನವದೆಹಲಿ (ಏ.26): ಕ್ರಿಮಿನಲ್ ಕೇಸಿನ ಹಿನ್ನೆಲೆ ಇರುವ ಅಭ್ಯರ್ಥಿಗಳೇ ಲೋಕಸಭೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು 2019ರ ಲೋಕಸಭಾ ಚುನಾವಣೆ ಆಧರಿಸಿದ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಜನಪ್ರತಿನಿಧಿಗಳ ವಿರುದ್ಧಧ ಕೇಸಿನ ತ್ವರಿತ ಇತ್ಯರ್ಥ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ಗೆ, ನ್ಯಾಯಾಲಯದ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಈ ಆಘಾತಕಾರಿ ಅಂಕಿ ಅಂಶ ಸಲ್ಲಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 7928 ಜನರು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 1500 (ಶೇ.19) ರಷ್ಟು ಜನರು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದರು. ಈ ಪೈಕಿ 1070 ಜನರ ಮೇಲೆ ಗಂಭೀರ ಅಪರಾಧದ ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಆಘಾತಕಾರಿ ಅಂಶವೆಂದರೆ ಲೋಕಸಭೆಗೆ ಆಯ್ಕೆಯಾದ 514 ಜನರ ಪೈಕಿ 225 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಸದಸ್ಯರ ಈ ಸಂಖ್ಯೆ ಲೋಕಸಭೆಗೆ ಆಯ್ಕೆಯಾದವರಲ್ಲಿ ಶೇ.44ರಷ್ಟು ಪಾಲಾಗಿತ್ತು.
ಅಂದರೆ ಲೋಕಸಭೆಗೆ ಸ್ಪರ್ಧಿಸಿದವರ ಪೈಕಿ ಶೇ.19ರಷ್ಟು ಜನರ ಮೇಲೆ ಮಾತ್ರವೇ ಕ್ರಿಮಿನಲ್ ಕೇಸು ದಾಖಲಾಗಿದ್ದರೂ, ಲೋಕಸಭೆಗೆ ಅವರ ಆಯ್ಕೆ ಪ್ರಮಾಣ ಶೇ.44ರಷ್ಟಿತ್ತು. ಇನ್ನೊಂದೆಡೆ ಚುನಾವಣೆಗೆ ಸ್ಪರ್ಧಿಸಿದ್ದವರ ಪೈಕಿ ಶೇ.81ರಷ್ಟು ಜನರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸು ಇಲ್ಲದೇ ಇದ್ದರೂ ಲೋಕಸಭೆಗೆ ಅವರ ಆಯ್ಕೆ ಪ್ರಮಾಣ ಶೇ.56ರಷ್ಟು ಮಾತ್ರವೇ ಇತ್ತು. ಇದು ಕ್ರಿಮಿನಲ್ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳೇ ಲೋಕಸಭೆಗೆ ಅಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂದಿರಾ ಆಸ್ತಿ ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ರದ್ದುಪಡಿಸಿದ್ದ ರಾಜೀವ್: ಪ್ರಧಾನಿ ಮೋದಿ ಕಿಡಿ
ಅಂಕಿ ಅಂಶಗಳ ಆಧಾರದಲ್ಲಿ ಇದನ್ನು ಹೇಳುವುದಾದರೆ ಕ್ರಿಮಿನಲ್ ಕೇಸಿನಲ್ಲಿ ಆರೋಪಿತ 1500 ಅಭ್ಯರ್ಥಿಗಳ ಪೈಕಿ 225 (ಶೇ.15) ಜನರು ಆಯ್ಕೆಯಾಗಿದ್ದರೆ, ಯಾವುದೇ ಕ್ರಿಮಿನಲ್ ಕೇಸು ಹೊಂದಿರದ 6489 ಅಭ್ಯರ್ಥಿಗಳ ಪೈಕಿ 289 (ಶೇ.4.5) ಜನರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.