ಪ್ರವಾಸಿಗರ ನೋಡಿ ಘರ್ಜಿಸಿದ ಸಿಂಹದ ಮರಿ: ವೀಡಿಯೋ ಸಖತ್ ವೈರಲ್
ದಕ್ಷಿಣ ಆಫ್ರಿಕಾದ ತಾಂಜಾನಿಯಾದಲ್ಲಿ ಪ್ರವಾಸಿಗರಿಗೆ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಪುಟಾಣಿ ಸಿಂಹವೊಂದು ಪ್ರವಾಸಿಗರತ್ತ ಘರ್ಜಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಾಣಿ ಲೋಕ ಒಂದು ಅದ್ಭುತ ಪ್ರಪಂಚ. ಇವುಗಳನ್ನು ನೋಡುವುದಕ್ಕೆ ರಾಷ್ಟ್ರೀಯ ಉದ್ಯಾನವನಗಳಿಗೆ ಸಫಾರಿ ಹೋಗುವ ಜನರಿಗೆ ಪ್ರಾಣಿ ಲೋಕದ ಕೆಲ ಮುದ್ದಾದ ಕ್ಷಣಗಳು ನೋಡಲು ಸಿಗುತ್ತವೆ. ಅದೇ ರೀತಿ ದಕ್ಷಿಣ ಆಫ್ರಿಕಾದ ತಾಂಜಾನಿಯಾದಲ್ಲಿ ಉದ್ಯಾನವನಕ್ಕೆ ಪ್ರವಾಸ ಹೋದ ಜನರಿಗೆ ಅಪರೂಪದ ದೃಶ್ಯವೊಂದು ನೋಡಲು ಸಿಕ್ಕಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲ್ಲುಗಾವಲೊಂದರಲ್ಲಿ ಸಾಗುತ್ತಿದ್ದ ಪ್ರವಾಸಿಗರಿಗೆ ತಾಯಿ ಸಿಂಹಿಣಿ ಹಾಗೂ ಮರಿ ಕಾಣಲು ಸಿಕ್ಕಿದೆ. ಇವುಗಳನ್ನು ನೋಡಿ ಸಫಾರಿ ಗಾಡಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಪುಟಾಣಿ ಸಿಂಹ ಪ್ರವಾಸಿಗರತ್ತ ನೋಡುತ್ತಾ ಘರ್ಜಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 2 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಸಿಂಹಿಣಿ ಮರಿಯಿಟ್ಟು ಕೇವಲ ಕೆಲ ದಿನಗಳಾದಂತೆ ಕಾಣುತ್ತಿದ್ದು, ನಾಯಿಮರಿಯಷ್ಟು ಗಾತ್ರದ ಸಿಂಹದ ಪುಟ್ಟ ಮರಿ ಪ್ರವಾಸಿಗರತ್ತ ನೋಡಿ ಘರ್ಜಿಸುತ್ತಿದೆ. ಹುಲ್ಲುಗಾವಲನ್ನು ದಾಟಿ ಅದು ರಸ್ತೆ ಮಧ್ಯೆ ಬಂದಿದ್ದು, ಈ ವೇಳೆ ಹಿಂಬಾಲಿಸಿಕೊಂಡು ಬಂದ ತಾಯಿ ಮರಿಯನ್ನು ತನ್ನೊಂದಿಗೆ ಪಕ್ಕಕ್ಕೆ ಕರೆದೊಯ್ಯಲು ನೋಡುತ್ತದೆ. ತಾಯಿ ಹಾಗೂ ಮರಿ ಸಿಂಹದ ಈ ಅಪರೂಪದ ದೃಶ್ಯ ಪ್ರವಾಸಿರಿಗೆ ಸಖತ್ ಖುಷಿ ನೀಡಿದೆ.
ರಿಯಲ್ ಸಿಂಹಿಣಿ ಜೊತೆ ಪೋಸ್ ಕೊಟ್ಟು, ವಾಕಿಂಗ್ ಮಾಡಿದ ಮಿ & ಮಿಸಸ್ ಸಿಂಹ
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಅದು ಸಿಂಹದ ಮರಿ ಕಾಡಿನ ರಾಜ ಆಗಲು ಪ್ರಯತ್ನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಪ್ರವಾಸಿಗರು ಈ ಪ್ರಾಣಿಗಳ ಬಹಳ ಹತ್ತಿರಕ್ಕೆ ಹೋಗಿದ್ದು, ಸ್ವಲ್ಪ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರವಾಸಿಗರನ್ನು ನೋಡಿ ತಾಯಿಯೂ ಒತ್ತಡಕ್ಕೆ ಒಳಗಾಗಿದ್ದು, ಅತ್ತ ಮರಿಯೂ ಆತಂಕಕ್ಕೆ ಒಳಗಾಗಿದೆ. ಇಷ್ಟು ಸಮೀಪ ಪ್ರವಾಸೋದ್ಯಮವೇಕೆ? ಅವುಗಳನ್ನು ಅವುಗಳಷ್ಟಕ್ಕೆ ಇರಲು ಬಿಡಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಈ ವೀಡಿಯೋ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಸಿಂಹಿಣಿಗೆ ಗರ್ಭಕೋಶ ಸೋಂಕು: ಶಸ್ತ್ರ ಚಿಕಿತ್ಸೆ ಮಾಡಿ ಪ್ರೀತಿಯಿಂದ ಆರೈಕೆ ಮಾಡಿದ್ರು ಡಾಕ್ಟರ್ಸ್..!