ಅಮೆರಿಕ ಸೀಕ್ರೆಟ್ ಸರ್ವೀಸ್ ಭದ್ರತಾ ಎಜೆನ್ಸಿ ವೈಟ್ ಹೌಸ್ ಹಾಗೂ ಸುತ್ತ ಮುತ್ತ ಲಾಕ್ಡೌನ್ ಘೋಷಿಸಿದೆ. ಪರಿಣಾಮ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧ್ಯಕ್ಷೀಯ ನಿವಾಸದಲ್ಲಿ ಲಾಕ್ ಆಗಿದ್ದಾರೆ. ದಿಢೀರ್ ಈ ಲಾಕ್ಡೌನ್ ಮಾಡಿದ್ದೇಕೆ?
ವಾಶಿಂಗ್ಟನ್ ಡಿಸಿ (ನ.09) ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಲಾಕ್ಡೌನ್ ಆಗಿದೆ. ವೈಟ್ಹೌಸ್ನ ಉತ್ತರ ಭಾಗದಲ್ಲಿ ನಡೆದ ಭದ್ರತಾ ಲೋಪದಿಂದ ಸೀಕ್ರೆಟ್ ಸರ್ವೀಸ್ ಭದ್ರತಾ ಎಜೆನ್ಸಿ ಲಾಕ್ಡೌನ್ ಘೋಷಿಸಿದೆ. ಟ್ರಂಪ್ ಶ್ವೇತಭವನದ ಒಳಗೆ ಇರುವಾಗಲೇ ಲಾಕ್ಡೌನ್ ಘೋಷಿಸಲಾಗಿದೆ. ಹೀಗಾಗಿ ಸದ್ಯ ಟ್ರಂಪ್ ಶ್ವೇತಭವನದಿಂದ ಹೊರಬರುವಂತಿಲ್ಲ. ವೈಟ್ ಹೌಸ್ನ ಲಫಯೆಟ್ ಸ್ಕ್ವೇರ್ ಪಾರ್ಕ್ ಬಳಿ ಗೇಟ್ ಪಕ್ಕದಲ್ಲೇ ಕಾರೊಂದು ಡಿಕ್ಕಿಯಾಗಿದೆ. ವೈಟ್ ಹೌಸ್ ಪಕದಲ್ಲಿ ಕಾರು ಡಿಕ್ಕಿ ಮಾತವಲ್ಲ ಪಾರ್ಕ್ ಮಾಡುವ ಹಾಗಿಲ್ಲ. ಡಿಕ್ಕಿ ಬಳಿಕ ಚಾಲಕ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಲು ಪ್ರಯತ್ನಿಸಿದ್ದಾನೆ. ಭದ್ರತಾ ಲೋಪ ಸಂಭವಿಸಿದ ಕಾರಣಕ್ಕೆ ಸೀಕ್ರೆಟ್ ಸರ್ವೀಸ್ ಭದ್ರತಾ ಎಜೆನ್ಸಿ ಲೌಕ್ಡೌನ್ ಘೋಷಿಸಿದೆ.
ಡೋನಾಲ್ಡ್ ಟ್ರಂಪ್ ಶ್ವೇತಭನವದ ಒಳಗೆ ಇರುವಾಗ ಈ ಘಟನೆ ನಡೆದಿದೆ. ಪೊಲೀಸ್ ವರದಿ ಪ್ರಕಾರ, ವೇಗವಾಗಿ ಬಂದ ಕಾರು ವೈಟ್ ಹೌಸ್ ಪಕ್ಕದಲ್ಲಿರುವ ಪಾದಾಚಾರಿ ಮಾರ್ಗದ ಮೇಲೆ ಸಾಗಿದೆ. ಬಳಿಕ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಿಂದ ಹೊಗೆ ಕಾಣಿಸಿಕೊಂಡಿದೆ. ಕಾರು ಡಿಕ್ಕಿಯಾಗುತ್ತಿದ್ದಂತೆ ವೈಟ್ ಹೌಸ್ ವಿಐಪಿ ಭದ್ರತಾ ಎಜೆನ್ಸಿ ಸೀಕ್ರೆಟ್ ಸರ್ವೀಸ್ ಸ್ಥಳಕ್ಕೆ ಧಾವಿಸಿದೆ. ಇತ್ತ ಮೆಟ್ರೊಪಾಲಿನ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಕಾರಿನಿಂದ ಇಳಿಯಲು ನಿರಾಕರಿಸಿದ ಚಾಲಕ
ಕಾರು ಡಿಕ್ಕಿಯಾದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಶ್ವೇತಭವನದ ಸುತ್ತ ಮುತ್ತ ಗರಿಷ್ಠ ಭದ್ರತಾ ವಲಯವಾಗಿದೆ. ಪ್ರತಿಯೊಂದು ಭದ್ರತಾ ಎಜೆನ್ಸಿ ಕಣ್ಗಾವಲಿನಲ್ಲಿ ಇರಲಿದೆ. ಭದ್ರತಾ ಸಿಬ್ಬಂದಿಗಳು ಬಂದಾಗ ಕಾರಿನಿಂದ ಇಳಿಯಲು ಚಾಲಕ ನಿರಾಕರಿಸಿದ್ದಾನೆ. ಬಾಗಿಲು ಒಡೆಯಲು ಭದ್ರತಾ ಸಿಬ್ಬಂದಿಗಳು ಮುಂದಾಗಿದ್ದರು. ಹೀಗಾಗಿ ಕಾರಿನಿಂದ ಇಳಿಯಲ ಚಾಲಕ ಮುಂದಾಗಿದ್ದಾನೆ. ಕಾರಿನಿಂದ ಇಳಿಯುತ್ತಿದ್ದಂತೆ ಚಾಲಕನ ವಶಕ್ಕೆ ಪಡೆಯಲು ಭದ್ರತಾ ಸಿಬ್ಬಂದಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಚಾಲಕ, ಭದ್ರತಾ ಸಿಬ್ಬಂದಿಯನ್ನೇ ತಳ್ಳಲು ಮುಂದಾಗಿದ್ದಾನೆ.
ತಕ್ಷಣವೇ ಭದ್ರತಾ ಸಿಬ್ಬಂದಿಗಳು ಚಾಲಕನ ಮೇಲೆ ಮುಗಿಬಿದ್ದಿದ್ದಾರೆ. ನೆಲಕ್ಕೆ ಕೆಡವಿ ಚಾಲಕನ ವಶಕ್ಕೆ ಪಡೆದಿದ್ದಾರೆ. ವೈಟ್ ಹೌಸ್ ಮುಂಭಾಗದಲ್ಲಿ ಕಾರು ಡಿಕ್ಕಿ, ಚಾಲಕನ ಹಾಗೂ ಭದ್ರತಾ ಸಿಬ್ಬಂದಿಗಳ ಜೊತೆ ಕೈಕೈಮಿಲಾಯಿಸಿದ ಘಟನೆಗಳಿಂದ ಹೈ ಸೆಕ್ಯೂರಿಟಿ ಝೋನ್ ವಲಯದಲ್ಲಿ ಭಾರಿ ಭದ್ರತಾ ಲೋಪವಾಗಿದೆ. ಘಟನೆ ನಡೆಯುತ್ತಿದ್ದಂತೆ ಸೀಕ್ರೆಟ್ ಸರ್ವೀಸ್ ಎಜೆನ್ಸಿ ವೈಟ್ ಹೌಸ್ ಲಾಕ್ಡೌನ್ ಮಾಡಿದೆ. ಲೌಕ್ಡೌನ್ ಘೋಷಣೆಯಾಗುತ್ತಿದ್ದಂತೆ ವೈಟ್ಹೌಸ್ ಸುತ್ತ ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದಾರೆ. ಶ್ವೇತಭವನದೊಳಗಿದ್ದ ಸಿಬ್ಬಂದಿಗಳು, ಪತ್ರಕರ್ತರು ಸೇರಿದಂತೆ ಯಾರೊಬ್ಬರು ಹೊರಬರದಂತೆ ಹಾಗೂ ಒಳ ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ.
ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆಯಾ ಅಥವಾ ಉದ್ದೇಶಪೂರ್ವಕವಾಗಿ ಮಾಡಲಾಗಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಇತ್ತ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಇತ್ತ ಬಾಂಬ್ ನಿಷ್ಕ್ರೀಯ ತಂಡ, ಸ್ಪೋಟಕ ಪತ್ತೆ ತಂಡ ಸ್ಥಳಕ್ಕೆ ಧಾವಿಸಿದೆ. ಕಾರು ಪರಿಶೀಲನೆ ನಡೆಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಿಗೂ ಗಾಯವಾಗಿಲ್ಲ.














