ಇಸ್ರೇಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ರಾಜಕೀಯ ಇತಿಹಾಸ ಸೃಷ್ಟಿಯಾಗುತ್ತಿದೆ. ಐಸನ್‌ಕೋಟ್ ಸರ್ಕಾರ ರಚನೆಗೆ ನೇತನ್ಯಾಹು ಲಿಕುಡ್ ಪಾರ್ಟಿಗೆ ಬೆಂಬಲ ನೀಡುವಂತೆ ಕೋರಿದ್ದರು. ಇದೀಗ ನೇತನ್ಯಾಹು ಅಚ್ಚರಿ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಇಸ್ರೇಲ್ (ನ.09) ಇಸ್ರೇಲ್ ಚುನಾವಣಾ ಫಲಿತಾಂಶ ಬಂದ ದಿನಗಳು ಉರುಳುತ್ತಿದ್ದರೂ ಸರ್ಕಾರ ರಚನೆ ಕಗ್ಗಂಟಾಗಿದೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ, ವಿರೋಧಿ ಪಕ್ಷವಾಗಿರುವ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್‌ಗೂ ಸ್ಪಷ್ಟಬಹುಮತ ಸಿಕ್ಕಿಲ್ಲ. ಇದೀಗ ಇಸ್ರೇಲ್ ಪ್ರಧಾನಿ ಐಸನ್‌ಕೋಟ್‌ಗೆ ಸರ್ಕಾರ ರಚನೆಗೆ ಆಹ್ವನಾ ನೀಡಿದ್ದಾರೆ. ಇದೇ ವೇಳೆ 28 ದಿನದಲ್ಲಿ ಬಹುಮತ ಸಾಬೀತುಪಡಿಸಲು ಡೆಡ್‌ಲೈನ್ ನೀಡಿದ್ದಾರೆ. ಇದರ ಬೆನ್ನಲ್ಲೇ ಐಸನ್‌ಕೋಟ್, ನೇತನ್ಯಾಹು ಅವರ ಲಿಕುಡ್ ಪಾರ್ಟಿಯ ಸದಸ್ಯರು ಸರ್ಕಾರ ರಚನೆಗೆ ಬೆಂಬಲ ನೀಡಲು ಮನವಿ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬೆಂಜಮಿನ್ ನೇತನ್ಯಾಹು ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದಾರೆ.

ನೇತನ್ಯಾಹು ಅಚ್ಚರಿ ನಿರ್ಧಾರ

ಬೆಂಜಮಿನ್ ನೇತನ್ಯಾಹು ತಮ್ಮ ಭಾಷಣದಲ್ಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ದೇಶ ಎದುರಿಸುವ ಆರ್ಥಿಕ ಸವಾಲು, ಭದ್ರತಾ ಪರಿಸ್ಥಿತಿ, ಯುದ್ಧ ಸನ್ನಿವೇಶಗಳಲ್ಲಿ ರಾಜಕೀಯ ಸ್ಥಿರತೆ ಮುಖ್ಯ. ದೇಶದ ಭದ್ರತೆ ಅತೀವ ಮುಖ್ಯವಾಗಿದೆ. ಈ ಹಂತದಲ್ಲಿ ಹೊಸ ಸರ್ಕಾರ ಸುಭದ್ರವಾಗಿರುವುದು ಅತೀ ಮುಖ್ಯ. ಹೀಗಾಗಿ ದೇಶದ ಐಕ್ಯತೆ, ಭದ್ರತೆ ಹಾಗೂ ಸುರಕ್ಷತೆ ಕಾರಣದಿಂದ ಐಸನ್‌ಕೋಟ್ ಜೊತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲು ಲಿಕುಡ್ ಪಾರ್ಟಿ ಮುಕ್ತವಾಗಿದೆ ಎಂದು ನೇತನ್ಯಾಹು ಅಚ್ಟರಿ ಹೇಳಿಕೆ ನೀಡಿದ್ದಾರೆ.

ಬೆಂಜಮಿನ್ ನೇತನ್ಯಾಹು ಅವರ ಲಿಕುಡ್ ಪಾರ್ಟಿ ವಿರುದ್ಧ ಐಸನ್‌ಕೋಟ್ ಯಾಶರ್ ಪಾರ್ಟಿ ಸ್ಪರ್ಧಿಸಿತ್ತು. ಇಬ್ಬರು ಪರಸ್ಪರ ವಿರೋಧಿಗಳು. ಇಬ್ಬರ ಪಾರ್ಟಿ ಬೇರೆ ಬೇರೆ. ಇದೀಗ ದೇಶದ ಐಕ್ಯತೆ, ಭದ್ರತೆಗಾಗಿ ಸ್ಥಿರ ಸರ್ಕಾರ ನೀಡಲು ಬೆಂಬಲ ನೀಡುವುದಾಗಿ ನೆತನ್ಯಾಹು ಘೋಷಿಸಿದ್ದಾರೆ. ಆದರೆ ನೆತನ್ಯಾಹು ಹೇಳಿಕೆಯನ್ನು ಹಲವರು ರಾಜಕೀಯದ ಕೊನೆಯ ದಾಳ ಎಂದು ವಿಶ್ಲೇಷಿಸಿದ್ದಾರೆ. ನೆತನ್ಯಾಹು ಅಧಿಕಾರ ಉಳಿಸಿಕೊಳ್ಳಲು ಮಾಡುತ್ತಿರುವ ಕೊನೆಯ ಹೋರಾಟ ಇದು ಎಂದಿದ್ದಾರೆ.

ಐಸೆನ್‌ಕೋಟ್‌ಗೆ 67 ಸಂಸದರ ಬೆಂಬಲ

120 ಸದಸ್ಯ ಬಲದ ಇಸ್ರೇಲ್ ಸಂಸತ್‌ (Knesset) ನಲ್ಲಿ ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ಇತ್ತೀಚಿನ ಚುನಾವಣೆಯಲ್ಲಿ ನೆತನ್ಯಾಹು ಮೈತ್ರಿಕೂಟ 53 ಸ್ಥಾನಗಳಿಗಷ್ಟೇ ಸೀಮಿತವಾಗಿದ್ದರೆ, ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟಕ್ಕೆ 67 ಸಂಸದರು ಆಡಳಿತಕ್ಕೆ ಬೆಂಬಲ ಸೂಚಿಸಿದ್ದಾರೆ.