ವಿಶ್ವದ ಅತಿ ದೊಡ್ಡ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಚೀನಾದ ಶಂಕಿತ ಮಹಿಳಾ ಗೂಢಚಾರಿಣಿಯ ಹನಿಟ್ರ್ಯಾಪ್ ಬಲೆಗೆ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಪತ್ನಿ ಹಾಗೂ ಮಕ್ಕಳಿಗೆ ಬಹಿರಂಗವಾಗಿ ಕ್ಷಮೆಯಾಚಿಸಿರುವ ಅವರ ಸಂಪೂರ್ಣ ರೋಚಕ ವಿವರ ಇಲ್ಲಿದೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ಎನ್ವಿಡಿಯಾ (Nvidia) ಸಂಸ್ಥೆಯ ಸುತ್ತ ಈಗ ಜಾಗತಿಕ ಮಟ್ಟದ ಬೃಹತ್ ಗೂಢಚಾರಿಕೆ ಮತ್ತು ಕಾರ್ಪೊರೇಟ್ ಹನಿಟ್ರ್ಯಾಪ್ ವಿವಾದವೊಂದು ಭುಗಿಲೆದ್ದಿದೆ. 19ನೇ ಶತಮಾನದ 'ಗೋಲ್ಡ್ ರಷ್' ಸಮಯದಲ್ಲಿ ಕುದಾಲಿ-ಫಾವಡೆ ಮಾರಾಟಗಾರರು ಲಾಭ ಮಾಡಿಕೊಂಡಂತೆ, ಇಂದಿನ ಜಾಗತಿಕ ಎಐ ರೇಸ್ನಲ್ಲಿ ಅಗತ್ಯವಿರುವ ಅತ್ಯಾಧುನಿಕ ಸೆಮಿಕಂಡಕ್ಟರ್ ಚಿಪ್ಸ್ ಪೂರೈಕೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಎನ್ವಿಡಿಯಾ ಸಂಸ್ಥೆಯು ಕೇವಲ 3 ವರ್ಷಗಳಲ್ಲಿ ತನ್ನ ಮೌಲ್ಯವನ್ನು 360 ಬಿಲಿಯನ್ ಡಾಲರ್ನಿಂದ 4.5 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಾಂತ್ರಿಕ ಸಲಹೆಗಾರರೂ ಆಗಿರುವ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆನ್ಸನ್ ಹುವಾಂಗ್ ಅವರು ಚೀನಾದ ಶಂಕಿತ ಗೂಢಚಾರಿಯೊಬ್ಬರ ಜೊತೆ ಅಕ್ರಮ ಪ್ರೇಮ ಬಾಂಧವ್ಯ ಹೊಂದಿದ್ದಾರೆ ಎಂಬ ಆರೋಪ ಅಮೆರಿಕ ಸೇರಿದಂತೆ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ತಲ್ಲಣ ಮೂಡಿಸಿದೆ.
ಚಿಪ್ಗಳ ಅಕ್ರಮ ಸಾಗಣೆ ಮತ್ತು 'ಮೆಗಾ ಸ್ಪೀಡ್' ರಹಸ್ಯ ಜಾಲ!
ಅಮೆರಿಕದ ಗುಪ್ತಚರ ಸಂಸ್ಥೆಗಳು ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಸಿಂಗಾಪುರ ಮೂಲದ 'ಮೆಗಾ ಸ್ಪೀಡ್' ಎಂಬ ಕ್ಲೌಡ್ ಡೇಟಾ ಸೆಂಟರ್ ಸಂಸ್ಥೆಯು ಎನ್ವಿಡಿಯಾದಿಂದ ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಎಐ ಚಿಪ್ ಖರೀದಿಸಿತ್ತು. ಆದರೆ, ಕಾಗದಪತ್ರಗಳಲ್ಲಿ ಸಿಂಗಾಪುರದ ಕಂಪನಿ ಎಂದು ಮಾರ್ಚ್ 2023ರಲ್ಲಿ ಹೆಸರು ಬದಲಾಯಿಸಿಕೊಂಡಿದ್ದ ಈ ಮೆಗಾ ಸ್ಪೀಡ್ ಸಂಸ್ಥೆಯು ವಾಸ್ತವವಾಗಿ ಚೀನಾದ 'ಸೀ ರೋಡ್ ಹೋಲ್ಡಿಂಗ್ ಲಿಮಿಟೆಡ್' ಕಂಪನಿ ಅಂಗಸಂಸ್ಥೆಯಾಗಿತ್ತು. ಅಮೆರಿಕನ್ ಸೇನೆಯೊಂದಿಗಿನ ನಂಟುಗಳ ಕಾರಣಕ್ಕೆ ನಿಷೇಧಕ್ಕೊಳಗಾಗಿದ್ದ ಚೀನಾದ 'ಇನ್ಸ್ಪರ್' ಕಂಪನಿಯ ಅಮೆರಿಕನ್ ನೋಂದಾಯಿತ ಸಂಸ್ಥೆ 'ಎವರ್ಸ್' ಮೂಲಕ ಈ ಚಿಪ್ಗಳನ್ನು ಖರೀದಿಸಲಾಗಿತ್ತು. ಮಲೇಷ್ಯಾ ಮತ್ತು ಇಂಡೋನೇಷ್ಯಾದ ಡೇಟಾ ಸೆಂಟರ್ಗಳಿಗೆ ಕಳುಹಿಸಲಾಗುತ್ತಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಅಮೆರಿಕದಿಂದ ರಫ್ತು ನಿಷೇಧಕ್ಕೊಳಗಾಗಿದ್ದ ಈ ಶಕ್ತಿಶಾಲಿ ಚಿಪ್ಗಳನ್ನು ಅಕ್ರಮವಾಗಿ ಚೀನಾದ ಅಲಿಬಾಬಾದಂತಹ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಿಗೆ ಕಳ್ಳಸಾಗಣೆ ಮಾಡಲಾಗಿದೆ ಎಂಬುದು ಅಮೆರಿಕನ್ ತನಿಖಾ ಸಂಸ್ಥೆಗಳ ಪರಿಶೀಲನೆಯಲ್ಲಿ ಬಯಲಾಗಿದೆ.
ಪ್ರೇಮ ಬಂಧ; ಚೀನಾ ಗುಪ್ತಚರ ಸಚಿವಾಲಯದ ಹನಿಟ್ರ್ಯಾಪ್ ಆರೋಪ!
ಈ ಅಕ್ರಮ ಚಿಪ್ ಪೂರೈಕೆ ಜಾಲದ ಕೇಂದ್ರಬಿಂದುವಾಗಿ ಮೆಗಾ ಸ್ಪೀಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಆಲಿಸ್ ಹುವಾಂಗ್ (ಅಸಲಿ ಹೆಸರು ಹುವಾಂಗ್ ಲೇ) ಕಾಣಿಸಿಕೊಂಡಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮದಲ್ಲಿ ಮಾಜಿ ಪತ್ರಕರ್ತೆಯಾಗಿದ್ದ ಆಲಿಸ್ ಹುವಾಂಗ್, 2024ರಲ್ಲಿ ತೈವಾನ್ನ ರಾಜಧಾನಿ ತೈಪೆಯ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಜೆನ್ಸನ್ ಹುವಾಂಗ್ ಅವರ ಪರಿಚಯ ಬೆಳೆಸಿಕೊಂಡಿದ್ದರು. ಅಮೆರಿಕದ ಗುಪ್ತಚರ ಸಂಸ್ಥೆಗಳು ನಡೆಸಿದ ಎಲೆಕ್ಟ್ರಾನಿಕ್ ಸರ್ವೆಲೆನ್ಸ್ ತನಿಖೆಯಲ್ಲಿ ಜೆನ್ಸನ್ ಹುವಾಂಗ್ ಮತ್ತು ಆಲಿಸ್ ಹುವಾಂಗ್ ನಡುವೆ ನಿಕಟ ಪ್ರೇಮ ಸಂಬಂಧವಿರುವುದು ಧೃಡಪಟ್ಟಿದೆ. ಚೀನಾದ ರಾಜ್ಯ ಭದ್ರತಾ ಸಚಿವಾಲಯವೇ ಆಲಿಸ್ ಹುವಾಂಗ್ ಅವರನ್ನು ನಿಯೋಜಿಸಿ, ಜೆನ್ಸನ್ ಹುವಾಂಗ್ ಅವರ ಹತ್ತಿರವಾಗಿ ಎನ್ವಿಡಿಯಾದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯಗಳನ್ನು ಚೀನಾಗೆ ತಲುಪಿಸಲು ಹನಿಟ್ರ್ಯಾಪ್ ತಂತ್ರ ಬಳಸಿದೆ ಎಂದು ಅಮೆರಿಕನ್ ಭದ್ರತಾ ಮಂಡಳಿ ಶಂಕಿಸಿದೆ.
ಸಿಇಒ ಕ್ಷಮೆಯಾಚನೆ, ಟ್ರಂಪ್ ಬೆಂಬಲ ಮತ್ತು ಅಮೆರಿಕ ಸರ್ಕಾರದ ಸಮನ್ಸ್!
ಪ್ರಕರಣ ಭಾರಿ ವಿವಾದ ಸೃಷ್ಟಿಸುತ್ತಿದ್ದಂತೆಯೇ ಜೆನ್ಸನ್ ಹುವಾಂಗ್ ಅವರು ಎನ್ವಿಡಿಯಾ ಸಿಬ್ಬಂದಿಗೆ ಆಂತರಿಕ ಇಮೇಲ್ ಕಳುಹಿಸಿ ತಮ್ಮ ಅಕ್ರಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ನನ್ನ ಪತ್ನಿಗೆ ನಾನು ನಂಬಿಕೆದ್ರೋಹ ಎಸಗಿದ್ದೇನೆ, ನನ್ನ ಕುಟುಂಬ ಹಾಗೂ ಮಕ್ಕಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಇಮೇಲ್ನಲ್ಲಿ ಬರೆದಿರುವ ಅವರು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಎನ್ವಿಡಿಯಾ ಸಂಸ್ಥೆಯು ಸ್ವತಂತ್ರ ನಿರ್ದೇಶಕರ ಸಮಿತಿ ರಚಿಸಿ ಆಂತರಿಕ ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಜೆನ್ಸನ್ ಹುವಾಂಗ್ ಸಿಇಒ ಆಗಿ ಮುಂದುವರಿಯಲಿದ್ದಾರೆ.
ಟ್ರಂಪ್ ಹೇಳಿದ್ದೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆನ್ಸನ್ ಹುವಾಂಗ್ ಪರವಾಗಿ ಮಾತನಾಡಿ, "ಜೆನ್ಸನ್ ನಮ್ಮ ದೇಶಕ್ಕಾಗಿ ಅದ್ಭುತ ಕೆಲಸ ಮಾಡಿದ್ದಾರೆ, ಅವರು ಗೌರವಾನ್ವಿತ ವ್ಯಕ್ತಿ. ಇದಕ್ಕೆ ಏನಾದರೂ ಸೂಕ್ತ ಕಾರಣವಿರಬಹುದು" ಎಂದು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಹಾಗೂ ವೈಟ್ಹೌಸ್ ಅಧಿಕಾರಿಗಳು ನವೆಂಬರ್ 18ರಂದು ರಾಷ್ಟ್ರೀಯ ಭದ್ರತಾ ವಿಚಾರಣೆಗೆ ಹಾಜರಾಗುವಂತೆ ಜೆನ್ಸನ್ ಹುವಾಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಇನ್ನೊಂದೆಡೆ, ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಮತ್ತು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯು ಈ ಎಲ್ಲಾ ಗೂಢಚಾರಿಕೆ ಆರೋಪಗಳನ್ನು ತಳ್ಳಿಹಾಕಿವೆ. ಇದು ಅಮೆರಿಕನ್ ಮಾಧ್ಯಮಗಳ ಕಲ್ಪಿತ ಕಥೆಯಾಗಿದ್ದು, ಚೀನಾ ಹೆಸರಿಗೆ ಕಪ್ಪು ಮಸಿ ಬಳಿಯಲು ಹಾಗೂ ತಂತ್ರಜ್ಞಾನ ನಿರ್ಬಂಧಗಳನ್ನು ಸಮರ್ಥಿಸಿಕೊಳ್ಳಲು ಹೆಣೆದಿರುವ ರಾಜಕೀಯ ಸಂಚು ಎಂದು ಪ್ರತ್ಯುತ್ತರ ನೀಡಿವೆ.














