52000 ಕೋಟಿ ರೂ. ಆರ್ಥಿಕ ವಂಚನೆ ಪ್ರಕರಣದಲ್ಲಿ ಎನ್‌ಎಂಸಿ ಹೆಲ್ತ್‌ಕೇರ್ ಸ್ಥಾಪಕ ಬಿ.ಆರ್. ಶೆಟ್ಟಿ ಹಾಗೂ ಮಾಜಿ ಸಿಇಒ ಪ್ರಶಾಂತ್ ಮಂಗತ್ ದೋಷಿಗಳು ಎಂದು ಅಬುಧಾಬಿ ನ್ಯಾಯಾಲಯ ತೀರ್ಪು ನೀಡಿದೆ. ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮತ್ತು ಸಾಲದ ವಿವರ ಮರೆಮಾಚುವಿಕೆ ಆರೋಪಗಳು ಸಾಬೀತಾಗಿವೆ.

ಅಬುಧಾಬಿ: 1975ರಲ್ಲಿ ಯುಎಇಯ ಅಬುಧಾಬಿಯಲ್ಲಿ ಸ್ಥಾಪನೆಯಾದ ಪ್ರಮುಖ ಆರೋಗ್ಯ ಸೇವಾ ಸಮೂಹ ಸಂಸ್ಥೆಯಾದ ‘ಎನ್‌ಎಂಸಿ ಹೆಲ್ತ್‌ಕೇರ್’ 2020ರಲ್ಲಿ ಬಾಗಿಲು ಹಾಕಲು ಕಾರಣವಾದ 52000 ಕೋಟಿ ರು.ನ ಬೃಹತ್ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಸಂಸ್ಥೆಯ ಸ್ಥಾಪಕರಾದ ಕರ್ನಾಟಕ ಮೂಲದ ಬಿ.ಆರ್. ಶೆಟ್ಟಿ ಮತ್ತು ಮಾಜಿ ಸಿಇಒ ಪ್ರಶಾಂತ್ ಮಂಗತ್ ದೋಷಿಗಳು ಎಂದು ಅಬುಧಾಬಿ ಗ್ಲೋಬಲ್ ಮಾರ್ಕೆಟ್ ನ್ಯಾಯಾಲಯ 200 ಪುಟಗಳ ತೀರ್ಪು ನೀಡಿದೆ.

ಸಂಸ್ಥೆಯ ಹಣ ದುರುಪಯೋಗ, ಸಾಲದ ವಿವರಗಳನ್ನು ಮರೆಮಾಚುವುದು ಹಾಗೂ ಹಣಕಾಸು ದಾಖಲೆಗಳನ್ನು ತಿರುಚುವ ಮೂಲಕ, ಶೆಟ್ಟಿ ಮತ್ತು ಮಂಗತ್‌ 2012ರಿಂದ 2020ರ ವರೆಗೆ ಸಂಸ್ಥೆಯ ವ್ಯವಹಾರದಲ್ಲಿ ಉದ್ದೇಶಪೂರ್ವಕವಾಗಿ ವಂಚನೆಯಲ್ಲಿ ತೊಡಗಿದ್ದುದು ಸಾಬೀತಾಗಿದೆ ಎಂದು ಕೋರ್ಟ್‌ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಶೆಟ್ಟಿ ಮತ್ತು ಮಂಗತ್‌ ಪಾವತಿಸಬೇಕಾದ ಅಂತಿಮ ಮೊತ್ತವನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.

ಆದರೆ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿರುವ ಶೆಟ್ಟಿ, ‘ನಾನು ಹಿರಿಯ ಅಧಿಕಾರಿಗಳಿಂದ ವಂಚನೆಗೆ ಒಳಗಾಗಿದ್ದೇನೆ’ ಎಂದು ವಾದಿಸಿದ್ದರು. ಅತ್ತ, ‘ಸಂಸ್ಥೆಯ ಹಣಕಾಸು ವ್ಯವಹಾರಗಳ ಮೇಲೆ ನನ್ನ ನಿಯಂತ್ರಣವಿರಲಿಲ್ಲ’ ಎಂದು ಮಂಗತ್‌ ಹೇಳಿದ್ದಾರೆ. ಆದರೆ, ಈ ವಾದಗಳನ್ನು ನ್ಯಾಯಾಲಯ ತಳ್ಳಿಹಾಕಿದೆ.

ಆರೋಪಗಳೇನು?

ಶೆಟ್ಟಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ 500ಕ್ಕೂ ಹೆಚ್ಚು ಬಾರಿ ಹಣ ವರ್ಗಾವಣೆಯಾಗಿದ್ದು, ಸುಮಾರು 9,500 ಕೋಟಿ ರು. ವರ್ಗಾವಣೆಯಾಗಿದೆ. ಈ ಪೈಕಿ ಕಂಪನಿಗೆ ಮರಳಿ ಬಂದ ಹಣವನ್ನು ಕಡಿತಗೊಳಿಸಿದ ಬಳಿಕ ಸುಮಾರು 5,900 ಕೋಟಿ ರು. ಖಾತೆಯಲ್ಲೇ ಉಳಿದಿದೆ. ಈ ಹಣವನ್ನು ಖಾಸಗಿ ವಿಮಾನ ಖರೀದಿ, ದುಬೈ ಹಿಲ್ಸ್‌ನಲ್ಲಿನ ಆಸ್ತಿಗಳು ಹಾಗೂ ಅಮೆರಿಕದ ವ್ಯೋಮಿಂಗ್‌ನ ತೈಲ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಳಸಲಾಗಿದೆ.

2018ರ ಡಿಸೆಂಬರ್ ವೇಳೆಗೆ ಹಣಕಾಸು ದಾಖಲೆಗಳಲ್ಲಿ ಕೇವಲ 18,688.19 ಕೋಟಿ ರು. ಸಾಲವಿರುವುದಾಗಿ ತೋರಿಸಿದ್ದ ಎನ್‌ಎಂಸಿ ಸಂಸ್ಥೆಯು ಸುಮಾರು 36,437 ಕೋಟಿ ರು.ನಷ್ಟು ಸಾಲವನ್ನು ಬಹಿರಂಗಪಡಿಸದೆ ಮರೆಮಾಚಿತ್ತು. ಜತೆಗೆ, ಸರಕು-ಸೇವೆಗಳ ಪೂರೈಕೆದಾರರ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಬ್ಯಾಂಕ್‌ಗಳಿಂದ ಹಣ ಪಡೆದಿತ್ತು ಎಂದು ಕೋರ್ಟ್‌ ತಿಳಿಸಿದೆ.

ಬ್ಯಾಂಕ್ ಆಫ್ ಬರೋಡಾ ಪಾರು

ಎನ್‌ಎಂಸಿ ಸಂಸ್ಥೆಯ ಸಾಲದ ವಿವರಗಳನ್ನು ಮರೆಮಾಚಲು ಬ್ಯಾಂಕ್ ಆಫ್ ಬರೋಡಾ ಸಹಕರಿಸಿದೆ ಎಂಬ ಆರೋಪ ಕೇಳಿಬಂದಿತ್ತಾದರೂ, ಬ್ಯಾಂಕ್ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ಕೈಬಿಟ್ಟಿದೆ.

2019ರಲ್ಲೇ ವಂಚನೆ ಪತ್ತೆ

2019ರಲ್ಲಿ ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಮಡ್ಡಿ ವಾಟರ್ಸ್, ಎನ್‌ಎಂಸಿಯ ಹಣಕಾಸು ಖಾತೆಗಳು ಮತ್ತು ಬಹಿರಂಗಪಡಿಸದ ಸಾಲಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ವರದಿಯನ್ನು ಪ್ರಕಟಿಸಿತು. ಅದರ ಮರುವರ್ಷ, ಅಂದರೆ 2020ರಲ್ಲಿ ದಿವಾಳಿಯಾಯಿತು.