ತಮ್ಮ ದೇಶೀಯ ಉದ್ಯಮಗಳಿಗೆ ಸಬ್ಸಿಡಿ ನೀಡುತ್ತಿರುವ ಭಾರತ ಸೇರಿದಂತೆ 16 ದೇಶಗಳ ಮೇಲೆ ಸುಂಕ ಹೆಚ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇದರಿಂದ ಅಮೆರಿಕದ ಮಾರುಕಟ್ಟೆಗೆ ಅನ್ಯಾಯವಾಗುತ್ತಿದೆ ಎಂಬುದು ಅವರ ವಾದವಾಗಿದೆ. ಇದು ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಯಿದೆ.
ವಾಷಿಂಗ್ಟನ್: ರಷ್ಯಾ ತೈಲ ಖರೀದಿ ಸೇರಿದಂತೆ ವಿವಿಧ ವಿಷಯ ಮುಂದಿಟ್ಟುಕೊಂಡು ಭಾರತ ಸೇರಿದಂತೆ ಜಗತ್ತಿನ ಹಲವು ಪ್ರಮುಖ ದೇಶಗಳ ಮೇಲೆ ತೆರಿಗೆ ಜಾರಿಗೆ ಮುಂದಾಗಿ ಬಳಿಕ ಸುಮ್ಮನಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಹೊಸ ಕಾರಣ ಮುಂದಿಟ್ಟುಕೊಂಡು ಭಾರತ ಸೇರಿ 16 ದೇಶಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಭಾರತ ಸೇರಿದಂತೆ 16 ದೇಶಗಳು ತಮ್ಮ ಉದ್ಯಮಗಳಿಗೆ ಸಬ್ಸಿಡಿ ನೀಡುವ ಮೂಲಕ ಅವುಗಳಿಗೆ ನೆರವಾಗುತ್ತಿವೆ. ಇದು ಆ ದೇಶಗಳ ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಕಡಿಮೆ ಬೆಲೆಯ ಉತ್ಪನ್ನಗಳ ಮೂಲಕ ಅಮೆರಿಕ ಮಾರುಕಟ್ಟೆ ಮೇಲೆ ಒತ್ತಡ ಸೃಷ್ಟಿಗೆ ಕಾರಣವಾಗಿದೆ. ಹೀಗಾಗಿ ಈ ದೇಶಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಟ್ರಂಪ್ ಸರ್ಕಾರ ಮುಂದಾಗಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ವಿದೇಶಿ ಸರ್ಕಾರಗಳು ನೀಡುವ ಕೈಗಾರಿಕಾ ಸಬ್ಸಿಡಿಗಳು, ಸಾಲ ಸೌಲಭ್ಯಗಳು ಮತ್ತು ಮಾರುಕಟ್ಟೆ ನಿರ್ಬಂಧಗಳಿಂದಾಗಿ ಅಮೆರಿಕದ ಉತ್ಪಾದಕರಿಗೆ ಅನಾನುಕೂಲವಾಗುತ್ತಿದೆ. ಅಮೆರಿಕದ ಕಂಪನಿಗಳಿಗಿಂತ ಸರಕುಗಳ ಅಗ್ಗ ಉತ್ಪಾದನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಪಡೆದುಕೊಳ್ಳುತ್ತಿರುವುದರಿಂದ ಅಮೆರಿಕಕ್ಕೆ ಅನ್ಯಾಯ ಎನ್ನುವುದು ಟ್ರಂಪ್ ಸರ್ಕಾರದ ವಾದ, ಇದಕ್ಕೆ ಸಂಬಂಧಿಸಿದಂತೆ ಅಮೆರಿಕ ತನಿಖೆಯನ್ನೂ ನಡೆಸಿತ್ತು ಫಲಿತಾಂಶ ಆಧಾರದಲ್ಲಿ ಸುಂಕ ಹೆಚ್ಚಳಕ್ಕೆ ಮುಂದಾಗಿದೆಎಂದು ಪತ್ರಿಕೆ ವರದಿ ಮಾಡಿದೆ.
ಇದರ ಪರಿಣಾಮವನ್ನು ಭಾರತ, ಚೀನಾ , ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟಗಳು ಎದುರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ. ಈ ಬೆಳವಣಿಗೆ ಜಾಗತಿಕ ವ್ಯಾಪಾರ ವಲಯದಲ್ಲಿ ಮತ್ತೊಂದು ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ.
















