ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಕೈಗೊಳ್ಳಲಾಗುತ್ತಿರುವ ಕಠಿಣ ಕಾನೂನು ಕ್ರಮಗಳ ಪರಿಣಾಮವಾಗಿ ಪೋಷಕರಿಲ್ಲದೆ ಒಂಟಿಯಾಗಿ ಅಮೆರಿಕ ಗಡಿ ಪ್ರವೇಶಿಸಲು ಯತ್ನಿಸಿದ ಒಟ್ಟು 1,389 ಭಾರತೀಯ ಮಕ್ಕಳನ್ನು ಅಲ್ಲಿನ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ನವದೆಹಲಿ: ವಲಸೆ ನೀತಿ ಕಠಿಣಗೊಳಿಸಿರುವ ಅಮೆರಿಕದಲ್ಲಿ ಅಲ್ಲಿನ ವಲಸೆ ಅಧಿಕಾರಿಗಳು ಕಳೆದ 4 ವರ್ಷದಲ್ಲಿ 1389 ಭಾರತೀಯ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಪೋಷಕರು, ಪಾಲಕರಿಲ್ಲದೆ ಬಂದಿದ್ದ ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು. ಅವರಿನ್ನೂ ಭಾರತಕ್ಕೆ ಮರಳಿಲ್ಲ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಅಂಕಿ ಅಂಶ ತಿಳಿಸಿದೆ.
ಅಮೆರಿಕದ ವಲಸೆ ಮತ್ತು ಗಡಿ ರಕ್ಷಣಾ ಇಲಾಖೆ( ಯುಎಸ್ಸಿಬಿಪಿ) ಈ ಬಗ್ಗೆ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, 2023-24ರಲ್ಲಿ ( 730), 2024-25( 517), 2025-26(91) , 2026-27 ರಲ್ಲಿ (51) ಹಾಗೂ ಈ ವರ್ಷದ ಅಕ್ಟೋಬರ್ನಲ್ಲಿ 2 ಮಕ್ಕಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಇಳಿಕೆ ಕಂಡುಬಂದಿದೆ.
ಭಾರತದ ಮಕ್ಕಳು ಮಾತ್ರವಲ್ಲ ಬೇರೆ ದೇಶದ ಪ್ರಕರಣಗಳು ಕೂಡ ಅಮೆರಿಕದಲ್ಲಿ ಇಳಿಕೆ ಕಂಡು ಬಂದಿದೆ. 2024ರ ವಿತ್ತೀಯ ವರ್ಷದಲ್ಲಿ ಅಮೆರಿಕದಲ್ಲಿ ಎಲ್ಲ ದೇಶಗಳಿಂದ ಒಟ್ಟು ಸುಮಾರು 1.1 ಲಕ್ಷ ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದರೆ 2025ರಲ್ಲಿ ಈ ಸಂಖ್ಯೆ 29,584ಕ್ಕೆ ಇಳಿದಿದೆ. 2026ರ ಆರ್ಥಿಕ ವರ್ಷದಲ್ಲಿ 9,190ಕ್ಕೆ, ಈ ವರ್ಷದ ಅಕ್ಟೋಬರ್ಲ್ಲಿ 722ಕ್ಕೆ ಇಳಿದಿದೆ.
ಮಕ್ಕಳನ್ನು ಕಳುಹಿಸುವ ಪ್ರವೃತ್ತಿ ಕಡಿಮೆಯಾಗಲು ಕಾರಣವೇನು?
ವಲಸೆ ಜಾಲಗಳ ಬಗ್ಗೆ ತಿಳಿದಿರುವ ತಜ್ಞರ ಪ್ರಕಾರ, ಅಮೆರಿಕದಲ್ಲಿ ಜಾರಿಯಾಗಿರುವ ಕಠಿಣ ತಪಾಸಣೆ ಮತ್ತು ಸಿಕ್ಕಿಬಿದ್ದವರನ್ನು ತಕ್ಷಣವೇ ಗಡೀಪಾರು ಮಾಡುವ ನೀತಿಯೇ ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಈ ಹಿಂದೆ, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಪೋಷಕರು ಅಥವಾ ಸಂಬಂಧಿಕರು ತಮ್ಮ ಕಾನೂನು ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಲು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕರೆಸಿಕೊಳ್ಳುತ್ತಿದ್ದರು. ಮಕ್ಕಳ ಮೂಲಕ ಸುಲಭವಾಗಿ ಶಾಶ್ವತ ನಿವಾಸದ ಹಕ್ಕು ಪಡೆಯಬಹುದು ಎಂಬ ಕಾರಣಕ್ಕೆ ಅಂತಹ ಮಕ್ಕಳನ್ನು 'ಗ್ರೀನ್ ಕಾರ್ಡ್ ತರುವವರು' ಎಂದೇ ಕರೆಯಲಾಗುತ್ತಿತ್ತು. ಆದರೆ, ಈಗ ನಿಯಮಗಳು ಬಿಗಿಯಾಗಿರುವುದರಿಂದ ಈ ತಂತ್ರ ಫಲ ನೀಡುತ್ತಿಲ್ಲ.
ಗಡೀಪಾರು ಭಯದಲ್ಲಿ ಬದುಕುತ್ತಿರುವ ಯುವಕರು!
ಅಮೆರಿಕದ ಕಠಿಣ ವಲಸೆ ನೀತಿಗಳು ಅಲ್ಲಿ ನೆಲೆಸಿರುವ ಭಾರತೀಯ ಕುಟುಂಬಗಳಲ್ಲಿ ತೀವ್ರ ಆತಂಕ ಸೃಷ್ಟಿಸಿವೆ. 2012ರಲ್ಲಿ ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ಗುಜರಾತ್ನ ಕಾಡಿ ಮೂಲದ ಉದ್ಯಮಿಯೊಬ್ಬರು ತಮ್ಮ ಮಗನ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. "ನನ್ನ 17 ವರ್ಷದ ಮಗ ತನ್ನ 12ನೇ ವಯಸ್ಸಿನಿಂದ ಟೆಕ್ಸಾಸ್ನಲ್ಲಿ ವಾಸಿಸುತ್ತಿದ್ದಾನೆ. ಆದರೆ ಈಗ ತನ್ನ ಆಶ್ರಯ ಅರ್ಜಿಯ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಆತ ತೀವ್ರವಾಗಿ ಹೆದರುತ್ತಿದ್ದಾನೆ. ಅಧಿಕಾರಿಗಳು ತನ್ನನ್ನು ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಬಹುದು ಎಂಬ ಭಯದಿಂದ ಆತ ರಹಸ್ಯವಾಗಿ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಾ, ಧಾರ್ಮಿಕ ಪಂಥವೊಂದರ ಸದಸ್ಯರ ಆಶ್ರಯದಲ್ಲಿ ದಿನ ದೂಡುತ್ತಿದ್ದಾನೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಅಕ್ರಮ ಪ್ರವೇಶಕ್ಕೆ ಯತ್ನಿಸುವವರಲ್ಲಿ ಭಾರತಕ್ಕೆ 3ನೇ ಸ್ಥಾನ
ಒಂದೆಡೆ ಒಂಟಿ ಮಕ್ಕಳ ಸಂಖ್ಯೆ ಇಳಿಕೆಯಾಗಿದ್ದರೂ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವ ಒಟ್ಟು ವಲಸಿಗರ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಈಗಲೂ ದೊಡ್ಡದಿದೆ. 2026ರ ಹಣಕಾಸು ವರ್ಷದಲ್ಲಿ ಅಮೆರಿಕದ ಗಡಿ ಅಧಿಕಾರಿಗಳು ಭಾರತೀಯ ಪ್ರಜೆಗಳೊಂದಿಗೆ ಒಟ್ಟು 30,528 ಎನ್ಕೌಂಟರ್ಗಳನ್ನು (ಗಡಿಯಲ್ಲಿ ತಡೆಹಿಡಿದ ಪ್ರಕರಣಗಳು) ದಾಖಲಿಸಿದ್ದಾರೆ. 21 ದೇಶಗಳ ಪಟ್ಟಿಯಲ್ಲಿ ಮೆಕ್ಸಿಕೊ ಮತ್ತು ಕೆನಡಾ ನಂತರ ಅತಿ ಹೆಚ್ಚು ಅಕ್ರಮ ವಲಸೆ ಯತ್ನಗಳು ನಡೆದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
















