ಟರ್ಕಿಯ ಕಪ್ಪಡೋಸಿಯಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯ ನೆಲಮಾಳಿಗೆಯ ಗೋಡೆ ಒಡೆದಾಗ 18 ಅಂತಸ್ತಿನ ಬೃಹತ್ ಭೂಗತ ನಗರ ಪತ್ತೆಯಾಗಿದೆ. ಡೆರಿಂಕುಯು ಎಂದು ಕರೆಯಲ್ಪಡುವ ಈ ನಗರದಲ್ಲಿ ಪ್ರಾಚೀನ ಕಾಲದಲ್ಲಿ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು 20,000 ಜನರು ವಾಸಿಸುತ್ತಿದ್ದರು.
ಹಾಗೆ ಸುಮ್ಮನೆ ನೀವು ಒಂದು ಮನೆಯನ್ನು ನವೀಕರಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ನೆಲಮಾಳಿಗೆಯ ಗೋಡೆಯನ್ನು ಒಡೆದ್ದೀರಿ! ಬೆನ್ನಲ್ಲೇ ನೀವು ನಿರ್ಮಿಸಿರದ ಕೋಣೆಯೊಂದು ಕಾಣಿಸುತ್ತದೆ. ಒಂದು ಕ್ಷಣ ಯೋಚಿಸಿ ಅಲ್ಲಿ ಏನಿದೆ ಎಂದು ತಿಳಿಯಲು ಒಳಗೆ ಹೋಗ್ತೀರಿ. ಎಂಟ್ರಿ ಕೊಟ್ಟಾಗ ಸುರಂಗ ಜಾಲ ನಿಮಗೆ ಕಾಣುತ್ತದೆ. ಸುರಂಗ ಪ್ರವೇಶಿಸಿದಾಗ ಇಡೀ ನಗರದ ಪಳೆಯುಳಿಕೆಗಳು ಕಾಣುತ್ತವೆ.. ಟರ್ಕಿಯ ಕಪ್ಪಡೋಸಿಯಾ ಪ್ರದೇಶದಲ್ಲಿ ಇಂತಹದೊಂದು ಅದ್ಭುತ ನಡೆದಿದೆ!
ತೆರೆದುಕೊಂಡ 18 ಅಂತಸ್ತಿನ ಸಿಟಿ
ಹೌದು, 1960ರ ದಶಕದಲ್ಲಿ ಸ್ಥಳೀಯ ವ್ಯಕ್ತಿ ತನ್ನ ಮನೆ ನವೀಕರಿಸುತ್ತಿದ್ದ. ಅವನು ನೆಲಮಾಳಿಗೆಯ ಗೋಡೆಯ ಮೇಲೆ ಸುತ್ತಿಗೆಯಿಂದ ಜೋರಾಗಿ ಹೊಡೆದಿದ್ದಾನೆ. ಒಂದು ಇಟ್ಟಿಗೆ ಇನ್ನೊಂದು ಬದಿಗೆ ಬಿದ್ದಿತು. ಆಗ ವಿಚಿತ್ರ ಶಬ್ದ ಪ್ರತಿಧ್ವನಿಸಿದೆ. ನಂತರ ಇಡೀ ಗೋಡೆ ತೆಗೆದು ನೋಡಿದಾಗ ಗುಪ್ತ ಕೋಣೆ ಪತ್ತೆಯಾಗಿದೆ. ಆ ಕೋಣೆಯಿಂದ ಸುರಂಗಗಳು ಹಾದು ಹೋಗಿದ್ದವು. ಹೀಗೆ ಹುಡುಕಾಟ ಮುಂದುವರೆದಂತೆ.. ವಿಶಾಲವಾದ ಭೂಗತ ನಗರ ಪತ್ತೆ ಆಗಿದೆ. ಇದನ್ನು ಇಂದು ಡೆರಿಂಕುಯು (Derinkuyu Underground City) ಎಂದು ಕರೆಯಲಾಗುತ್ತದೆ.
ನಗರ ಪತ್ತೆ ಬೆನ್ನಲ್ಲೇ ಪುರಾತತ್ವ ಇಲಾಖೆಯವರು ಎಂಟ್ರಿ ನೀಡಿ ಅಧ್ಯಯನ ಮಾಡಿದ್ದಾರೆ. ಈ ನಗರ ದಂಡಯಾತ್ರೆಯ ಸಮಯದಲ್ಲಿ ನಿರ್ಮಾಣ ಆಗಿದೆ. ಗೋಡೆಯ ಹಿಂದಿನ ಹಾದಿಯು ಶತಮಾನಗಳಿಂದ ಭೂಗತದಲ್ಲಿ ಅಡಗಿದ್ದ ಇತಿಹಾಸದ ಜಗತ್ತನ್ನು ಬಹಿರಂಗಪಡಿಸಿದೆ. ಕ್ರಮೇಣ ಈ ಸುರಂಗಗಳು ಪ್ರತ್ಯೇಕ ಕೋಣೆಗಳಿಗೆ ಮಾತ್ರವಲ್ಲ, ಸಂಪೂರ್ಣ ಭೂಗತ ವಸಾಹತುಗಳಿಗೆ ಕಾರಣವಾಗುತ್ತವೆ ಎಂದು ಹೇಳಿದೆ.
ಇಡೀ ನಗರವು 85 ಮೀಟರ್ ಕೆಳಗೆ ಹರಡಿಕೊಂಡಿದೆ. ಇದು ಒಟ್ಟು 18 ಮಹಡಿಗಳನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ, ಸುಮಾರು 20,000 ಜನರು ತಮ್ಮ ಪ್ರಾಣಿಗಳು ಮತ್ತು ಆಹಾರ ಸಾಮಗ್ರಿಗಳೊಂದಿಗೆ ಇಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಇದು ಕೇವಲ ಅಡಗಿಕೊಳ್ಳಲು ನಿರ್ಮಿಸಲಾದ ಗುಹೆಗಳ ಗುಂಪಾಗಿರಲಿಲ್ಲ. ಇದು ಸಂಪೂರ್ಣ ವಸಾಹತು ಆಗಿತ್ತು. ವಾಸಿಸಲು ಮತ್ತು ತಿನ್ನಲು ದೊಡ್ಡ ಕೊಠಡಿಗಳಿದ್ದವು. ಧಾರ್ಮಿಕ ಚಟುವಟಿಕೆಗಳಿಗಾಗಿ ಚರ್ಚ್ಗಳನ್ನು ನಿರ್ಮಿಸಲಾಗಿತ್ತು. ಮಕ್ಕಳಿಗೆ ಅಧ್ಯಯನ ಮಾಡಲು ಮಿಷನರಿ ಶಾಲೆ ಇತ್ತು. ಪ್ರಾಣಿಗಳಿಗೆ ಧಾನ್ಯ ಮತ್ತು ಆಹಾರ ಸಂಗ್ರಹಿಸಲು ನೆಲಮಾಳಿಗೆಗಳಿದ್ದವು.
ಲಕ್ಷಾಂತರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಂಡಿತ್ತು. ಅದರಿಂದ ಬೂದಿಯ ಪದರಗಳು ಇಲ್ಲಿ ಸಂಗ್ರಹಗೊಂಡಿದ್ದವು. ಗಾಳಿ ಮಳೆಯಿಂದಾಗಿ ಇದು ಸವೆದು ಬೆಟ್ಟಗಳು, ಶಿಲಾ ರಚನೆಯನ್ನು ಸೃಷ್ಟಿಸಿಕೊಂಡಿತ್ತು. ಟಫ್ ಎಂಬ ಜ್ವಾಲಾಮುಖಿ ಬೂದಿ ಮೃದುವಾಗಿತ್ತು ಮತ್ತು ಸುಲಭವಾಗಿ ಕತ್ತರಿಸಿ ಆಕಾರ ನೀಡುತ್ತಿತ್ತು. ಈ ಬಂಡೆಗಳ ಒಳಗೆ ಕೊಠಡಿಗಳು ಮತ್ತು ಸುರಂಗಗಳನ್ನು ಕೆತ್ತಲು ಅಂದಿನ ಜನರಿಗೆ ಪ್ರೇರೇಪಿಸಿತು. ಆಕ್ರಮಣಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ನಗರಗಳನ್ನು ಬಳಸಲಾಗುತ್ತಿತ್ತು. ಪರ್ಷಿಯನ್ನರು, ಅರಬ್ಬರು ಮತ್ತು ಸೆಲ್ಜುಕ್ ತುರ್ಕರಿಂದ ಬೆದರಿಕೆ ಬಂದಾಗ ಜನ ತಮ್ಮ ಕುಟುಂಬಗಳು, ಪ್ರಾಣಿಗಳು ಮತ್ತು ಅಗತ್ಯ ಆಸ್ತಿಗಳೊಂದಿಗೆ ಭೂಗತದಲ್ಲಿ ಅಡಗಿಕೊಳ್ಳುತ್ತಿದ್ದರು ಎನ್ನಲಾಗಿದೆ.
















