ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ವಿರುದ್ದ ಅವರ ಸೇನಾ ಯುನಿಟ್ ದಂಗೆ ಎದ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಮಾಂಡರ್ ಒಬ್ಬರಿಗೆ ಹಿಂಬಡ್ತಿ ನೀಡಿದ ಕಾರಣಕ್ಕಾಗಿ ಜೆಲೆನ್ಸ್ಕಿ ವಿರುದ್ಧ ಸೇನಾ ಯುನಿಟ್ ಅಸಮಾಧಾನ ತೋಡಿಕೊಂಡಿದೆ ಎಂದು ವರದಿಯಾಗಿದೆ.
ನವದೆಹಲಿ (ಮಾ.21): ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಕೇವಲ ರಷ್ಯಾದಿಂದ ಮಾತ್ರವಲ್ಲ, ಸ್ವತಃ ತನ್ನ ಸೈನ್ಯದಿಂದಲೂ ವಿರೋಧ ಎದುರಿಸುತ್ತಿದ್ದಾರೆ. ಸೇನಾಪಡೆಗಳು ಜೆಲೆನ್ಸ್ಕಿ ವಿರುದ್ಧ ದಂಗೆ ಏಳಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾಗಿ ಆರ್‌ಟಿ ನ್ಯೂಸ್ ವರದಿ ಪ್ರಕಟಿಸಿದೆ. ಸೇನಾ ಕಮಾಂಡರ್ ಒಬ್ಬರಿಗೆ ಹಿಂಬಡ್ತಿ ನೀಡಿದ ಕಾರಣಕ್ಕೆ ಉಕ್ರೇನ್ ಸೇನೆಯ ಬೆಟಾಲಿಯನ್, ಅಧ್ಯಕ್ಷನ ವಿರುದ್ಧವೇ ದಂಗೆ ಎದ್ದಿದೆ ಎನ್ನಲಾಗಿದೆ. ಕಮಾಂಡರ್ ಸಂದರ್ಶನವೊಂದರಲ್ಲಿ ಬಖ್ಮತ್‌ನಲ್ಲಿ ಆಗಿರುವ ದೊಡ್ಡ ನಷ್ಟದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲಿಯೇ ಕಮಾಂಡರ್‌ಗೆ ಜೆಲೆನ್ಸ್ಕಿ ಹಿಂಬಡ್ತಿ ನೀಡಿದ್ದರು. ಆರ್‌ಟಿ ನ್ಯೂಸ್ ವರದಿ ಮಾಡಿರುವ ಪ್ರಕಾರ ಬೆಟಾಲಿಯನ್ ಈಗಾಗಲೇ ಜೆಲೆನ್ಸ್ಕಿಗೆ ಅಂತಿಮ ಎಚ್ಚರಿಕೆಯನ್ನು ನೀಡಿದ್ದು, ಎಲ್ಲಿಯವರೆಗೂ ತಮ್ಮ ಕುಪೋಲ್ (ಹಿರಿಯ ಕಮಾಂಡರ್ ಹುದ್ದೆ) ಸ್ಥಾನಕ್ಕೆ ಮರಳುವುದಿಲ್ಲವೋ ಅಲ್ಲಿಯವರೆಗೂ ತಾವು ಯುದ್ಧ ಮಾಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬಖ್ಮುತ್‌ನಲ್ಲಿ ಅಗಿರುವ ನಷ್ಟದ ಕುರಿತಾಗಿ ಕಮಾಂಡರ್ ಸತ್ಯವನ್ನು ಜಗತ್ತಿಗೆ ತಿಳಿಸಿದ ಕಾರಣಕ್ಕೆ ಅವರ ವಿರುದ್ಧ ಜೆಲೆನ್ಸ್ಕಿ ಕ್ರಮ ಕೈಗೊಂಡಿದ್ದಾರೆ. ಆದರೆ, ಇದು ಅವರ ಸೇನಾ ಬೆಟಾಲಿಯನ್‌ಗೆ ಇಷ್ಟವಾಗಿಲ್ಲ. ಇದಕ್ಕಾಗಿ ಅಧ್ಯಕ್ಷರಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಕಮಾಂಡರ್ ಬಖ್ಮುತ್‌ನಲ್ಲಿ ಆಗಿರುವ ನಷ್ಟದ ಬಗ್ಗೆ ಮಾತನಾಡಿದ್ದರು. ಇವರು ಉಕ್ರೇನ್ ಸೇನೆಯ 46ನೇ ಏರ್ ಅಸಾಲ್ಟ್ ಬ್ರಿಗೇಡ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಕುಪೋಲ್ ಮರಳು ಈ ಹುದ್ದೆಗೆ ಬರುವವರೆಗೂ ತಾವು ಯುದ್ಧದಲ್ಲಿ ಭಾಗಿಯಾಗೋದಿಲ್ಲ ಎಂದು ಜೆಲೆನ್ಸ್ಕಿಗೆ ತಿಳಿಸಿದ್ದಾರೆ ಎಂದು ಆರ್‌ಟಿ ನ್ಯೂಸ್ ವರದಿ ಮಾಡಿದೆ. ಉಕ್ರೇನ್ ಕಮಾಂಡರ್ ಬಖ್ಮುತ್‌ನಲ್ಲಿ ಹಾನಿಯ ಬಗ್ಗೆ ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಮಿಲಿಟರಿ ಸಿದ್ಧತೆಯ ಬಗ್ಗೆಯೂ ಸಂದರ್ಶನದಲ್ಲಿ ತಿಳಿಸಿದ್ದರು.
ಈ ಸಂದರ್ಶನದಲ್ಲಿ ತಮ್ಮ500 ಯುನಿಟ್‌ನ ಬಲಿಷ್ಠ ಬೆಟಾಲಿಯನ್ ಸಂಪೂರ್ಣ ನಾಶವಾಗಿದ್ದು ಮಾತ್ರವಲ್ಲದೆ, ಪ್ರಮುಖ ಮೇಜರ್‌ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅದರೊಂದಿಗೆ ಉಕ್ರೇನ್‌ನ ಆಡಳಿತ ಸೈನಿಕರಿಗೆ ಯಾವುದೇ ಯುದ್ಧತಂತ್ರದ ತರಬೇತಿ ನೀಡಿರಲಿಲ್ಲ. ಹಾಗಾಗಿ ಇದು ಅನುಭವವಿಲ್ಲದ ಬೆಟಾಲಿಯನ್‌ನಂತಿತ್ತು ಎಂದಿದ್ದ ಕುಪೋಲ್, ಶಸ್ತ್ರಾಸ್ತ್ರಗಳ ಕೊರತೆಯೂ ತಮಗೆ ಅತಿಯಾಗಿ ಕಾಡಿದೆ ಎಂದು ಬಹಿರಂಗಪಡಿಸಿದ್ದರು.
ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್
ಇನ್ನೊಂದಡೆ ಸೇನಾ ಬೆಟಾಲಿಯನ್‌ನ ದಂಗೆಯ ಕುರಿತಾಗಿ ಮಾಹಿತಿ ಪಡೆದುಕೊಂಡಿರುವ ಜೆಲೆನ್ಸ್ಕಿ, ಪ್ರತಿ ಹಂತ ಹಂತದ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರೊಂದಿಗೆ ಸೇನೆಯ ಹಿರಿಯ ಕಮಾಂಡರ್‌ಗಳು ಒಗ್ಗಟ್ಟಾಗಿ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿರುವ ನಗರ ಬಖ್ಮುತ್‌ನಲ್ಲಿ ಯುದ್ಧ ಪರಿಸ್ಥಿತಿ ಕಳೆದ ವರ್ಷದ ಕೊನೆಯಲ್ಲಿ ತೀವ್ರ ರೂಪದಲ್ಲಿ ಏರಿಕೆಯಾಗಿದೆ. ರಷ್ಯಾ ಹಾಗೂ ಉಕ್ರೇನ್‌ನ ಸೇನಾಪಡೆಗಳು ನಿರಂತರ ಯುದ್ಧದಲ್ಲಿ ಭಾಗಿಯಾಗಿವೆ. ಉಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾದ ಸೇನೆ ಬಹಳ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿದೆ. ಅವರನ್ನು ತಡೆಯಲು ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಕೆ ಮಾಡಬೇಕು ಎಂದು ಉಕ್ರೇನ್ ಈಗಾಗಲೇ ಮನವಿ ಮಾಡಿದೆ.
ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ
ಈ ಕುರಿತಾಗಿ ಏರ್ಬೋರ್ನ್ ಅಸಾಲ್ಟ್ ಪೋರ್ಸ್‌ನ ವಲೆಂಟಿನ್ ಶೆವ್‌ಚೆಂಕೋ ಮಾಹಿತಿ ನೀಡಿದ್ದು, ಕುಪೋಲ್‌ರನ್ನು ಬೆಟಾಲಿಯನ್‌ನ ಕಮಾಂಡ್ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಅವರನ್ನು ಟ್ರೇನಿಂಗ್ ಸೆಂಟರ್‌ನ ಕಮಾಂಡ್ ವಹಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯುದ್ಧ ನಡೆಯುವ ಸಂದರ್ಭದಲ್ಲಿ ವಿದೇಶಿ ಪತ್ರಿಕೆಗೆ ಸಂದರ್ಶನ ನೀಡಲು ಅಗತ್ಯವಾಗಿದ್ದ ಅನುಮತಿಯನ್ನು ಅವರು ಪಡೆದುಕೊಂಡಿಲ್ಲ. ಅದಲ್ಲದೆ, ಸಂದರ್ಶನದಲ್ಲಿ ತರಬೇತಿ ಇಲ್ಲದ ಬೆಟಾಲಿಯನ್ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಯುದ್ಧದಲ್ಲಿ ಉಕ್ರೇನ್ ಹಿನ್ನಡೆ ಕಾಣುತ್ತಿದೆ ಎಂದು ಮಾಹಿತಿ ನೀಡಿದ್ದರು. ಇದಕ್ಕಾಗಿ ಅವರನ್ನು ಹುದ್ದೆಯಿಂದ ಹಿಂಬಡ್ತಿ ನೀಡಲಾಗಿದೆ ಎಂದು ಶೆವ್‌ಚೆಂಕೋ ತಿಳಿಸಿದ್ದಾರೆ.
